ಭೋಪಾಲ್: ಸ್ನೇಹಿತನಿಗೆ ಏಪ್ರಿಲ್ ಫೂಲ್ ಮಾಡಲು ವಿದ್ಯಾರ್ಥಿಯೊಬ್ಬ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ಅಭಿಷೇಕ್ ರಘುವಂಶಿ ಮೃತ ವಿದ್ಯಾರ್ಥಿ.
ಸೋಮವಾರ ಏಪ್ರಿಲ್ ಫೂಲ್ ದಿನದಂದು 11ನೇ ತರಗತಿ ವಿದ್ಯಾರ್ಥಿ ಅಭಿಷೇಕ್ ತನ್ನ ಸ್ನೇಹಿತನನ್ನು ಏಪ್ರಿಲ್ ಫೂಲ್ ಮಾಡಲು ಹೋಗಿದ್ದಾನೆ. ಮನೆಯಲ್ಲಿ ಕೂತು ಸ್ನೇಹಿತನಿಗೆ ವಿಡಿಯೋ ಕಾಲ್ ಮಾಡಿದ್ದಾನೆ.
ಸ್ಟೂಲ್ ಮೇಲೆ ನಿಂತು ಕುತ್ತಿಗೆಗೆ ಹಗ್ಗವನ್ನು ಹಾಕಿ, ನಾನು ಸಾಯುತ್ತಿದ್ದೇನೆ ಎಂದು ಏಪ್ರಿಲ್ ಫೂಲ್ ಮಾಡಲು ಹೋಗಿದ್ದಾನೆ. ಅಭಿಷೇಕ್ ಅವರ ಈ ಹುಚ್ಚಾಟವನ್ನು ಸ್ನೇಹಿತ ವಿಡಿಯೋ ಕಾಲ್ ನಲ್ಲಿ ನೋಡಿದ್ದಾನೆ. ಅಭಿಷೇಕ್ ಸ್ಟೂಲ್ ಮೇಲೆ ನಿಂತು ಹಗ್ಗವನ್ನು ಕುತ್ತಿಗೆಗೆ ಹಾಕಿಕೊಂಡಿದ್ದಾನೆ. ಆದರೆ ಈ ವೇಳೆ ಆಕಸ್ಮಿಕವಾಗಿ ಸ್ಟೂಲ್ ಜಾರಿದ್ದು, ಕುತ್ತಿಗೆಗೆ ಹಗ್ಗ ಬಿಗಿಯಾಗಿದೆ. ಪರಿಣಾಮ ಅಭಿಷೇಕ್ ಆತ್ಮಹತ್ಯೆಯ ನಾಟಕ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಈ ಘಟನೆಯನ್ನು ನೋಡಿದ ಸ್ನೇಹಿತ ಕೂಡಲೇ ಅಭಿಷೇಕ್ ಮನೆಗೆ ವಿಚಾರ ತಿಳಿಸಿದ್ದಾನೆ. ಮನೆಯವರು ಆತನನ್ನು ಇಳಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆತ ಆದಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
ಸದ್ಯ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇಂದೋರ್‌ನಲ್ಲಿ 11 ನೇ ತರಗತಿಯ ವಿದ್ಯಾರ್ಥಿಯ ಸಾವಿನ ಕುರಿತು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಹೆಚ್ಚುವರಿ ಡಿಸಿಪಿ ರಾಜೇಶ್ ದಂಡೋಟಿಯಾ ತಿಳಿಸಿದ್ದಾರೆ.