Advertisement

ಇಂದೋರ್‌ ಟೆಸ್ಟ್‌: ರಾಹುಲ್‌ ಉಳಿಯುವರೋ? ಗಿಲ್‌ ಬರುವರೋ?

11:47 PM Feb 28, 2023 | Team Udayavani |

ಇಂದೋರ್‌: ಮೊದಲೆರಡೂ ಟೆಸ್ಟ್‌ ಗಳನ್ನು ಮೂರೇ ದಿನಗಳಲ್ಲಿ ಗೆದ್ದು ಆಸ್ಟ್ರೇಲಿಯಕ್ಕೆ ಎದ್ದೇಳಲಾಗದಂತಹ ಹೊಡೆತವಿಕ್ಕಿದ ಭಾರತ ತೃತೀಯ ಟೆಸ್ಟ್‌ನಲ್ಲೂ ದೊಡ್ಡ ಗೆಲುವಿನ ಯೋಜನೆಗೆ ಸ್ಕೆಚ್‌ ಹಾಕಿಕೊಂಡಿದೆ.

Advertisement

ಇಂದೋರ್‌ನ “ಹೋಳ್ಕರ್‌ ಸ್ಟೇಡಿಯಂ’ನಲ್ಲಿ ಬುಧವಾರ ಈ ಪಂದ್ಯ ಆರಂಭವಾಗಲಿದ್ದು, ಕಾಂಗರೂ ಪಡೆಯನ್ನು ಮತ್ತೂಮ್ಮೆ ಸ್ಪಿನ್‌ ಖೆಡ್ಡಕ್ಕೆ ಬೀಳಿಸುವುದು ಟೀಮ್‌ ಇಂಡಿಯಾದ ಕಾರ್ಯತಂತ್ರವಾಗಿರುವುದರಲ್ಲಿ ಅನುಮಾನವೇ ಇಲ್ಲ.

ಇಂದೋರ್‌ನಲ್ಲೂ ಜಯಭೇರಿ ಮೊಳಗಿಸಿದರೆ ಭಾರತ ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ವಿಶ್ವದ ನಂ.1 ತಂಡವಾಗಿ ವಿರಾಜಮಾನವಾಗಲಿದೆ. ಹಾಗೆಯೇ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ತನ್ನ ಪ್ರವೇಶವನ್ನು ಅಧಿಕೃತಗೊಳಿಸಲಿದೆ. ಜತೆಗೆ ತವರಲ್ಲಿ ತನ್ನ ಸತತ ಟೆಸ್ಟ್‌ ಸರಣಿ ಗೆಲುವಿನ ದಾಖಲೆಯನ್ನು 16ಕ್ಕೆ ವಿಸ್ತರಿಸಲಿದೆ.

ಕುತೂಹಲ ಬೇರೆಯೇ ಇದೆ
ಈ ಪಂದ್ಯ ಹೇಗೆ ಸಾಗೀತು, ಭಾರತ ಗೆಲುವಿನ ಓಟ ಮುಂದುವರಿದೀತೇ, ಆಸ್ಟ್ರೇಲಿಯಕ್ಕೆ ಏನು ಕಾದಿದೆ, ಅದು ಸೋಲಿನ ಸುಳಿಯಿಂದ ಮೇಲೆದ್ದು ಬಂದೀತೇ… ಎಂಬುದೆಲ್ಲ ಇಂದೋರ್‌ ಟೆಸ್ಟ್‌ ಪಂದ್ಯಕ್ಕೆ ಸಂಬಂಧಿಸಿದ ಸಾಮಾನ್ಯ ಪ್ರಶ್ನೆಗಳು. ಆದರೆ ಈ ಬಗ್ಗೆ ಭಾರತದ ಕ್ರಿಕೆಟ್‌ ಪ್ರೇಮಿಗಳಾÂರೂ ವಿಪರೀತ ತಲೆ ಕೆಡಿಸಿಕೊಂಡಂತಿಲ್ಲ. ರೋಹಿತ್‌ ಪಡೆ ಈ ಪಂದ್ಯವನ್ನೂ ಗೆಲ್ಲುತ್ತದೆ ಎಂಬ ಸಂಗತಿಯೇ ಮನಸ್ಸಲ್ಲಿ ಅಚ್ಚೊತ್ತಿದೆ.

