Advertisement

ಕೈಗಾರಿಕೆಗಳು ಬುಡಮೇಲು; ಕಾರ್ಮಿಕರು ಕಂಗಾಲು!

09:36 AM Mar 29, 2020 | Sriram |

ಮಂಗಳೂರು: ಜಗತ್ತಿನಾದ್ಯಂತ ಕೋವಿಡ್‌ 19 ಮಹಾಮಾರಿ ದಾಂಗುಡಿ ಇಡುತ್ತಿರುವಂತೆಯೇ ಕರಾವಳಿಯ ಆರ್ಥಿಕ ಶಕ್ತಿಯಾಗಿರುವ ವಿವಿಧ ಕೈಗಾರಿಕೆಗಳು ಇದೀಗ ಸಂಪೂರ್ಣ ಬಂದ್‌ ಆಗಿ ಇದರಲ್ಲಿ ದುಡಿಯುತ್ತಿರುವ ಲಕ್ಷಾಂತರ ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ.

Advertisement

ಮಂಗಳೂರಿನ ಬೈಕಂಪಾಡಿ ಸೇರಿದಂತೆ ದ.ಕ. ಹಾಗೂ ಉಡುಪಿ ಜಿಲ್ಲೆಯ ಕಿರು, ಸಣ್ಣ, ಮಧ್ಯಮ ಹಾಗೂ ಬೃಹತ್‌ ಕೈಗಾರಿಕೆಗಳು ಬಂದ್‌ ಆಗಿವೆ. ಉದ್ಯೋಗಿಗಳ ಪೈಕಿ ಬಹುತೇಕ ಮಂದಿ ಕರಾವಳಿ ಭಾಗದವರೇ ಆಗಿದ್ದರೆ, ಉಳಿದವರು ಹೊರಜಿಲ್ಲೆ- ಹೊರರಾಜ್ಯದವರಾಗಿದ್ದಾರೆ. ಬಹುತೇಕ ಕಾರ್ಮಿಕರು ಮನೆಗೆ ಹೋಗಿದ್ದರೆ, ಸಾವಿರಾರು ಕಾರ್ಮಿಕರು ಕೈಗಾರಿಕೆಗಳ ಪರಿಸರದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಅತ್ತ ಕೆಲಸವೂ ಇಲ್ಲ; ಇತ್ತ ಊರಿಗೂ ಹೋಗದಂತಹ ಪರಿಸ್ಥಿತಿಯಿದೆ. ಮೊದಲೇ ಆರ್ಥಿಕ ಹೊಡೆತದಿಂದ ನೂರಾರು ಸಮಸ್ಯೆ ಎದುರಿಸುತ್ತಿದ್ದ ಕರಾವಳಿಯ ಕೈಗಾರಿಕೆಗಳ ಮಾಲಕರಿಗೆ ಲಾಕ್‌ಡೌನ್‌ನಿಂದಾಗಿ ಸಾವಿರಾರು ಕೋ.ರೂ. ನಷ್ಟವಾಗುತ್ತಿದೆ.

ಕೋವಿಡ್‌ 19 ಆತಂಕ ಶೀಘ್ರದಲ್ಲಿ ದೂರವಾಗದೆ ಹೋದರೆ ಕೈಗಾರಿಕೆಗಳ ಮಾಲಕರು ಹಾಗೂ ಕಾರ್ಮಿಕರಿಗೆ ಉಪಯೋಗವಾಗಬಹುದು. ಆದರೆ ಇನ್ನೂ ಹಲವು ದಿನ ಬಂದ್‌ ಆದರೆ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆಯಿದೆ.

