Advertisement
ಕಳೆದೆರಡು ವಾರಗಳಿಂದ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ನಗರದ ಕೈಗಾರಿಕೆಗಳು ಸ್ತಬ್ಧಗೊಂಡಿವೆ. ಇದರೊಂದಿಗೆ ಕೆರೆ-ಕುಂಟೆಗಳಿಗೆ ಸೇರ್ಪಡೆಯಾಗುತ್ತಿದ್ದ ರಾಸಾಯನಿಕ ತಾಜ್ಯ ನೀರು ಕೂಡ ಸ್ಥಗಿತಗೊಂಡಿದೆ. ಪರಿಣಾಮ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಯಾವುದೇ ಪ್ರಯತ್ನವಿಲ್ಲದೆ, ಕೆರೆಗಳಿಗೆ ಸೇರಲ್ಪಡುವ ತ್ಯಾಜ್ಯನೀರು ಅರ್ಧಕ್ಕರ್ಧಕಡಿಮೆಯಾಗಿದೆ. ಪೂರ್ವ ಮುಂಗಾರು ಕೂಡ ಆಗಮಿಸುತ್ತಿರು ವುದರಿಂದ ಸ್ಥಳೀಯ ಸಂಸ್ಥೆಗಳು ಮನಸ್ಸು ಮಾಡಿದರೆ ಕೆರೆನೀರು ಮತ್ತಷ್ಟು ಶುದ್ಧಗೊಳ್ಳಲು ಸಾಧ್ಯವಿದೆ ಎಂದು ತಜ್ಞರ ಅಭಿಮತವಾಗಿದೆ.
Related Articles
Advertisement
ಸಿಗದ ಸಹಕಾರ: ವೃಷಭಾವತಿ ನದಿಗೆ ಸೇರುತ್ತಿದ್ದ ಕೊಳಚೆ ನೀರು ಪ್ರಮಾಣ ಕಡಿಮೆಯಾಗಿದೆ. ಸದ್ಯ ನೀರಿನ ಕಲುಷಿತ ಪ್ರಮಾಣ ತಿಳಿದುಕೊಳ್ಳಲು ಪ್ರಯೋಗಾ ಲಯಗಳು ತೆಗೆದಿಲ್ಲ. ನೀರು ಸಂಗ್ರಹಿಸಿಕೊಂಡಿದ್ದೇವೆ. ಕೊಳಚೆ ನೀರು ಕೆರೆ ಹಾಗೂ ನದಿಗಳನ್ನು ಸೇರುವುದನ್ನು ತಡೆಯುವುದಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ನಿರೀಕ್ಷಿತ ಪ್ರಮಾಣದಲ್ಲಿ ಸಹಕಾರ ನೀಡುತ್ತಿಲ್ಲ’ ಎಂದು ನಮಾಮಿ ವೃಷಭಾವತಿ ಟ್ರಸ್ಟಿ ನಿವೇದಿತಾ ಸುಂಕದ ಬೇಸರ ವ್ಯಕ್ತಪಡಿಸುತ್ತಾರೆ.
“ಖಂಡಿತ ಅಧ್ಯಯನ ಮಾಡಬಹುದಿತ್ತು. ಆದರೆ, ಸ್ಥಳೀಯ ಸಂಸ್ಥೆಗಳಿಗೆ ಈ ಬಗ್ಗೆ ಗಮನವೇ ಇಲ್ಲ. ಅವರೆಲ್ಲಾ ಕೋವಿಡ್-19ರಲ್ಲಿ ಮುಳುಗಿವೆ. ಲಾಕ್ ಡೌನ್ ಮುಗಿಯುತ್ತಿದ್ದಂತೆ ಅಭಿವೃದ್ಧಿಯತ್ತ ಚಿತ್ತ ಹರಿಸುತ್ತವೆ. ಬೆನ್ನಲ್ಲೇ ಮಾಲಿನ್ಯವೂ ಯಥಾಸ್ಥಿತಿಗೆ ಮರಳುತ್ತದೆ. ಕೊನೆಪಕ್ಷ ಕೋವಿಡ್ 19 ವೈರಸ್ ಹಾವಳಿ ಮುಗಿದ ನಂತರವಾದರೂ ಸುಸ್ಥಿರ ಅಭಿವೃದ್ಧಿಗೆ ಸರ್ಕಾರಗಳು ಒತ್ತುನೀಡುವ ಅವಶ್ಯಕತೆ ಇದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಸುಸ್ಥಿರ ತಂತ್ರಜ್ಞಾನಗಳ ಕೇಂದ್ರದ ಪ್ರಾಧ್ಯಾಪಕ ಡಾ.ಎನ್.ಎಚ್. ರವೀಂದ್ರನಾಥ್ ತಿಳಿಸುತ್ತಾರೆ.
