ಉಡುಪಿ: ಉಡುಪಿ ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಿಂದ ಇಂದ್ರಾಳಿ ಕೊಂಕಣ್ ರೈಲ್ವೇ ಸ್ಟೇಶನ್ ಹೋಗುವ ರಸ್ತೆಯಲ್ಲಿ ಎರಡು ಪಾಲುಗಳಿವೆ. ಕಡಿಮೆ ಪ್ರಮಾಣದ ಪಾಲಿಗೆ ನಗರಸಭೆ ಯಜಮಾನನಾದರೆ, ಅದಕ್ಕಿಂತ ಹೆಚ್ಚು ಪ್ರಮಾಣದ ಪಾಲಿಗೆ ಕೊಂಕಣ್ ರೈಲ್ವೇ ಯಜಮಾನ. ಈ ರಸ್ತೆ ಹದಗೆಟ್ಟ ಸಂದರ್ಭ ನಗರಸಭೆ ಸ್ಪಂದಿಸಿದರೆ, ಕೊಂಕಣ್ ರೈಲ್ವೇ ಮಾತ್ರ ಇದುವರೆಗೆ ಸ್ಪಂದಿಸಿಲ್ಲ.
ಇಂದ್ರಾಳಿ ಹೆದ್ದಾರಿಯಿಂದ ರೈಲ್ವೇ ಸ್ಟೇಶನ್‌ವರೆಗಿನ ಒಂದು ಕಿ.ಮೀ. ವರೆಗೆ ಉದ್ದ ರಸ್ತೆಯ ದುಃಸ್ಥಿತಿ ಬಗ್ಗೆ ಉದಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ನಗರಸಭೆ ಆಡಳಿತ ಪರ್ಯಾಯೋತ್ಸವ ಕಾಮಗಾರಿ ವೇಳೆ 300 ಮೀಟರ್ ರಸ್ತೆಯ ಪ್ಯಾಚ್ ವರ್ಕ್ ನಡೆಸಿ ಗುಂಡಿಗಳನ್ನು ಮುಚ್ಚಿತ್ತು. ಇನ್ನೂ 700 ಮೀಟರ್ ರಸ್ತೆ ರೈಲ್ವೇ ಸ್ಟೇಶನ್ ವ್ಯಾಪ್ತಿಯಲ್ಲಿದೆ. ಆದರೆ…?
ಇಲ್ಲಿನ ರೈಲ್ವೇ ವಸತಿ ಗೃಹ, ಆಭರಣ ವಾಹನ ನಿರ್ವಹಣೆ ಸಂಸ್ಥೆ, ರೈಲ್ವೇ ಎಂಜಿನಿಯರಿಂಗ್ ಕಚೇರಿಯಿಂದ ರೈಲ್ವೇ ನಿಲ್ದಾಣವರೆಗೂ ಹೆಚ್ಚಿನ ಪ್ರಮಾಣದಲ್ಲಿ ರಸ್ತೆ ಹದಗೆಟ್ಟಿದೆ. ರಸ್ತೆ ಮೇಲೆ ಜಲ್ಲಿ ಕಲ್ಲುಗಳು ಹರಡಿಕೊಂಡಿವೆ, ಲೆಕ್ಕಕ್ಕೆ ಸಿಗದಷ್ಟು ಗುಂಡಿಗಳಿದ್ದು, ವಾಹನ ಸವಾರರಿಗೆ ಗುಂಡಿಗಳನ್ನು ತಪ್ಪಿಸಿ ವಾಹನ ಚಲಾಯಿಸುವುದು ಸವಾಲಿನ ಸಂಗತಿ. ರೈಲ್ವೇ ಇಲಾಖೆಯ ನಿರ್ಲಕ್ಷ್ಯ ಇದು. ರೈಲ್ವೇ ಇಲಾಖೆ ಕೂಡಲೇ ಎಚ್ಚೆತ್ತು ರಸ್ತೆ ದುರಸ್ತಿಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಂತಿಂಥ ರಸ್ತೆ ನಾನಲ್ಲ… ನನ್ನಂಥ ರಸ್ತೆ ಇನ್ನಿಲ್ಲ… :
ಇಂದ್ರಾಳಿ ಹೆದ್ದಾರಿ ರಸ್ತೆಯಿಂದ ಸ್ಟೇಶನ್‌ಗೆ ತಲುಪುವ ರಸ್ತೆ ಹೊಂಡ, ಗುಂಡಿ ಗಳಿಂದ ಕೂಡಿರುವ ಕಳಪೆ ರಸ್ತೆಯಾಗಿ ಮಾರ್ಪಟ್ಟಿದೆ. ಹಲವಾರು ವರ್ಷಗಳಿಂದ ರಸ್ತೆ ದುರಸ್ತಿ ನಡೆಯದೆ ಜನ ಸಾಮಾನ್ಯರು ಸಂಕಷ್ಟ ಪಡುವಂತಾಗಿದೆ. ಮುಂಬಯಿ, ದಿಲ್ಲಿ, ಉತ್ತರ ಕನ್ನಡ, ಕೇರಳ, ಬೆಂಗಳೂರು, ಉತ್ತರ ಭಾರತದ ಹಲವಾರು ರಾಜ್ಯ, ಜಿಲ್ಲೆಗೆ ಇಲ್ಲಿಂದ 24 ಗಂಟೆಗಳ ಕಾಲ ರೈಲ್ವೇ ಸಂಚಾರ ವ್ಯವಸ್ಥೆ ಇದೆ. ಸಾವಿರಾರು ಮಂದಿ ಪ್ರಯಾಣಿಕರು ಈ ರಸ್ತೆಯ ಮೂಲಕ ರೈಲ್ವೇ ನಿಲ್ದಾಣಕ್ಕೆ ತಲುಪಬೇಕು. ಇದೇ ರಸ್ತೆಯ ಮೂಲಕ ರೋಗಿಗಳು ಆಸ್ಪತ್ರೆಗೆ ತೆರಳಬೇಕು. ಆದರೆ ಸಾಮಾನ್ಯ ಮನುಷ್ಯರೂ ಓಡಾಡಲಾರದಷ್ಟು ಪರಿಸ್ಥಿತಿಗೆ ರಸ್ತೆ ತಲುಪಿದೆ. ಗುಂಡಿ, ಉಬ್ಬು, ತಗ್ಗು ನಿಯಂತ್ರಿಸಲಾಗದೆ ಸಾಕಷ್ಟು ಮಂದಿ ದ್ವಿಚಕ್ರ ವಾಹನ ಸವಾರರು, ರಿಕ್ಷಾ ಚಾಲಕರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.