Advertisement
ಮಳೆಗಾಲದಲ್ಲಿ ಹೆಚ್ಚುವರಿ ನೀರು ನದಿಗೆ ಸೇರಿ ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ನಗರದ ಅಲ್ಲಲ್ಲಿ ಇಂದ್ರಾಣಿಯ ತಡೆಗೋಡೆ ಕುಸಿಯುತ್ತಿದೆ. ಈ ಹಿಂದೆ ಕಲ್ಲಿನಲ್ಲಿ ಕಟ್ಟಿದ ತಡೆಗೋಡೆ ಕಲ್ಲುಗಳು ಒಂದೊಂದಾಗಿ ಕೆಳಗೆ ಬೀಳುತ್ತಿವೆ ಮತ್ತು ಕೆಲವು ಕಡೆಗಳಲ್ಲಿ ಸಾಕಷ್ಟು ಉದ್ದದ ತಡೆಗೋಡೆಗಳು ಕುಸಿದು ಬಿದ್ದಿವೆ.
Related Articles
Advertisement
ಇಂದ್ರಾಣಿ ನದಿ ತಡೆಗೋಡೆ ಕುಸಿದ ಪರಿಣಾಮ ಮಳೆಗಾಲದಲ್ಲಿ ನದಿಪಾತ್ರದ ಜನತೆಗೆ ಅಪಾಯ ಕಟ್ಟಿಟ್ಟ ಬುತ್ತಿ. ಇತ್ತೀಚೆಗೆ ಸುರಿದ ಮಳೆಗೆ ಮೂರ್ನಾಲ್ಕು ದಿನಗಳ ಕಾಲ ನಗರ ಭಾಗದಲ್ಲಿ ಹರಿಯುವ ಇಂದ್ರಾಣಿ ನದಿ ಉಕ್ಕಿ ಹರಿದಿದೆ. ಈ ವೇಳೆ ತಡೆಗೋಡೆ ಕುಸಿದ ಜಾಗದಲ್ಲಿ ನೀರು ಸರಾಗವಾಗಿ ಹರಿಯದೆ ನದಿಪಾತ್ರದ ಹೊರಗಡೆ ಹರಿದಿದ್ದು, ಮನೆ, ತೋಟಗಳಲ್ಲಿ ಕೃತಕ ನೆರೆ ಉಂಟಾಗಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ತುಂಬಿ ಹರಿಯುವಾಗ ತಡೆಗೋಡೆ ಇಲ್ಲದ ಜಾಗದಲ್ಲಿ ಸಾರ್ವಜನಿಕರು ಅರಿವಿಗೆ ಬಾರದೆ ಓಡಾಟ ನಡೆಸಿದಲ್ಲಿ ಜಾರಿ ಬಿದ್ದು ನೀರು ಪಾಲಾಗುವ ಅಪಾಯವಿದೆ.
ಈ ಬಗ್ಗೆ ಕೂಡಲೆ ನಗರಸಭೆ, ಜಿಲ್ಲಾಡಳಿತ ಕ್ರಮ ಕೈಗೊಂಡು ದುರಸ್ತಿ ಕಾಮಗಾರಿ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
15 ಕೋ. ರೂ. ವೆಚ್ಚದಲ್ಲಿ ಕಾಮಗಾರಿ :
ಸಣ್ಣ ನೀರಾವರಿ ಇಲಾಖೆ ವತಿಯಿಂದ ನಗರ ಭಾಗದಲ್ಲಿ ಮಳೆಗಾಲದಲ್ಲಿ ಮನೆಗಳಿಗೆ ಇಂದ್ರಾಣಿ ನದಿ ನೆರೆಯಿಂದ ಸಮಸ್ಯೆಯಾಗದಂತೆ, ಶಿಥಿಲಾವಸ್ಥೆಯಲ್ಲಿದ್ದ ತಡೆಗೋಡೆಗಳನ್ನು ಗುರುತಿಸಿ ತೆರವು ಮಾಡಿ ವ್ಯವಸ್ಥಿತ ತಡೆಗೋಡೆಯನ್ನು 15 ಕೋ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ರಥಬೀದಿ ಪಾರ್ಕಿಂಗ್, ಕಟ್ಟೆ ಆಚಾರ್ಯ ಮಾರ್ಗ ಸಮೀಪ, ಸಿಟಿ ಬಸ್‌ನಿಲ್ದಾಣ ಹಿಂಬದಿ ಮಠದಬೆಟ್ಟು ಸಮೀಪ ಹರಿಯುವ ಇಂದ್ರಾಣಿ ನದಿಗೆ 1,800 ಮೀ. ಉದ್ದದ ತಡೆಗೋಡೆ ನಿರ್ಮಿಸಲಾಗಿದೆ ಎಂದು ಇಲಾಖೆ ಎಂಜಿನಿಯರ್‌ಗಳು ಮಾಹಿತಿ ನೀಡಿದ್ದಾರೆ.
ನಗರ ಭಾಗದಲ್ಲಿ ಹರಿಯುವ ಇಂದ್ರಾಣಿ ನದಿ ತಡೆಗೋಡೆ ನಿರ್ಮಿಸುವ ಕಾರ್ಯ ಸಣ್ಣ ನೀರಾವರಿ ಇಲಾಖೆಯಿಂದ ನಡೆದಿದೆ. ಕೆಲವು ಕಡೆಗಳಲ್ಲಿ ತಡೆಗೋಡೆ ನಿರ್ಮಾಣ ನಡೆಯಬೇಕಿದ್ದು, ಇಲಾಖೆ ಎಂಜಿನಿಯರ್‌ಗಳಿಗೆ ಮಾಹಿತಿ ನೀಡಲಾಗುವುದು. -ಮೋಹನ್‌ರಾಜ್, ಎಇಇ, ಉಡುಪಿ ನಗರಸಭೆ.
ನಗರದಲ್ಲಿ ಈಗಾಗಲೇ ವ್ಯವಸ್ಥಿತವಾಗಿ 1.8 ಕಿ.ಮೀ. ಉದ್ದದ ತಡೆಗೋಡೆ ನಿರ್ಮಾಣ ಕಾರ್ಯ ನಡೆದಿದೆ. ಸದ್ಯ ಮಳೆ ಇರುವುದರಿಂದ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಇತರ ಭಾಗದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಪರಿಶೀಲನೆ ನಡೆಸಲಾಗುವುದು, ಹೆಚ್ಚುವರಿ ಕಾಮಗಾರಿಗೆ ಬಜೆಟ್ ಕೊರತೆ ಇದೆ. ಮುಂದಿನ ಹಂತಗಳಲ್ಲಿ ತಡೆಗೋಡೆ ಕುಸಿತ ಸ್ಥಳಗಳನ್ನು ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸುತ್ತೇವೆ. -ಹರೀಶ್, ಸಹಾಯಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ.