Advertisement
ಮಂಗಳೂರು: ದಕ್ಷಿಣ ಕನ್ನಡವು ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಆಧಾರಿತ ಜಿಲ್ಲೆ. ಭತ್ತ, ಅಡಿಕೆ, ಕೊಕ್ಕೊ, ತೆಂಗು, ಕಾಳುಮೆಣಸು, ರಬ್ಬರ್, ಹಣ್ಣು ಹಂಪಲು, ತರಕಾರಿ ಪ್ರಮುಖ ಬೆಳೆಗಳು. ಪ್ರಸ್ತುತ ಕೊರೊನಾ ಕೃಷಿ ಕ್ಷೇತ್ರವನ್ನೂ ಬಾಧಿಸಿದೆ. ಹಣ್ಣು ಹಂಪಲು ಹಾಗೂ ತರಕಾರಿ, ತೆಂಗು ಬೆಳೆಗಳ ಮೇಲೆ ಹೆಚ್ಚು ಪರಿಣಾಮ ಬೀರಿದೆ.
Related Articles
Advertisement
ಕ್ಯಾಂಪ್ಕೊ ಸಂಸ್ಥೆಯಿಂದ ಪ್ರಸ್ತುತ ಹಳೆ ಅಡಿಕೆ ಸರಿಸುಮಾರು ಕಿಲೋಗೆ 300ರಿಂದ 320 ರೂ. ಹಾಗೂ ಹೊಸ ಅಡಿಕೆ ಸುಮಾರು 280ರಿಂದ 300 ರೂ.ಗಳಲ್ಲಿ ಖರೀದಿಸಲಾಗುತ್ತಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಇದೇ ಮಾರುಕಟ್ಟೆ ಸ್ಥಿರತೆಯನ್ನು ಕಾಯ್ದುಕೊಳ್ಳುವ ಸವಾಲು ಅಡಿಕೆ ಬೆಳೆಯ ಮುಂದಿದೆ.
ಕೊಕ್ಕೊಗೆ ಕಳೆದ ಸಾಲಿಗೆ ಹೋಲಿಸಿದರೆ ಕಿಲೋವೊಂದಕ್ಕೆ ಸುಮಾರು 10ರಿಂದ 20 ರೂ. ಕಡಿಮೆ ಇದೆ. ಹಸಿ ಕೊಕ್ಕೊವನ್ನು ಕಿಲೋಗೆ 50 ರೂ. ಹಾಗೂ ಒಣ ಕೊಕೊವನ್ನು ಕಿಲೋಗೆ 175 ರೂ.ಗಳಲ್ಲಿ ಖರೀದಿಸಲಾಗುತ್ತಿದೆ. ಕಳೆದ ಬಾರಿ ಹಸಿ ಕೊಕ್ಕೊಗೆ 80 ರೂ. ವರೆಗೆ ದರ ಇತ್ತು.
