Advertisement

13ರಿಂದ ಜಿಲ್ಲಾದ್ಯಂತ ಇಂದ್ರಧನುಷ್‌ ಲಸಿಕಾ ಅಭಿಯಾನ 

05:21 PM Aug 09, 2018 | Team Udayavani |

ಬೆಳಗಾವಿ: ಗ್ರಾಮ ಸ್ವರಾಜ ಅಭಿಯಾನದಡಿ ಆ.13ರಿಂದ ಜಿಲ್ಲಾದ್ಯಂತ ಇಂದ್ರಧನುಷ್‌ ಲಸಿಕಾ ಅಭಿಯಾನ ನಡೆಯಲಿದ್ದು, ಯಾವುದೇ ಮಗು ಲಸಿಕೆಯಿಂದ ವಂಚಿತಗೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಸ್‌.ಜಿಯಾವುಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಮುಂದುವರಿದ ಗ್ರಾಮ ಸ್ವರಾಜ್‌ ಅಭಿಯಾನದಡಿ ಇಂದ್ರಧನುಷ್‌ ಅಭಿಯಾನದ ಜಿಲ್ಲಾ ಕಾರ್ಯಪಡೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆ. 13, 14, 17 ಮತ್ತು 18, ಸೆಪ್ಟೆಂಬರ್‌ 10, 11, 14 ಮತ್ತು 15, ಹಾಗೂ ಅಕ್ಟೋಬರ್‌ 9, 10, 12 ಮತ್ತು 15 ರಂದು ಜಿಲ್ಲಾದ್ಯಂತ ಇಂದ್ರಧನುಷ್‌ ಲಸಿಕಾ ಅಭಿಯಾನ ನಡೆಯಲಿದೆ ಎಂದರು.

ಜಿಲ್ಲೆಯ ಪ್ರತಿ ಶಾಲೆಯಲ್ಲೂ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಬೇಕು; ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಆರೋಗ್ಯ ಇಲಾಖೆಯ ಯೋಜನೆಗಳು ಹಾಗೂ ಲಸಿಕಾ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಮೂಲಕ ಎಲ್ಲ ಜನರಿಗೂ ಆರೋಗ್ಯ ಸೌಲಭ್ಯ ತಲುಪಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಜಿಯಾವುಲ್ಲಾ ಸೂಚಿಸಿದರು.

ಜಿಲ್ಲೆಯಲ್ಲಿ ಶೇ. ನೂರರಷ್ಟು ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಅಭಿಯಾನದ ವೇಳೆ ಲಂಬಾಣಿ ತಾಂಡಾಗಳು, ಕೊಳಚೆ ಪ್ರದೇಶಗಳು ಸೇರಿದಂತೆ ಬಡಜನರು ಹಾಗೂ ಅಶಿಕ್ಷಿತರು ವಾಸಿಸುವ ಪ್ರದೇಶಗಳಲ್ಲಿ ಹೆಚ್ಚಿನ ನಿಗಾವಹಿಸಬೇಕು. ಯಾವುದೇ ಮಗು ಅಥವಾ ಗರ್ಭಿಣಿಯರು ಲಸಿಕೆಯಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 

ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾರ್ಮಿಕ, ಗಣಿ ಇಲಾಖೆ, ನಗರಾಭಿವೃದ್ಧಿ ಕೋಶ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳ ಸಮನ್ವಯದೊಂದಿಗೆ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

Advertisement

ಜಿಲ್ಲೆಯಲ್ಲಿ 2 ವರ್ಷದೊಳಗಿನ 11,816 ಮಕ್ಕಳು; 6 ವರ್ಷದೊಳಗಿನ 4084 ಮಕ್ಕಳು ಹಾಗೂ 2181 ಗರ್ಭಿಣಿಯರಿಗೆ ಇಂದ್ರಧನುಷ್‌ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಜಿಲ್ಲಾದ್ಯಂತ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳು ಸೇರಿದಂತೆ ಒಟ್ಟಾರೆ 746 ಲಸಿಕಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ| ಐ.ಪಿ.ಗಡಾದ ಹೇಳಿದರು. 

ಇದಲ್ಲದೇ ಆ. 10ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ 19 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಮಾತ್ರೆ ನೀಡಲಾಗುವುದು ಎಂದು ಡಾ.ಗಡಾದ ಹೇಳಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಅಪ್ಪಾಸಾಹೇಬ್‌ ನರಟ್ಟಿ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಬಿ. ಪುಂಡಲೀಕ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಡಾ| ಪ್ರವೀಣ ಬಾಗೇವಾಡಿ, ಜಿಲ್ಲಾ ಸರ್ಜನ್‌ ಡಾ| ಖಾಜಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next