ವೆಲ್ಲಿಂಗ್ಟನ್: ಟಿ20 ವಿಶ್ವಕಪ್ ಮುಗಿದ ಬಳಿಕದ ಭಾರತದ ಮೊದಲ ದ್ವಿಪಕ್ಷೀಯ ಸರಣಿಗೆ ಕಾತರಿಸಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯ ಮಳೆಗೆ ಬಲಿಯಾಗಿದೆ.
ವೆಲ್ಲಿಂಗ್ಟನ್ ನ ಸ್ಕೈ ಸ್ಟೇಡಿಯಂನಲ್ಲಿ ಮೊದಲ ಟಿ20 ಪಂದ್ಯ ಆಯೋಜನೆಯಾಗಿತ್ತು. ಆದರೆ ಸತತವಾಗಿ ಸುರಿದ ಭಾರೀ ಮಳೆಯ ಕಾರಣದಿಂದ ಟಾಸ್ ಕೂಡಾ ನಡೆಯದೆ ಪಂದ್ಯ ರದ್ದಾಯಿತು.
ಟಿ20 ವಿಶ್ವಕಪ್ ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಸೆಮಿ ಫೈನಲ್ ನಲ್ಲಿ ಸೋತು ಅಭಿಯಾನ ಅಂತ್ಯಗೊಳಿಸಿದ್ದವು. ಹೀಗಾಗಿ ಇಂದಿನ ಪಂದ್ಯ ಪ್ರಾಮುಖ್ಯತೆ ಪಡೆದಿತ್ತು. ಆದರೆ ಮಳೆರಾಯ ಅದಕ್ಕೆ ಅವಕಾಶ ನೀಡಲಿಲ್ಲ.
ಎರಡು ವರ್ಷಗಳ ಬಳಿಕ ನಡೆಯುವ ಮಂದಿನ ಟಿ20 ಕೂಟವನ್ನು ಗಮನದಲ್ಲಿ ಇಟ್ಟುಕೊಂಡು ಉಭಯ ತಂಡಗಳು ಈ ಸರಣಿಯಲ್ಲಿ ಆಡಲು ಸಿದ್ಧತೆ ನಡೆಸಿದೆ. ಮುಂದಿನ ವಿಶ್ವಕಪ್ ನಲ್ಲಿ ತಂಡದ ನಾಯಕತ್ವ ವಹಿಸಬಹುದಾದ ಹಾರ್ದಿಕ್ ಪಾಂಡ್ಯ ಇದೀಗ ರೋಹಿತ್ ಶರ್ಮ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಮುಂದಿನ ಪಂದ್ಯ ನ.20ರಂದು ಮೌಂಟ್ ಮಂಗುನಯಿಯಲ್ಲಿ ನಡೆಯಲಿದೆ.