Advertisement

ಸಿಂಧೂ ನದಿ ನೀರು: ಪ್ರಾಜೆಕ್ಟ್ ವಿವರ ನೀಡಿದ ಸರ್ಕಾರ

12:30 AM Feb 23, 2019 | |

ಸಿಂಧೂ ನದಿ ಒಪ್ಪಂದದ ಪ್ರಕಾರ ಭಾರತದ ಪಾಲಿನ ನೀರನ್ನು ಪಾಕಿಸ್ಥಾನಕ್ಕೆ ಹರಿಯಲು ಬಿಡದೇ ಬಳಸಿಕೊಳ್ಳುವ ಕುರಿತು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿಕೆಯ ನಂತರದಲ್ಲಿ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯವು, ಈ ಸಂಬಂಧ ಚಾಲ್ತಿಯಲ್ಲಿರುವ ಹಾಗೂ ಪ್ರಸ್ತಾವನೆಯಲ್ಲಿರುವ ಯೋಜನೆಗಳ ವಿವರಣೆಯನ್ನು ನೀಡಿದೆ. 1960 ರಲ್ಲಿ ಉಭಯ ದೇಶಗಳು ಸಹಿ ಹಾಕಿದ ಸಿಂಧೂ ನದಿ ಒಪ್ಪಂದದ ಅನುಸಾರವಾಗಿ ರಾವಿ, ಸಟ್ಲೆಜ್‌ ಮತ್ತು ಬೀಯಾಸ್‌ ನದಿಗಳ 33 ಮಿಲಿಯನ್‌ ಎಕರೆ ಅಡಿ ನೀರನ್ನು ಭಾರತ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ಇದೇ ರೀತಿ ಪಶ್ಚಿಮ ವಾಹಿನಿಗಳಾದ ಸಿಂಧೂ, ಝೇಲಮ್‌ ಮತ್ತು ಚೆನಾಬ್‌ ನದಿಯ ಸುಮಾರು 135 ಎಂಎಎಫ್ ನೀರನ್ನು ಪಾಕಿಸ್ಥಾನಕ್ಕೆ ನೀಡಲಾಗಿದ್ದು, ಈ ನೀರನ್ನೂ ಕೂಡ ಕೃಷಿ ಉದ್ದೇಶಕ್ಕೆ ಭಾರತ ಬಳಕೆ ಮಾಡಿಕೊ ಳ್ಳಬಹುದಾಗಿದೆ.

Advertisement

ಈಗಾಗಲೇ ಭಾರತವು ಸಟ್ಲೆಜ್‌ ನದಿಗೆ ಭಾಕ್ರಾ ಆಣೆಕಟ್ಟೆ ನಿರ್ಮಿಸಿದೆ. ಬಿಯಾಸ್‌ ನದಿಗೆ ಪಾಂಗ್‌ ಮತ್ತು ಪಂಡೋಹ್‌ ಹಾಗೂ ರಾವಿ ನದಿಗೆ ರಂಜಿತ್‌ಸಾಗರ ಆಣೆಕಟ್ಟೆ ನಿರ್ಮಿಸಿದೆ. ಇದೇ ರೀತಿ ಬಿಯಾಸ್‌ ಸಟ್ಲೆಜ್‌ ಲಿಂಕ್‌, ಮಧೋಪುರ್‌-ಬಿಯಾಸ್‌ ಲಿಂಕ್‌, ಇಂದಿರಾ ಗಾಂಧಿ ನಹರ್‌ ಪ್ರಾಜೆಕ್ಟ್  ಕೂಡ ಈ ಭಾಗದಲ್ಲಿದ್ದು, ಇದರಿಂದ ಪೂರ್ವವಾಹಿನಿ ನದಿಗಳ ಶೇ.95ರಷ್ಟು ನೀರನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ಭಾರತದ ಬಳಕೆಗೆ ನಿಗದಿಯಾದ ಸುಮಾರು 2 ಎಂಎಎಫ್ನಷ್ಟು ನೀರು ಪ್ರತಿ ವರ್ಷ ರಾವಿ ನದಿಯಿಂದ ಪಾಕಿಸ್ಥಾನಕ್ಕೆ ಹರಿದು ಹೋಗುತ್ತಿದೆ ಎಂದು ಹೇಳಲಾಗಿದೆ. 

