Advertisement
ಇದು, 2020-21ನೇ ಸಾಲಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಡಿಸಿದ ಬಜೆಟ್‌ನ ಹೈಲೈಟ್ಸ್!. ಹೂಡಿಕೆ ಆಕರ್ಷಣೆಗೆ ಹೊಸ ಕೈಗಾರಿಕಾ ನೀತಿ ಜಾರಿ, ಹೂಡಿಕೆದಾರರ ಸಮಾವೇಶ ಆಯೋಜನೆ. “ಕಾಯರ್ ಎಕ್ಸ್ ಪೀರಿಯನ್ಸ್ ಸೆಂಟರ್’ ಸ್ಥಾಪನೆ, ತಿಪಟೂರನ್ನು “ತೆಂಗು ಆಧಾರಿತ ಕೈಗಾರಿಕಾ ಪಾರ್ಕ್’ ಆಗಿ ಅಭಿವೃದ್ಧಿ ಜತೆಗೆ ಹೂಡಿಕೆಗೆ ಆಕರ್ಷಿಸಲು ಕಾನೂನಿಗೆ ಅಗತ್ಯ ತಿದ್ದುಪಡಿ ತರುವ ಭರವಸೆಯನ್ನೂ ನೀಡಿದ್ದಾರೆ.
Related Articles
Advertisement
“ಪವರ್‌ಟೆಕ್ಸ್ ಇಂಡಿಯಾದ ನೂಲು ನಿಧಿ ಯೋಜನೆ’ಯಡಿ ಕೇಂದ್ರ ಸರ್ಕಾರದ ವಂತಿಗೆಯೊಂದಿಗೆ ರಾಜ್ಯ ಸರ್ಕಾರ ಗರಿಷ್ಠ 50 ಲಕ್ಷ ರೂ. ಸಹಾಯಧನದೊಂದಿಗೆ ವಿದ್ಯುತ್ ಮಗ್ಗ ಸಾಂದ್ರತೆ ಇರುವ 2 ಕೇಂದ್ರಗಳಲ್ಲಿ ನೂಲಿನ ಘಟಕ ಸ್ಥಾಪಿಸುವು ದಾಗಿ ಪ್ರಕಟಿಸಲಾಗಿದೆ. ಕೈಮಗ್ಗ ನೇಕಾರಿಕೆ ಕರಕುಶಲತೆ ಇನ್ನಷ್ಟು ಅಭಿವೃದ್ಧಿಪಡಿಸಲು ರಾಜ್ಯಕ್ಕೆ ಸೀಮಿತವಾದ ಜಿ.ಐ.ಟ್ಯಾಗ್ ಹೊಂದಿರುವ ಕೈಮಗ್ಗ ಬಟ್ಟೆ ಉತ್ಪನ್ನಗಳಿಗೆ ರಾಜ್ಯದ ಪ್ರತಿಷ್ಠಿತ “ಪ್ರಿಯದರ್ಶಿನಿ’ ಬ್ರಾಂಡ್ ಮೂಲಕ ಸೂಕ್ತ ಮಾರುಕಟ್ಟೆ ಒದಗಿಸುವ ವಾಗ್ಧಾನ ನೀಡಲಾಗಿದೆ.
ಸಕಾಲ ವ್ಯಾಪ್ತಿಗೆ ಸೇವೆ: ಉದ್ದಿಮೆದಾರರು, ಹೂಡಿಕೆದಾರರು ಕೈಗಾರಿಕೆಗಳನ್ನು ಸುಲಭವಾಗಿ ಸ್ಥಾಪಿಸಲು ಅನುಕೂಲವಾಗುವಂತೆ ಕೆಲ ಸೇವೆಗಳನ್ನು “ಸಕಾಲ’ ವ್ಯಾಪ್ತಿಗೆ ತರಲು ಸರ್ಕಾರ ನಿರ್ಧರಿಸಿದೆ. ಮುಖ್ಯವಾಗಿ ಭೂಮಿ ಹಂಚಿಕೆ, ನಕ್ಷೆ ಅನುಮೋದನೆ, ಲೀಸ್ ಕಂ ಸೇಲ್ ಡೀಡ್, ಕ್ರಯಪತ್ರ ಇತರೆ ಸೇವೆಗಳನ್ನು ಕ್ಷಿಪ್ರಗತಿಯಲ್ಲಿ ಪೂರೈಸಲು ಕೆಐಎಡಿಬಿ ಹಾಗೂ ಕೆಎಸ್‌ಎಸ್‌ಐಡಿಸಿಯ ಪ್ರಮುಖ ಸೇವೆಗಳನ್ನು “ಸಕಾಲ’ ವ್ಯಾಪ್ತಿಗೆ ತರುವ ಭರವಸೆ ನೀಡಲಾಗಿದೆ.