ಕೈಗಾರಿಕಾ ಇಲಾಖೆಯ ಮಾಹಿತಿ ಪ್ರಕಾರ ದ.ಕ. ಜಿಲ್ಲೆಯಲ್ಲಿ ಆಹಾರ, ಕೃಷಿ ಆಧಾರಿತ 2,507 ಕೈಗಾರಿಕೆಗಳಿದ್ದು 24,452 ಉದ್ಯೋಗಿಗಳು ಅವುಗಳಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಸದ್ಯ ಕೋವಿಡ್‌ 19 ಇದ್ದರೂ ಆವಶ್ಯಕ ವಸ್ತುಗಳ ಪೈಕಿ ಆಹಾರ ಉತ್ಪನ್ನಗಳಿಗೆ ಅವಕಾಶವಿರುವ ಹಿನ್ನೆಲೆಯಲ್ಲಿ ಇದರಲ್ಲಿ ಕೆಲವು ಕೈಗಾರಿಕೆಗಳು ಕಾರ್ಯಾಚರಿಸುತ್ತಿವೆ. ಆದರೆ ಅಲ್ಲಿಗೆ ಕಾರ್ಮಿಕರು ಬರಲು ಸಮಸ್ಯೆಯಾಗುತ್ತಿದೆ. ಇದಕ್ಕಾಗಿ ಕಾರ್ಮಿಕರಿಗೆ ವಿಶೇಷ ವಿನಾಯಿತಿ ನೀಡುವಂತೆ ಕೈಗಾರಿಕೆಗಳ ಪ್ರಮುಖರು ಈಗಾಗಲೇ ಜಿಲ್ಲಾಡಳಿತವನ್ನು ಕೋರಿದ್ದಾರೆ.

ಉಳಿದಂತೆ, ದ.ಕ ಜಿಲ್ಲೆಯಲ್ಲಿ ರೆಡಿಮೆಡ್‌ ಗಾರ್ಮೆಂಟ್ಸ್‌, ಟೆಕ್ಸ್‌ಟೈಲ್ಸ್‌ನ 3,179 ಘಟಕಗಳು ಇದ್ದು 15,828 ಉದ್ಯೋಗಿಗಳು, ಮರ ಆಧಾರಿತ ಪೀಠೊಪಕರಣದ 2,818 ಘಟಕಗಳಲ್ಲಿ 13,074 ಕಾರ್ಮಿಕರು, ಕಾಗದ, ಅದರ ಉತ್ಪನ್ನಗಳ 874 ಘಟಕಗಳಲ್ಲಿ 2,974 ಉದ್ಯೋಗಿಗಳು, ಚರ್ಮ ಆಧಾರಿತ 464 ಘಟಕಗಳಲ್ಲಿ 893 ಉದ್ಯೋಗಿಗಳು, ಪ್ಲಾಸ್ಟಿಕ್‌, ಕೆಮಿಕಲ್‌ ಆಧಾರಿತ 936 ಘಟಕಗಳಲ್ಲಿ 4,772 ಉದ್ಯೋಗಿಗಳು, ಖನಿಜ ಆಧಾರಿತ 240 ಘಟಕಗಳಲ್ಲಿ 3,083 ಉದ್ಯೋಗಿಗಳು, ಲೋಹ ಆಧಾರಿತ (ಸ್ಟೀಲ್‌) 1,865 ಘಟಕಗಳಲ್ಲಿ 10,003 ಉದ್ಯೋಗಿಗಳು, ತಾಂತ್ರಿಕ ಕಾರ್ಯದ 555 ಘಟಕಗಳಲ್ಲಿ 4,805 ಉದ್ಯೋಗಿಗಳು, ಎಲೆಕ್ಟ್ರಿಕಲ್‌ ಮೆಷಿನರಿ ಹಾಗೂ ಟ್ರಾನ್ಸ್‌ಪೊàರ್ಟ್‌ನ 920 ಘಟಕಗಳ 1,573 ಉದ್ಯೋಗಿಗಳು, ರಿಪೇರಿ ಹಾಗೂ ಸರ್ವಿಸಿಂಗ್‌ನ 3,525 ಘಟಕಗಳಲ್ಲಿ 16,672 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದರು. ಇವರೆಲ್ಲ ಈಗ ಕೆಲಸವಿಲ್ಲದೆ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ.

Advertisement

ಸದ್ಯ ಕೋವಿಡ್‌ 19 ವೈರಸನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಸರಕಾರದ ಪ್ರಯತ್ನಕ್ಕೆ ನಾವೆಲ್ಲ ಬೆಂಬಲಿಸಬೇಕಿದೆ. ಅದು ನಿವಾರಣೆಯಾದರೆ ಎಲ್ಲವೂ ಸಹಜ ಸ್ಥಿತಿಗೆ ಬರಲಿವೆ. ಬಳಿಕ ಕೈಗಾರಿಕೆಗಳ ಪರವಾಗಿ ಸರಕಾರ ಸೂಕ್ತ ಬೆಂಬಲ ನೀಡುವ ಆಶಾಭಾವನೆಯಿದೆ.
– ಐಸಾಕ್‌ ವಾಸ್‌, ಅಧ್ಯಕ್ಷರು, ಕೆಸಿಸಿಐ

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next