ಆದರೆ ನಮ್ಮವರ ತೀವ್ರ ಕುತೂಹಲ ಅಡಗಿರುವುದು ರನ್‌ ಬರಗಾಲದಲ್ಲಿರುವ ಆರಂಭಕಾರ ಕೆ.ಎಲ್‌. ರಾಹುಲ್‌ ಆಡುವ ಬಳಗದಲ್ಲಿ ಸ್ಥಾನ ಉಳಿಸಿಕೊಳ್ಳಬಹುದೇ, ಅಥವಾ ಇವರ ಸ್ಥಾನದಲ್ಲಿ ಶುಭಮನ್‌ ಗಿಲ್‌ ಆಡಬಹುದೇ ಎಂಬ ವಿಷಯದಲ್ಲಿ. ರಾಹುಲ್‌ ಅವರಿಂದ ಉಪನಾಯಕತ್ವವನ್ನು ಕಿತ್ತುಕೊಂಡಿದ್ದನ್ನು ಗಮನಿಸುವಾಗ ಇವರ ಸ್ಥಾನಕ್ಕೆ ಕುತ್ತು ಬಂದಿದೆ ಎಂದೇ ಅರ್ಥೈಸಿಕೊಳ್ಳಬೇಕಾಗುತ್ತದೆ. ಈ ಸರಣಿಯ 3 ಇನ್ನಿಂಗ್ಸ್‌ಗಳಲ್ಲಿ ರಾಹುಲ್‌ ಅವರ ರನ್‌ ಗಳಿಕೆ ಕುಸಿತ ಕಾಣುತ್ತಲೇ ಬಂದಿರುವುದನ್ನು ಗಮನಿಸಬಹುದು (20, 17 ಮತ್ತು 1 ರನ್‌). ಇನ್ನೊಂದೆಡೆ ಶುಭಮನ್‌ ಗಿಲ್‌ ಅವರ ಇತ್ತೀಚಿನ ಪ್ರಚಂಡ ಫಾರ್ಮ್ ಗೆ ಗೌರವ ಕೊಡಲೇಬೇಕಾದ ಸನ್ನಿವೇಶವೂ ನಿರ್ಮಾಣಗೊಂಡಿದೆ.

Advertisement

ಸ್ಪಿನ್ನರ್‌ಗಳ ತಾಕತ್ತು
ಹಾಗೆ ನೋಡಹೋದರೆ ಭಾರತ ಮೊದಲೆರಡು ಟೆಸ್ಟ್‌ಗಳನ್ನು ಗೆದ್ದದ್ದೇ ಸ್ಪಿನ್‌ ಬೌಲಿಂಗ್‌ ಮತ್ತು ಸ್ಪಿನ್ನರ್‌ಗಳ ಬ್ಯಾಟಿಂಗ್‌ ತಾಕತ್ತಿನಿಂದ. ರವೀಂದ್ರ ಜಡೇಜ, ಅಕ್ಷರ್‌ ಪಟೇಲ್‌ ಮತ್ತು ಆರ್‌. ಅಶ್ವಿ‌ನ್‌ ಅವರ ಪರಾಕ್ರಮ ಸಾಟಿಯಿಲ್ಲದ್ದು. ಹೊಸದಿಲ್ಲಿ ಪಂದ್ಯದ ದ್ವಿತೀಯ ಸರದಿಯಲ್ಲಿ ಜಡೇಜ ಬೌಲಿಂಗ್‌ ಜಾದೂ ಮಾಡದೇ ಹೋಗಿದ್ದಲ್ಲಿ ಭಾರತದ ಸ್ಥಿತಿ ಖಂಡಿತವಾಗಿಯೂ ಬಿಗಡಾಯಿಸುತ್ತಿತ್ತು.

ಅರ್ಥಾತ್‌, ಕೇವಲ ರಾಹುಲ್‌ ಮಾತ್ರವಲ್ಲ, ಭಾರತದ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವಿಭಾಗವೇ ಲಯದಲ್ಲಿಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ. ಪೂಜಾರ, ಕೊಹ್ಲಿ, ಅಯ್ಯರ್‌ ಇನ್ನೂ ಅರ್ಧ ಶತಕವನ್ನೇ ಹೊಡೆದಿಲ್ಲ. ಪೂಜಾರ ಅವರಂತೂ 100ನೇ ಟೆಸ್ಟ್‌ ಪಂದ್ಯದಲ್ಲಿ ಸೊನ್ನೆ ಸುತ್ತಿ ಹೋಗಿದ್ದಾರೆ. ಸೂರ್ಯಕುಮಾರ್‌ ಜಾಗಕ್ಕೆ ಬಂದ ಅಯ್ಯರ್‌ ಎರಡೂ ಇನ್ನಿಂಗ್ಸ್‌ಗಳಲ್ಲಿ ವೈಫ‌ಲ್ಯ ಕಂಡಿದ್ದಾರೆ.