ಅವಕಾಶ ಕೈಚೆಲ್ಲುತ್ತಿರುವ ಮಂಡಳಿ? : ವಾಯುಮಾಲಿನ್ಯದಂತೆಯೇ ಜಲಮಾಲಿನ್ಯದ ಪ್ರಮಾಣ ಮತ್ತು ಅದರ ಮೂಲವನ್ನು ಕಂಡುಕೊಳ್ಳಲು ಮಾಲಿನ್ಯ ನಿಯಂತ್ರಣ ಮಂಡಳಿಗೆ ಇದು ಸಕಾಲವಾಗಿತ್ತು. ಆದರೆ, ಈ ಅವಕಾಶವನ್ನು ಮಂಡಳಿ ಕೈಚೆಲ್ಲಿದೆ ಎಂದು ತಜ್ಞರು ಹೇಳುತ್ತಾರೆ. ನಗರದ ಹಲವು ಕೆರೆ, ನದಿಗಳು ಈಗಾಗಲೇ ಅವನತಿ ಹೊಂದಿವೆ. ಕೆಲವು ಇದ್ದು, ಇಲ್ಲದಂತಾಗಿದೆ. ಇವುಗಳಲ್ಲಿ ಬೆಳ್ಳಂದರೂ, ವರ್ತೂರು ಕೆರೆ ಹಾಗೂ ವೃಷಭಾವತಿ ನದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿವೆ. ಅವುಗಳ ಮಾಲಿನ್ಯದಲ್ಲಿ ಕೈಗಾರಿಕೆಗಳ ಪಾಲು ಎಷ್ಟು ಎಂಬುದನ್ನು ಈಗ ಅಧ್ಯಯನದಿಂದ ತಿಳಿಯಬಹುದಾಗಿದೆ. ಲಾಕ್‌ಡೌನ್ ಸಂದರ್ಭಕ್ಕಿಂತ ಮೊದಲಿನ ಅಂಕಿ-ಅಂಶಗಳು ಈಗಾಗಲೇ ಮಂಡಳಿ ಬಳಿ ಲಭ್ಯ. ಪ್ರಸ್ತುತ ಸ್ಥಿತಿಯನ್ನು ಪಡೆದು ಹೋಲಿಕೆ ಮಾಡಿದರೆ, ಮನೆ ಮತ್ತು ಕೈಗಾರಿಕೆಗಳ ಪಾತ್ರ ತಿಳಿಯಬಹುದು.
ನಿರ್ದಿಷ್ಟವಾಗಿ ಕಾರ್ಖಾನೆ ಹಾಗೂ ಕೈಗಾರಿಕೆಗಳಿಂದ ರಾಜಕಾಲುವೆಗೆ ಕಲುಷಿತ ನೀರು ಸೇರುತ್ತಿರುವ ಬಗ್ಗೆ ಯಾರಾದರು ದೂರು ನೀಡಿದರೆ, ಕ್ರಮ ತೆಗೆದುಕೊಳ್ಳುತ್ತೇವೆ. ಕಲುಷಿತ ನೀರು ಎಸ್‌ಟಿಪಿಗೆ ಹೋಗಬೇಕು. ಇದರಲ್ಲಿ ಲೋಪವಾದರೆ, ಜಲಮಂಡಳಿ ಕ್ರಮಕೈಗೊಳ್ಳಲಿದೆ. -ಬಸವರಾಜ್ ವಿ.ಪಾಟೀಲ, ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ
– ಹಿತೇಶ್ ವೈ