ಬೆಂಗಳೂರು: ಉದ್ದಿಮೆ ಸ್ಥಾಪಿಸಲು ಉತ್ಸಾಹ ತೋರಿಸುವವರಿಗೆ ಕೇಂದ್ರ ಸರ್ಕಾರ ರಿಯಾಯ್ತಿ ಹಾಗೂ ಸೌಲಭ್ಯ ಒದಗಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ನಗರದಲ್ಲಿ ಶುಕ್ರವಾರ ಅಸೋಚಾಮ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ (ಎಂ.ಎಸ್.ಎಂ.ಇ) ಮಧ್ಯಮ ಮತ್ತು ಸಣ್ಣ ಉದ್ದಿಮೆಗಳಲ್ಲಿ ಸಾಧನೆಗೈದ ಕೈಗಾರಿಕೋದ್ಯಮಿಗಳಿಗೆ 2017ರ ಟೈಕೂನ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಕೈಗಾರಿಕೆಗಳ ಉತ್ತೇಜನಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ರಿಯಾಯ್ತಿ ಮತ್ತು ಸೌಲಭ್ಯ ನೀಡಬೇಕು. ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸಬೇಕು. ಉದ್ದಿಮೆ ಸ್ಥಾಪಿಸುವುದು ಸುಲಭದ ಕೆಲಸವಲ್ಲ. ಸಮಸ್ಯೆ ಎಷ್ಟಿರುತ್ತೇ ಎಂಬುದು ಕೈಗಾರಿಕೆ ಸ್ಥಾಪನೆ ಮಾಡಿದರಿಗೆ ತಿಳಿದಿರುತ್ತದೆ. ಹೀಗಾಗಿ ಕೈಗಾರಿಕೆ ವೇಗದ ಬೆಳವಣಿಗೆಗೆ ಕೇಂದ್ರ ಸರ್ಕಾರ ವಿವಿಧ ಸೌಲಭ್ಯ ನೀಡಬೇಕು ಎಂದು ಹೇಳಿದರು.
ಅಸೋಚಾಮ್ ಅಧ್ಯಕ್ಷ ಆರ್.ಶಿವಕುಮಾರ್, ಅಸೋಚಾಮ್ ಪದಾಧಿಕಾರಿ ಎಸ್.ಬಾಬು, ಕನ್ಸುಮ್ಯಾಕ್ಸ್ ಬಿಸಿನೆಸ್ ಟೈಕೂನ್ ಅಕಾಡೆಮಿ ಸಂಸ್ಥಾಪಕ ವಿ.ಆರ್.ಸತ್ಯನಾರಾಯಣ, ನಿವೃತ್ತ ಐಎಎಸ್ ಅಧಿಕಾರಿ ಅಶೋಕ್‌ಕುಮಾರ್ ಮನೋಳಿ, ವಾಣಿಜ್ಯತೆರಿಗೆ ಇಲಾಖೆ ಜಂಟಿ ಆಯುಕ್ತ ಮುರುಳಿ ಕೃಷ್ಣ ಮತ್ತಿತರರು ಭಾಗವಹಿಸಿದ್ದರು.
ಕೈಗಾರಿಕೆಗಳಿಂದ ಪರಿಸರಕ್ಕೆ ಹಾನಿಯಾಗಬಾರದು. ಇದರಿಂದ ಜನ ಸಾಮಾನ್ಯರ ಬದುಕಿನ ಮೇಲೂ ನೇರ ಪರಿಣಾಮ ಬೀರಲಿದೆ. ಪರಿಸರ ನಾಶಕ್ಕೆ ಬೆಳ್ಳಂದೂರು ಕೆರೆ ಉದಾಹರಣೆಯಾಗಿದೆ. ಈ ಕೆರೆ ಮಲೀನಗೊಂಡಿರುವುದಕ್ಕೆ ಹಸಿರು ಪೀಠ ಗರಂ ಆಗಿದೆ. ಹೀಗಾಗಿ ಕೈಗಾರಿಕೆಗಳಿಂದ ಪರಿಸರ ನಾಶ ಆಗದಂತೆ ಎಚ್ಚರ ವಹಿಸಬೇಕು.
-ಸಚಿವ ರಾಮಲಿಂಗಾರೆಡ್ಡಿ