Advertisement
ಸರಕಾರವು ಲಾಕ್‌ಡೌನ್‌ದಲ್ಲಿ ಸಡಲಿಕೆ ಮಾಡಿದ್ದರಿಂದ ಬೆಳಿಗ್ಗೆ ಎಂದಿನಂತೆ ಕೈಗಾರಿಕೆಗಳ ಸೈರನ್ ಮೊಳಗಿದವು. ಕಾರ್ಮಿಕರು ಸಮವಸ್ತ್ರ ಧರಿಸಿ ಕೆಲಸಕ್ಕೆ ಬಂದರು. ಕೆಲಸ ಮತ್ತೆ ಶುರುಮಾಡಿದ ಲಗುಬಗೆ ಎಲ್ಲರ ಮುಖದಲ್ಲಿ ಕಂಡಿತಾದರೂ ಒಳಗೊಳಗೆ ಕೋವಿಡ್ 19 ಜೊತೆಗೆ ಆರ್ಥಿಕ ಮುಗ್ಗಟ್ಟಿನ ಆತಂಕ ಒಂದೇ ಸಮನೆ ಹೊಡೆದುಕೊಳ್ಳುತ್ತಿತ್ತು. ಕಳೆದ ಮೂರು ವಾರಗಳಿಂದ ಉದ್ಯಮಬಾಗ ಕೈಗಾರಿಕಾ ಪ್ರದೇಶ ವಾಹನಗಳ ಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು. ಸೋಮವಾರದಿಂದ ಕೈಗಾರಿಕೆಗಳ ಆರಂಭಕ್ಕೆ ಚಾಲನೆ ನೀಡಬಹುದು ಎಂದು ಸರಕಾರ ಹಸಿರು ನಿಶಾನೆ ಘೋಷಣೆ ಮಾಡುತ್ತಿದ್ದಂತೆ ಬೆಳಿಗ್ಗೆಯಿಂದ ವಾಹನಗಳ ಓಡಾಟ ಎಂದಿನಂತೆ ಕಂಡುಬಂತು. ಮತ್ತೆ ಕೈಗಾರಿಕೆಗಳ ಚಟುವಟಿಕೆ ಹೊಸ ವಿಶ್ವಾಸದೊಂದಿಗೆ ಆರಂಭವಾಯಿತು.
Related Articles
Advertisement
ಬೆಳಗಾವಿಯಲ್ಲಿರುವ ಬಹುತೇಕ ಫೌಂಡ್ರಿಗಳು ಹೆಚ್ಚು ಸಾಮರ್ಥ್ಯದ ವಿದ್ಯುತ್ ಸಂಪರ್ಕ ಪಡೆದುಕೊಂಡಿವೆ. ಕೈಗಾರಿಕೆಗಳು ಕೆಲಸ ಮಾಡಲಿ ಅಥವಾ ಬಿಡಲಿ ಸರಕಾರಕ್ಕೆ ಪ್ರತಿ ತಿಂಗಳು ಹಣ ತುಂಬಲೇ ಬೇಕು. ಈಗ ಕೈಗಾರಿಕೆಗಳು ಕನಿಷ್ಠ 50 ಸಾವಿರದಿಂದ 60 ಲಕ್ಷ ರೂ ಹಣ ತುಂಬುತ್ತಿವೆ. ಈ ಸಮಯದಲ್ಲಿ ಇದು ನಮಗೆ ಬಹಳ ದೊಡ್ಡ ಹೊರೆ. ಕೋವಿಡ್ 19 ಕಾರಣ ಮಹಾರಾಷ್ಟ್ರ, ಅಂಧ್ರಪ್ರದೇಶ, ಗುಜರಾತ್ ರಾಜ್ಯಗಳಲ್ಲಿ ಇದಕ್ಕೆ ರಿಯಾಯತಿ ನೀಡಿದ್ದಾರೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಮಾಡಬೇಕು ಎಂಬುದು ಉದ್ಯಮಿಗಳ ಆಗ್ರಹ.
ಈಗಿನ ಸ್ಥಿತಿಯಲ್ಲಿ ಕೈಗಾರಿಕೆಗಳು ಉಳಿಯುವದು ಬಹಳ ಕಷ್ಟ. ಕೈಗಾರಿಕೆಗಳನ್ನು ಆರಂಭ ಮಾಡುವದರಿಂದ ಕಿರಾಣಿ ಅಂಗಡಿಗಳಂತೆ ತಕ್ಷಣ ಆದಾಯ ಬರುವದಿಲ್ಲ. ದೇಶದಲ್ಲಿನ ವಾತಾವರಣ ನೋಡಿದರೆ ಈ ವರ್ಷ ಸಂಪೂರ್ಣ ನಷ್ಟವೇ ಗತಿ. ಹೀಗಾಗಿ ಮೈಮೇಲೆ ಅಪಾಯ ತಂದುಕೊಂಡು ಕೆಲಸ ಮಾಡುವದು ಬೇಡ ಎಂಬ ಆಲೋಚನೆ ಉದ್ಯಮಿಗಳಲ್ಲಿ ಕಾಣುತ್ತಿದೆ.
ಕೈಗಾರಿಕೆಗಳನ್ನು ಆರಂಭ ಮಾಡಿದ್ದೇವೆ ಎಂಬುದೊಂದೇ ಈಗಿರುವ ಸಮಾಧಾನ. ಸುಧಾರಿಸಿಕೊಳ್ಳಲು ಬಹಳ ಸಮಯ ಬೇಕು. ಸರಕಾರದಿಂದ ಕೇವಲ ಸಾಂತ್ವನದ ಮಾತುಗಳು ಮಾತ್ರ ಸಿಕ್ಕಿವೆ. ನಿರೀಕ್ಷೆ ಮಾಡಿದ ನೆರವು ಇದುವರೆಗೂ ಬಂದಿಲ್ಲ. ಕಾರ್ಮಿಕರಿಗೆ ಹೇಗೆ ವೇತನ ನೀಡಬೇಕು ಎಂಬ ಚಿಂತೆ ಕಾಡುತ್ತಿದೆ. ಪರಿಹಾರದ ದಾರಿ ಕಾಣುತ್ತಿಲ್ಲ. – ರೋಹನ್ ಜುವಳಿ, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ
ಯಾವುದೇ ಸಮಸ್ಯೆ ಇಲ್ಲದೆ ಜಿಲ್ಲೆಯಲ್ಲಿ ಕೈಗಾರಿಕಾ ಚಟುವಟಿಕೆಗಳು ಆರಂಭವಾಗಿವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಮಾಸ್ಕ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆರೋಗ್ಯ ಸುರಕ್ಷತೆಯ ಬಗ್ಗೆ ಗಮನಹರಿಸಬೇಕು ಎಂದು ಕೈಗಾರಿಕೆಗಳ ಮಾಲೀಕರು ಹಾಗೂ ಕಾರ್ಮಿಕರಿಗೆ ತಿಳಿವಳಿಕೆ ಮೂಡಿಸಲಾಗಿದೆ. ಕೆಲವೊಂದು ಸಣ್ಣ ಪುಟ್ಟ ಸಮಸ್ಯೆಗಳು ಇದ್ದು ಅವುಗಳು ಸಹ ಬಗೆಹರಿಯಲಿವೆ. -ದೊಡ್ಡ ಬಸವರಾಜು, ಜಂಟಿ ನಿರ್ದೇಶಕ, ಜಿಲ್ಲಾ ಕೈಗಾರಿಕಾ ಇಲಾಖೆ
–ಕೇಶವ ಆದಿ