ಈ 2 ಟೆಸ್ಟ್‌ಗಳಲ್ಲಿ ದಾಖಲಾದದ್ದು ಒಂದೇ ಶತಕ ಎಂಬುದು ಒಟ್ಟಾರೆ ಬ್ಯಾಟಿಂಗ್‌ ಹಿನ್ನಡೆಗೊಂದು ನಿದರ್ಶನ. ಇದನ್ನು ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮ ನಾಗ್ಪುರ ಪಂದ್ಯದ ಏಕೈಕ ಇನ್ನಿಂಗ್ಸ್‌ನಲ್ಲಿ ಹೊಡೆದಿದ್ದರು (120). ಹೊಸದಿಲ್ಲಿಯಲ್ಲಿ ದಾಖಲಾದದ್ದು 3 ಅರ್ಧ ಶತಕ ಮಾತ್ರ. ಇದರಲ್ಲಿ 2 ಅರ್ಧ ಶತಕ ಆಸ್ಟ್ರೇಲಿಯ ಕಡೆಯಿಂದಲೇ ದಾಖಲಾಗಿದೆ. ಒಟ್ಟಾರೆಯಾಗಿ ತಂಡದ ಬ್ಯಾಟಿಂಗ್‌ ಎನ್ನುವುದು ಸಾಮರ್ಥ್ಯಕ್ಕೆ ತಕ್ಕಂತಿಲ್ಲ ಎಂಬುದನ್ನು ಗಮನಿಸುವಾಗ ರಾಹುಲ್‌ಗೆ ಇನ್ನೊಂದು ಅವಕಾಶವನ್ನು ಕೊಟ್ಟು ನೋಡಬಾರದೇಕೆ ಎಂಬ ಪ್ರಶ್ನೆಯೂ ಉದ್ಭವಿ ಸುತ್ತದೆ. ಉಳಿದಂತೆ ಭಾರತದ ಆಡುವ ಬಳಗದಲ್ಲಿ ಯಾವುದೇ ಬದಲಾವಣೆಯ ಸಾಧ್ಯತೆ ಇಲ್ಲ.

ಆಸೀಸ್‌ಗೆ ಮುಕ್ತಿ ಇದೆಯೇ?
ನಾಗ್ಪುರ ಮತ್ತು ಹೊಸದಿಲ್ಲಿಯಲ್ಲಿ ಆಸ್ಟ್ರೇಲಿಯನ್ನರು ಅನುಭವಿಸಿದ ಸ್ಪಿನ್‌ ಪರ ದಾಟವನ್ನು ಕಂಡಾಗ ಈ ಸರಣಿಯಲ್ಲಿ ಅವರಿಗೆ ಇದರಿಂದ ಮುಕ್ತಿ ಇಲ್ಲ ಎಂದೆನಿಸುತ್ತದೆ. ಆದರೂ ಇಂದೋರ್‌ ಟೆಸ್ಟ್‌ ಪಂದ್ಯದ ವೇಳೆ ಆಸೀಸ್‌ ತಂಡದಲ್ಲಿ ಒಂದಿಷ್ಟು ಬದಲಾವಣೆಯ ಗಾಳಿ ಬೀಸುವುದು ಸುಳ್ಳಲ್ಲ.

ನಾಯಕ ಪ್ಯಾಟ್‌ ಕಮಿನ್ಸ್‌ ತಾಯಿಯ ಅನಾರೋಗ್ಯದಿಂದಾಗಿ ತವರಿಗೆ ಮರಳಿದ್ದಾರೆ. ಇವರ ಗೈರಲ್ಲಿ ಸ್ಟೀವನ್‌ ಸ್ಮಿತ್‌ ತಂಡವನ್ನು ಮುನ್ನಡೆಸಲಿದ್ದಾರೆ. ಎಡಗೈ ವೇಗಿ ಮಿಚೆಲ್‌ ಸ್ಟಾರ್ಕ್‌, ಆಲ್‌ರೌಂಡರ್‌ ಕ್ಯಾಮರಾನ್‌ ಗ್ರೀನ್‌ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಫಾರ್ಮ್ನಲ್ಲಿಲ್ಲದ ಡೇವಿಡ್‌ ವಾರ್ನರ್‌ ಕೂಡ ಆಸ್ಟ್ರೇಲಿಯಕ್ಕೆ ವಾಪಸಾಗಿದ್ದು, ಇವರ ಬದಲು ಟ್ರ್ಯಾವಿಸ್‌ ಹೆಡ್‌ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ಇವರೆಲ್ಲ ಸೇರಿ ಆಸ್ಟ್ರೇಲಿಯ ತಂಡದ ಹಣೆಬರಹವನ್ನು ಬದಲಿಸಬಲ್ಲರೇ? ನಮ್ಮ ಸ್ಪಿನ್ನರ್‌ಗಳನ್ನು ದಿಟ್ಟ ರೀತಿಯಲ್ಲಿ ಎದುರಿಸಿ ನಿಂತರೆ ಮಾತ್ರ ಇದು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next