ತೆಂಗು ಬೆಳೆಗೆ ಕೋವಿಡ್ 19ನಿಂದಾಗಿ ಸಮಸ್ಯೆಯಾಗಿದೆ. ಜಿಲ್ಲೆಯಲ್ಲಿ ಸುಮಾರು 45 ಲಕ್ಷ ತೆಂಗಿನ ಮರಗಳಿವೆ. ಕೇಂದ್ರ ಸರಕಾರ ಕೊಬ್ಬರಿಗೆ ಬೆಂಬಲ ಬೆಲೆ ಇನ್ನೂ ಪ್ರಕಟಿಸಿಲ್ಲ. ಪ್ರಕಟಿಸಿದರೂ ಖರೀದಿ ಕೇಂದ್ರ ದ.ಕ. ಜಿಲ್ಲೆಯಲ್ಲಿಲ್ಲ. ಲಾಕ್ ಡೌನ್‌ನಿಂದಾಗಿ ತೆಂಗಿನಕಾಯಿಗೆ ಮಾರುಕಟ್ಟೆ ಸಮಸ್ಯೆ ಸೃಷ್ಟಿಯಾಗಿದೆ. ತೆಂಗಿನಕಾಯಿ ಮಾರಲಾಗದೆ ಕಡಿಮೆ ಬೆಲೆಗೆ ಮಾರಾಟ ಮಾಡಿ ರೈತರು ಆರ್ಥಿಕ ನಷ್ಟವನ್ನು ಅನುಭವಿಸಿದ್ದಾರೆ. ಮಾರಾಟ ಸಮಸ್ಯೆ ಮತ್ತು ದರ ಕುಸಿತದಿಂದಾಗಿ ಗೇರು ಬೆಳೆಗಾರರು ಕೂಡ ಸಮಸ್ಯೆ ಎದುರಿಸಿದ್ದಾರೆ. ಕೋವಿಡ್ 19ನಿಂದಾಗಿ ಮಾರುಕಟ್ಟೆ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಗೇರುಬೀಜ ಮಾರಾಟ ಸಾಧ್ಯವಾಗಿರಲಿಲ್ಲ. ಕಳೆದ ಬಾರಿ ಕಿಲೋಗೆ 120 ರೂ. ವರೆಗೆ ಇದ್ದ ದರ ಈ ಬಾರಿ 70ರಿಂದ 80 ರೂ.ಗೆ ಇಳಿದಿತ್ತು. ಮಳೆಗಾಲ ಆರಂಭವಾಗಿದ್ದು ಭತ್ತ ಕೃಷಿ ಕಾರ್ಯ ನಡೆಯುತ್ತಿದೆ. ಆದರೆ ಕೋವಿಡ್ 19ನಿಂದಾಗಿ ರೈತರು ಆರ್ಥಿಕ ಸಂಕಷ್ಟದಲ್ಲಿದ್ದು ಸರಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲೆಯಲ್ಲಿ 2019-20ನೇ ಸಾಲಿನ ಖಾರಿಫ್‌ನಲ್ಲಿ (ಮುಂಗಾರು) 10,411 ಹೆಕ್ಟೇರ್‌ನಲ್ಲಿ ಹಾಗೂ ರಬಿಯಲ್ಲಿ (ಹಿಂಗಾರು) 2486 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ತರಕಾರಿ, ಹಣ್ಣು ಹಂಪಲುಗಳಿಗೆ ನೆರವು ಅಗತ್ಯವಿದೆ. ಜಿಲ್ಲೆಯಲ್ಲಿ ಅನಾನಾಸು, ಮಾವು, ಪಪ್ಪಾಯಿ ಕಲ್ಲಂಗಡಿ, ಬಾಳೆ, ಹಲಸು, ಚಿಕ್ಕು ಸೇರಿದಂತೆ ಸುಮಾರು 1 ಲಕ್ಷ ಮೆ.