Advertisement

ಉದ್ಯೋಗ ಸೃಜನೆಗೆ ಕೈಗಾರಿಕೆ ನೀತಿ ಪೂರಕ

02:22 PM Jan 28, 2022 | Team Udayavani |

ಬೀದರ: ಹೊಸ ಕೈಗಾರಿಕಾ ನೀತಿಯಲ್ಲಿ ನೂತನ ಕೈಗಾರಿಕೆಗಳು ಮತ್ತು ಉದ್ಯಮಶೀಲತೆ ಬಗ್ಗೆ ಒತ್ತು ನೀಡಲಾಗಿದೆ. ಇಲ್ಲಿವರೆಗೆ ಸುಮಾರು 20 ಕೈಗಾರಿಕಾ ನೀತಿಗಳು ಜಾರಿಯಾಗಿದ್ದು ಇದರ ಉದ್ದೇಶ ಉದ್ಯೋಗ ಸೃಜನೆಯೇ ಆಗಿದೆ. ಸ್ಥಳೀಯ ಸಂಪನ್ಮೂಲ ಬಳಸಿ ವಸ್ತುಗಳ ಉತ್ಪಾದನೆ, ತಂತ್ರಜ್ಞಾನ ವರ್ಗಾವಣೆಗೆ ಒತ್ತು ನೀಡಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮುನೋಳಿ ಹೇಳಿದರು.

Advertisement

ನಗರದ ಸಹಾರ್ದ ಸಂಸ್ಥೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಆಶ್ರಯದಲ್ಲಿ ನಡೆದ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಮತ್ತು ನೂತನ ಕೈಗಾರಿಕಾ ನೀತಿ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬೀದರ ಜಿಲ್ಲೆಯಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಉತ್ತಮ ಅವಕಾಶಗಳಿವೆ ಎಂದರು.

ಬೀದರಗೆ ಇತ್ತೀಚ್ಚಿನ ನೀತಿಗಳಲ್ಲಿ ಹೆಚ್ಚು ಮಹತ್ವ ನೀಡಲಾಗಿದೆ. ಸರ್ಕಾರದ ಕೈಗಾರಿಕಾ ನಿವೇಶನಗಳನ್ನು ಪಡೆದು ಯಾರು ಬೇಕಾದರೂ ಇಲ್ಲಿ ಕೈಗಾರಿಕೆ ಸ್ಥಾಪಿಸಬಹುದು. ಇದಕ್ಕಾಗಿ ಜಿಲ್ಲೆಯಲ್ಲಿ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಕೈಗಾರಿಕ ಪ್ರದೇಶಗಳ ಅಭಿವೃದ್ಧಿ ಮಂಡಳಿಗಳು ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುತ್ತಿವೆ. ಒಟ್ಟು 1,800 ಎಕರೆ ಭೂಮಿಯನ್ನು ಬೀದರನ ಕೋಳಾರ, ಅಟೋನಗರ ಮತ್ತು ಹುಮನಾಬಾದನಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಔರಾದನಲ್ಲಿ 100 ಎಕರೆ, ಹುಮನಾಬಾದನಲ್ಲಿ 300 ಎಕರೆ ಕೈಗಾರಿಕಾ ಪ್ರದೇಶಕ್ಕಾಗಿ ಪ್ರಸ್ತಾವನೆ ಜಾರಿಯಲ್ಲಿದೆ ಎಂದರು.

ಜಿಲ್ಲೆಯಲ್ಲಿ 13 ಬೃಹತ್‌ ಕೈಗಾರಿಕೆಗಳಿದ್ದರೆ, ಮಧ್ಯಮ ಕೈಗಾರಿಕೆಗಳು 8 ಇವೆ. ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳು 1982 ಇವೆ. ಒಟ್ಟು ರೂ 18000 ಕೋಟಿ ಬಂಡವಾಳ ಹೂಡಲಾಗಿದ್ದು 24,600 ಜನರಿಗೆ ಉದ್ಯೋಗ ನೀಡಲಾಗಿದೆ. ಒಟ್ಟು 1 ಲಕ್ಷ ಕೋಟಿ ಬಂಡವಾಳ ಆಕರ್ಷಿಸುವ ಗುರಿ ಹೊಂದಲಾಗಿದ್ದು, ಸ್ಥಳೀಯ ಜನರಿಗೆ ಹೆಚ್ಚಿನ ಉದ್ಯೋಗವಕಾಶ ನೀಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಜನರು ಮುಂದೆ ಬಂದು ಸರ್ಕಾರದ ಸೌಲಭ್ಯ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸಣ್ಣ ಕೈಗಾರಿಕಾ ಸಂಘಗಳ ಅಧ್ಯಕ್ಷ ಶಿವರಾಜ ಹಲಶೆಟ್ಟಿ ಮತ್ತು ಜಿಲ್ಲಾ ಎಸ್‌ಸಿ-ಎಸ್‌ಟಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ಪಿ. ವಿಜಯಕುಮಾರ ಮಾತನಾಡಿದರು. ಅಧಿ ಕಾರಿಗಳಾದ ಪ್ರಕಾಶ ದೇವಿದಾಸ, ಬಸವರಾಜ, ರಾಜಕುಮಾರ ಪಾಟೀಲ ಸೇರಿದಂತೆ ಆಸಕ್ತ ಉದ್ದಿಮೆದಾರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next