ಉಡುಪಿ: ಇಂದ್ರಾಳಿ ರೈಲ್ವೇ ಸೇತುವೆಯ ಬಳಿ ಕಾರು ಪಲ್ಟಿಯಾದ ಘಟನೆ ರವಿವಾರ ಮುಂಜಾನೆ ವೇಳೆ ನಡೆದಿದೆ.
ಬೆಂಗಳೂರು ನೋಂದಣಿಯ ಸ್ವಿಫ್ಟ್ ಕಾರು ಇದಾಗಿದ್ದು, ಕಾರಿನಲ್ಲಿ ಇಬ್ಬರು ಪುರುಷರಿದ್ದರು.ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಎಂಜಿಎಂನಿಂದ ನೇರವಾಗಿ ಆಗಮಿಸಿ ಇಂದ್ರಾಳಿ ಶಾಲೆಯ ಎದುರುಭಾಗದಲ್ಲಿ ಕಾರು ರಸ್ತೆ ಅಗೆದಿರುವ ಭಾಗದ ಹೊಂಡಕ್ಕೆ ಉರುಳಿದೆ. ಇಲ್ಲಿ ಅಪಾಯಕಾರಿಯಾಗಿ ಕಬ್ಬಿಣದ ಸರಳುಗಳಿದ್ದು, ಸ್ವಲ್ಲ ಎಚ್ಚರ ತಪ್ಪಿದ್ದರೂ ಮತ್ತಷ್ಟು ಅಪಾಯ ಎದುರಾಗುವ ಸಾಧ್ಯತೆಗಳಿತ್ತು.
ಎಂಜಿಎಂ ರಸ್ತೆಯ ಹತ್ತಿರದಲ್ಲಿರುವ ಡಿವೈಡರ್‌ನಲ್ಲಿ ಹಾಕಿರುವ ಬ್ಯಾರಿಕೇಡ್ ಸ್ವಲ್ಪವೂ ರಸ್ತೆಯ ಮುಂದಿನ ಅಪಾಯದ ಸೂಚನೆ ನೀಡದಿರುವ ಕಾರಣ ರಾತ್ರಿ ಹೊತ್ತಿನಲ್ಲಿ ಅತ್ಯಂತ ವೇಗದಲ್ಲಿ ಬರುವ ವಾಹನ ಸವಾರರು ಗೊಂದಲಕ್ಕೆ ಈಡಾಗುತ್ತಿದ್ದಾರೆ. ಈ ರಸ್ತೆ ಕೊನೆಗೊಳ್ಳುವ ಅಂಚಿನಲ್ಲಿ ಯಾವುದೇ ಬ್ಯಾರಿಕೇಡ್ ಇಲ್ಲ. ಹಾಗಾಗಿ ಅಲ್ಲಿರುವ ಕಬ್ಬಿಣದ ರಾಡ್‌ನ ಸಣ್ಣದೊಂದು ಗೋಡೆ ಒಡೆದು ಕೆಳಗೆ ಹಾರಿದ ಸ್ಥಿತಿಯಲ್ಲಿ ಕಾರು ಕಂಡುಬಂದಿದೆ.
ಹಲವಾರು ವರ್ಷಗಳಿಂದಲೂ ಈ ಭಾಗದಲ್ಲಿ ಟ್ರಾಫಿಕ್ ದಟ್ಟಣೆ ಸಹಿತ ಈ ಸಮಸ್ಯೆ ನಿವಾರಿಸಲು ಜನಪ್ರತಿನಿಧಿಗಳ ಸಹಿತ ಸ್ಥಳೀಯಾಡಳಿತ ಇನ್ನೂ ಸೂಕ್ತ ಕ್ರಮ ತೆಗೆದುಕೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.