ಟನ್ ಹಣ್ಣು ಹಂಪಲು ಬೆಳೆಸಲಾಗುತ್ತಿದೆ. ಇದಲ್ಲದೆ ಸಿಹಿ ಕುಂಬಳ, ಸೊಪ್ಪು, ಬೂದು ಕುಂಬಳ, ಹೀರೆಕಾಯಿ, ತೊಂಡೆಕಾಯಿ ಮುಂತಾದ ತರಕಾರಿಗಳ ಬೆಳೆಯೂ ಇದೆ. ಕೋವಿಡ್ 19ನಿಂದಾಗಿ ಮಾರುಕಟ್ಟೆಯ ಕೊರತೆ ಸೃಷ್ಟಿಯಾಗಿ ಬೆಳೆಗಾರರು ಕಡಿಮೆ ಬೆಲೆಗೆ ಮಾರಿದ್ದಾರೆ. ಬಹಳಷ್ಟು ಹಣ್ಣುಗಳು ಹಾಳಾಗಿವೆ. ಅವುಗಳನ್ನು ಸಂಗ್ರಹಿಸಿಡಲು ನಮ್ಮ ಜಿಲ್ಲೆಯಲ್ಲಿ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಮುಖ್ಯ ಕಾರಣ. ರಾಜ್ಯಸರಕಾರ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಒಂದು ಹೆಕ್ಟೇರ್‌ಗೆ ಗರಿಷ್ಠ 15,000 ರೂ. ಹಾಗೂ ತರಕಾರಿ ಬೆಳೆಗಾರರಿಗೂ ನೆರವಿನ ಪ್ಯಾಕೇಜ್ ಘೋಷಿಸಿದೆ. ಕೇಂದ್ರ ಸರಕಾರವೂ ಕೃಷಿ ಮೂಲಸೌಕರ್ಯಕ್ಕೆ 1 ಲಕ್ಷ ಕೋ.ರೂ. ಘೋಷಿಸಿದೆ. ಹಣ್ಣು, ತರಕಾರಿಗಳ ಮಾರುಕಟ್ಟೆ, ಸಂಗ್ರಹಾಗಾರ, ಶೈತ್ಯಾಗಾರ ವ್ಯವಸ್ಥೆಗೆ ಶೇ. 50 ಸಬ್ಸಿಡಿ, ಹೆಚ್ಚುವರಿ ಇದ್ದಲ್ಲಿಂದ ಕೊರತೆ ಇರುವ ಮಾರುಕಟ್ಟೆಗಳಿಗೆ ಹಣ್ಣು, ತರಕಾರಿ ಸಾಗಾಟಕ್ಕೆ ಶೇ. 50 ಸಬ್ಸಿಡಿ, ಅಪರೇಷನ್ ಗ್ರೀನ್ ಎಲ್ಲ ಹಣ್ಣು, ತರಕಾರಿಗಳಿಗೆ ವಿಸ್ತರಣೆ, ರೈತ ಉತ್ಪಾದಕ ಸಂಘ, ಸ್ವಸಹಾಯ ಸಂಘಗಳಿಗೆ ನೆರವು ಸೇರಿದಂತೆ ಹಲವು ಪ್ರೋತ್ಸಾಹಕ ಕ್ರಮಗಳನ್ನು ಪ್ರಕಟಿಸಿದೆ. ಇದಲ್ಲದ ರೈತರು ಆಕರ್ಷಕ ಬೆಲೆ ಇರುವಲ್ಲಿ ಬೆಳೆ ಒಯ್ದು ಮಾರಾಟ ಮಾಡಲು ಅವಕಾಶ ಮತ್ತು ಅಂತಾರಾಜ್ಯ ನಿರ್ಬಂಧ ರದ್ದು, ಇ-ಟ್ರೇಡಿಂಗ್‌ಗೆ ಉತ್ತಮ ವೇದಿಕ ಮುಂತಾದ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಘೋಷಿಸಿದೆ. ಇವುಗಳು ರೈತರಿಗೆ ಪಾಲಿಗೆ ಒಂದಷ್ಟು ಆಶಾದಾಯಕವಾಗಬಹುದು. ಸರಕಾರದಿಂದ ಏನನ್ನು ನಿರೀಕ್ಷಿಸುತ್ತಿದ್ದೇವೆ?