ಹೂಡಿಕೆಗೆ ಕಾನೂನು ತಿದ್ದುಪಡಿ: ಸ್ವಿಡ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಸಮ್ಮೇಳನದಲ್ಲಿ 40ಕ್ಕೂ ಹೆಚ್ಚು ಜಾಗತಿಕ ಮಟ್ಟದ ಕಂಪನಿಗಳು, ಹೂಡಿಕೆದಾರರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ನಿಯೋಗ ಭೇಟಿಯಾಗಿ ಚರ್ಚಿಸಿತ್ತು. ಈ ವೇಳೆ ರಾಜ್ಯದಲ್ಲಿ ಹೂಡಿಕೆಗೆ ಪೂರಕ ವಾತಾವರಣವಿದ್ದರೂ ಭೂ ಖರೀದಿ ಮತ್ತು ವಿವಿಧ ಪ್ರಾಧಿಕಾರಗಳಿಂದ ಅಗತ್ಯ ಅನುಮೋದನೆ ಪಡೆಯುವುದು ಕ್ಲಿಷ್ಟಕರ ಎಂದು ಹೂಡಿಕೆದಾರರು ಅಳಲು ತೋಡಿಕೊಂಡಿದ್ದರು. ಅದರಂತೆ ರಾಜ್ಯದಲ್ಲಿ ಹೂಡಿಕೆ ದಾರರಿಗೆ ಉತ್ತೇಜನ ನೀಡಲು, ಕೈಗಾರಿಕಾ ಸ್ಥಾಪನೆಗೆ ಗುರುತಿಸುವ ಜಾಗದಲ್ಲಿ ನೇರವಾಗಿ ಭೂಮಾಲೀಕರಿಂದ ಭೂಮಿ ಖರೀದಿಸಲು ಅನುಕೂಲವಾಗುವಂತೆ ಸಂಬಂಧಪಟ್ಟ ಕಾಯ್ದೆಗೆ ತಿದ್ದುಪಡಿ ತಂದು ನಿಯಮ ರೂಪಿಸುವ ವಾಗ್ಧಾನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್‌ನಲ್ಲಿ ನೀಡಿದ್ದಾರೆ.
ಕೈಗಾರಿಕಾ ನೀತಿ: ರಾಜ್ಯದಲ್ಲಿ ಸಮಗ್ರ ಕೈಗಾರಿಕಾ ಅಭಿವೃದ್ಧಿಗಾಗಿ ನೂತನ ಕೈಗಾರಿಕಾ ನೀತಿ ಜಾರಿಗೊಳಿಸುವುದಾಗಿ ಆಯವ್ಯಯದಲ್ಲಿ ಘೋಷಿಸಲಾಗಿದೆ. ಮುಖ್ಯವಾಗಿ ದ್ವಿತೀಯ ಹಾಗೂ ತೃತೀಯ ಹಂತದ ನಗರಗಳಿಗೂ ಹೂಡಿಕೆ ಆಕರ್ಷಿಸುವುದಕ್ಕೆ ಕೈಗಾರಿಕಾ ನೀತಿಯಲ್ಲಿ ಆದ್ಯತೆ ಸಿಗಲಿದೆ. ವಿನೂತನ ತಂತ್ರ ಜ್ಞಾನಗಳು ಹಾಗೂ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಅವಕಾಶವಿರುವ ವಲಯಗಳಿಗೆ ಆದ್ಯತೆ ನೀಡಲು ಚಿಂತಿಸಿದೆ.