ಈ ನೀರು ಪಾಕಿಸ್ಥಾನಕ್ಕೆ ಹರಿದುಹೋಗುವುದನ್ನು ತಡೆಯಲು ಹಲವು ಯೋಜನೆಗಳು ಚಾಲ್ತಿಯಲ್ಲಿವೆ. ಈ ಪೈಕಿ ಶಾಹ್‌ಪುರಖಂಡಿ ಯೋಜನೆಯೂ ಒಂದಾಗಿದ್ದು, ಇದನ್ನು ರಂಜಿತ್‌ಸಾಗರ ಆಣೆಕಟ್ಟೆಯಿಂದ ಹರಿಯುವ ನೀರನ್ನು ಬಳಸಿಕೊಳ್ಳಲಿದೆ. ಇದರಿಂದ ಜಮ್ಮು, ಕಾಶ್ಮೀರ ಮತ್ತು ಪಂಜಾಬ್‌ನ 37 ಸಾವಿರ ಎಕರೆ ಭೂಮಿಗೆ ನೀರುಣಿಸಬಹುದಾಗಿದೆ. ಅಲ್ಲದೆ 206 ಮೆ.ವ್ಯಾ ವಿದ್ಯುತ್ತನ್ನೂ ಉತ್ಪಾದಿಸಬಹುದಾಗಿದೆ. ಆದರೆ ರಾಜ್ಯಗಳ ವಿವಾದಿಂದಾಗಿ ಸ್ಥಗಿತಗೊಂಡಿದ್ದ ಯೋಜನೆಯನ್ನು 2018ರಲ್ಲಿ  ಪುನಃ ಆರಂಭಿಸಲಾಗಿದೆ. ಇನ್ನೊಂದೆಡೆ ರಾವಿ ನದಿಯ ಉಪನದಿ ಉಝ್ ಹರಿವನ್ನು ನಿಯಂತ್ರಿಸಲು 781 ಮಿಲಿಯನ್‌ ಕ್ಯೂಬಿಕ್‌ ಮೀಟರ್‌ ನೀರನ್ನು ಸಂಗ್ರಹಿಸುವ ಯೋಜನೆ ರೂಪಿಸಲಾಗಿದೆ. ಈ ಯೋಜನೆ 2017ರಲ್ಲೇ ಅನುಮೋದನೆ ಪಡೆದಿದೆ. ಜೊತೆಗೆ ಉಝ್ ಕೆಳಭಾಗದಲ್ಲಿ ರಾವಿ ಬಿಯಾಸ್‌ ನದಿ ಲಿಂಕ್‌ ಯೋಜನೆಯೂ ಚಾಲ್ತಿಯಲ್ಲಿದೆ. ಈ ಮೂರೂ ಯೋಜನೆಗಳಿಂದ ಭಾರತ ತನ್ನ ಪಾಲಿನ ನೀರನ್ನು ಬಳಸಿಕೊಳ್ಳಬಹುದಾಗಿದೆ.

ಪಾಕ್‌ ಆಕ್ಷೇಪವಿಲ್ಲ: ಭಾರತ ಸರ್ಕಾರ ಈಗ ಯೋಜಿಸುತ್ತಿರುವುದು ಆ ದೇಶದ ಪಾಲಿನ ನೀರಿನ ಬಳಕೆಯನ್ನು ಮಾತ್ರ. ಹೀಗಾಗಿ ಪಾಕಿಸ್ಥಾನಕ್ಕೆ ಈ ಬಗ್ಗೆ ಯಾವುದೇ ತಕರಾರಿಲ್ಲ. ಅವರ ಪಾಲಿನ ನೀರನ್ನು ಯಾವುದಕ್ಕೆ ಬೇಕಾದರೂ ಬಳಸಲು ಸಿಂಧೂ ನದಿ ಒಪ್ಪಂದದಲ್ಲಿ ಅವಕಾಶವಿದೆ ಎಂದು  ಪಾಕಿಸ್ಥಾನ ಹೇಳಿದೆ.

ನಿರ್ಧಾರ ಪ‹ಧಾನಿ ಕೈಯಲ್ಲಿದೆ: ಗಡ್ಕರಿ 
ಮಾಜಿ ಪ್ರಧಾನಿ ಜವಾಹರ ಲಾಲ ನೆಹರು ಸಿಂಧೂ ನದಿ ಒಪ್ಪಂದಕ್ಕೆ ಸೌಹಾರ್ದತೆ ದೃಷ್ಟಿಯಿಂದ ಸಹಿ ಹಾಕಿದ್ದರು. ಆದರೆ ಪಾಕಿಸ್ಥಾನ ಈ ಸೌಹಾರ್ದತೆಯನ್ನು ಕಾಯ್ದುಕೊಂಡಿಲ್ಲ. ಹೀಗಾಗಿ ಸಿಂಧೂ ನದಿ ನೀರನ್ನು ಪಾಕಿಸ್ಥಾನಕ್ಕೆ ಬಿಟ್ಟು ಕೊಡುವುದರಲ್ಲಿ ಯಾವುದೇ ಮೌಲ್ಯ ಉಳಿದಿಲ್ಲ ಎಂದು ಸಚಿವ ನಿತಿನ್‌ ಗಡ್ಕರಿ ಶುಕ್ರವಾರ ಹೇಳಿದ್ದಾರೆ. ಒಂದು ಹನಿ ನೀರನ್ನು ಪಾಕಿಸ್ಥಾನಕ್ಕೆ ನೀಡಬಾರದು ಎಂದು ಜನರು ಕೇಳುತ್ತಿದ್ದಾರೆ. ಆದರೆ ಅಂಥ ನಿರ್ಧಾರ ನನ್ನ ಸಚಿವಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ. ಈ ನಿರ್ಧಾರವನ್ನು ಪ್ರಧಾನಿ ಕೈಗೊಳ್ಳುತ್ತಾರೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next