– ಅಡಿಕೆ ಬೆಲೆ ಸ್ಥಿರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು. ಬೆಲೆ ಕುಸಿತ ಸಂದರ್ಭಗಳಲ್ಲಿ ಕ್ಯಾಂಪ್ಕೊ ಅಥವಾ ಮಾಸ್ ಮುಂತಾದ ಸಂಸ್ಥೆಗಳು ರೈತರಿಂದ ಅಡಿಕೆ ಖರೀದಿಸುವ ವೇಳೆ ಬೆಂಬಲ ಬೆಲೆಯಲ್ಲಿನ ವ್ಯತ್ಯಾಸ ದರವನ್ನು ಸರಕಾರ ನೇರವಾಗಿ ರೈತರ ಖಾತೆಗೆ ಜಮೆ ಮಾಡಬೇಕು. – ಭತ್ತದ ಬೆಳೆಗೆ ಪೂರಕ ಪ್ಯಾಕೇಜ್ ಘೋಷಿಸಬೇಕು. ಭತ್ತಕ್ಕೆ ಈ ಹಿಂದೆ ಘೋಷಿಸಿರುವ ಬೆಂಬಲ ಬೆಲೆ ಕೃಷಿಯ ವೆಚ್ಚವನ್ನು ಗಮನಿಸಿದರೆ ಪೂರಕವಾಗಿಲ್ಲ. ಅದುದರಿಂದ ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ ಇದನ್ನು ಹೆಚ್ಚಿಸಬೇಕು. – ತೆಂಗು ಬೆಳೆಗಾರರೂ ಸಂಕಷ್ಟದಲ್ಲಿದ್ದು ಕೊಬ್ಬರಿಗೆ ಕೂಡಲೇ ಬೆಂಬಲ ಬೆಲೆ ಘೋಷಿಸಬೇಕು. ದ.ಕ. ಜಿಲ್ಲೆಯಲ್ಲೂ ನಾಪೆಡ್ ಮೂಲಕ ಕೊಬ್ಬರಿ ಖರೀದಿ ಕೇಂದ್ರ ತೆರೆಯಬೇಕು. – ಹಣ್ಣು, ತರಕಾರಿಗಳ ಖರೀದಿ ಮತ್ತು ಮಾರುಕಟ್ಟೆಗೆ ಕೆಎಂಎಫ್ ಮಾದರಿಯಲ್ಲಿ ರೈತರ ಸಹಕಾರಿ ಸಂಸ್ಥೆಯನ್ನು ಹುಟ್ಟು ಹಾಕುವ ಚಿಂತನೆ ನಡೆಯಬೇಕು. ಗ್ರಾಮ ಮಟ್ಟದಲ್ಲಿ ಇದರ ಕಾರ್ಯಜಾಲಗಳನ್ನು ವಿಸ್ತರಿಸಿ ತರಕಾರಿಗಳನ್ನು ಸಂಗ್ರಹಿಸಿ ಕೇಂದ್ರ ಸ್ಥಾನಕ್ಕೆ ತಂದು ಹಾಲಿನ ಮಾದರಿಯಲ್ಲೇ ಮಾರುಕಟ್ಟೆ ಮಾಡಬೇಕು ಹಾಗೂ ಶೈತ್ಯಗಾರಗಳನ್ನು ಸ್ಥಾಪಿಸಬೇಕು. – ಅಡಿಕೆ, ತೆಂಗು, ಹಣ್ಣು ಹಂಪಲುಗಳ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ನೆರವು ನೀಡಬೇಕು. ಕೃಷಿಗೆ ಹೆಚ್ಚು ಒತ್ತು ಅಗತ್ಯ
ಕೋವಿಡ್ 19ನಿಂದ ರೈತವರ್ಗ ಸಂಕಷ್ಟದಲ್ಲಿದೆ. ಅವರಿಗೆ ಶಕ್ತಿ ತುಂಬುವ ಕೆಲಸ ಆಗಬೇಕು. ಕೃಷಿಯಲ್ಲಿ ಲಾಭವಿದೆ ಎಂಬ ಭರವಸೆಯನ್ನು ಯುವಜನತೆಯಲ್ಲಿ ತುಂಬಿದಾಗ ಅವರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಉದ್ಯೋಗವೂ ಸೃಷ್ಟಿಯಾಗುತ್ತದೆ.
– ಸಂಪತ್ ಸಾಮ್ರಾಜ್ಯ, ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರು – ಉದಯವಾಣಿ ಅಧ್ಯಯನ ತಂಡ