Advertisement

ಚೀನ ಜತೆ ‘ಉಗ್ರ’ಪ್ರಸ್ತಾವ

02:02 AM Jun 14, 2019 | sudhir |

ಬಿಷ್ಕೆಕ್‌: ಉಗ್ರರನ್ನು ಪೋಷಿಸುತ್ತಿರುವ ನೆರೆರಾಷ್ಟ್ರ ಪಾಕಿಸ್ಥಾನದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮತ್ತೆ ಗುಡುಗಿ ದ್ದಾರೆ. ಕಿರ್ಗಿಸ್ಥಾನದ ಬಿಷ್ಕೆಕ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಒಕ್ಕೂಟ ಸಮ್ಮೇಳನದ ಮಧ್ಯೆಯೇ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ರನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಪಾಕಿಸ್ಥಾನವು ಉಗ್ರವಾದಕ್ಕೆ ಬೆಂಬಲ ನೀಡುತ್ತಿರುವ ಕುರಿತು ಚೀನ ಅಧ್ಯಕ್ಷ ಜಿನ್‌ಪಿಂಗ್‌ ಜತೆಗಿನ ಮಾತುಕತೆ ವೇಳೆ ಮೋದಿ ಪ್ರಸ್ತಾವಿಸಿದ್ದಾರೆ.

Advertisement

ಪಾಕ್‌ ಜತೆಗೆ ಸಂಬಂಧ ಸುಧಾರಣೆಗೆ ನಾವು ಪ್ರಯತ್ನ ನಡೆಸಿದೆವು. ಪಾಕಿಸ್ಥಾನವು ಉಗ್ರರಿಂದ ಮುಕ್ತವಾದ ವಾತಾವರಣವನ್ನು ನಿರ್ಮಾಣ ಮಾಡಬೇಕು. ಸದ್ಯದ ಸ್ಥಿತಿಯಲ್ಲಿ ಇದು ಸಾಧ್ಯವಾಗುವಂತೆ ಕಾಣುತ್ತಿಲ್ಲ. ಹೀಗಾಗಿ ಭಾರತ ಪ್ರಸ್ತಾಪಿಸಿದ ವಿಚಾರಗಳ ಕುರಿತು ಕಠಿನ ಕ್ರಮಗಳನ್ನು ಪಾಕಿಸ್ಥಾನ ತೆಗೆದುಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ ಎಂದಿದ್ದಾರೆ ಮೋದಿ.

ಪ್ರಧಾನಿ ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಅನಂತರ ಇದೇ ಮೊದಲ ಭಾರಿಗೆ ಚೀನ ಹಾಗೂ ರಷ್ಯಾ ಅಧ್ಯಕ್ಷರನ್ನು ಭೇಟಿ ಮಾಡಿದ್ದು, ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಭಾರತ ಮತ್ತು ಚೀನ ಸಂಬಂಧ ಸುಧಾರಣೆ ಹಾಗೂ ಇತರ ಹಲವು ವಿಚಾರಗಳ ಕುರಿತು ಜಿನ್‌ಪಿಂಗ್‌ ಜತೆ ಮಾತುಕತೆ ನಡೆಸಲಾಗಿದ್ದು, ಇದು ಅತ್ಯಂತ ಫ‌ಲಪ್ರದವಾಗಿತ್ತು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಭಾರತ ಮತ್ತು ಚೀನ ಸಂಬಂಧಕ್ಕೆ 70 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ 20 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಚೀನ ಬ್ಯಾಂಕ್‌ ಶಾಖೆಯನ್ನು ಭಾರತದಲ್ಲಿ ತೆರೆಯುವ ಹಲವು ದಿನಗಳ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುತ್ತದೆ ಎಂದೂ ಮೋದಿ ಹೇಳಿದ್ದಾರೆ.

ವುಹಾನ್‌ನಲ್ಲಿ ಭೇಟಿ ಮಾಡಿದ ಅನಂತರ ಉಭಯ ದೇಶಗಳ ಸಂಬಂಧದಲ್ಲಿ ಸುಧಾರಣೆ ಕಂಡಿದೆ. ಎರಡೂ ದೇಶಗಳ ಮಧ್ಯದ ಸಂವಹನಗಳಲ್ಲೂ ಉತ್ತಮ ಪ್ರಗತಿಯಿದೆ. ಇದರಿಂದಾಗಿ ಎರಡೂ ದೇಶಗಳ ಕಾಳಜಿ ಮತ್ತು ಹಿತಾಸಕ್ತಿಗಳ ಕುರಿತು ಸಂವೇದನೆ ಮೂಡಿದೆ ಎಂದು ಮೋದಿ ಹೇಳಿದ್ದಾರೆ. ಡೋಕ್ಲಾಂ ಸಂಘರ್ಷದ ಅನಂತರದಲ್ಲಿ ಮೋದಿ ಹಾಗೂ ಜಿನ್‌ಪಿಂಗ್‌ರ ವುಹಾನ್‌ ಭೇಟಿ ಅತ್ಯಂತ ಮಹತ್ವದ್ದು ಎಂದು ಪರಿಗಣಿಸಲಾಗಿದೆ.

Advertisement

ಸಂಬಂಧ ಸುಧಾರಣೆಗೆ ಮೋದಿ ಯತ್ನಿಸಲಿ

ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗೆದ್ದ ಬೆಂಬಲವನ್ನೇ ಬಳಸಿ ಭಾರತ ಮತ್ತು ಪಾಕಿಸ್ಥಾನದ ಸಂಬಂಧ ಸುಧಾರಣೆಗೆ ಯತ್ನಿಸುತ್ತಾರೆಂದು ಆಶಿಸುತ್ತೇವೆ ಎಂಬುದಾಗಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ. ಎರಡೂ ದೇಶಗಳೂ ಶಾಂತಿ ಕಾಪಾಡಿಕೊಳ್ಳಬೇಕು. ಮಾತುಕತೆಯ ಮೂಲಕ ತಮ್ಮ ಭಿನ್ನಾಭಿಪ್ರಾಯ ಪರಿಹರಿಸಿಕೊಳ್ಳಬೇಕು. ಕಾಶ್ಮೀರ ಸಮಸ್ಯೆಯನ್ನೂ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ರಷ್ಯಾದ ಸರ್ಕಾರಿ ಸುದ್ದಿ ಸಂಸ್ಥೆ ಸ್ಪುಟ್ನಿಕ್‌ಗೆ ನೀಡಿದ ಸಂದರ್ಶನದಲ್ಲಿ ಖಾನ್‌ ಹೇಳಿದ್ದಾರೆ.

ರಷ್ಯಾಗೆ ಮೋದಿ

ಸೆಪ್ಟಂಬರ್‌ನಲ್ಲಿ ರಷ್ಯಾದಲ್ಲಿ ನಡೆಯಲಿರುವ ಈಸ್ಟರ್ನ್ ಎಕನಾಮಿಕ್‌ ಫೋರಂನಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಪ್ರಧಾನಿ ಮೋದಿ ಯನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ಆಹ್ವಾನಿಸಿದ್ದು, ಮೋದಿ ಸಮ್ಮತಿಸಿದ್ದಾರೆ. ಈಸ್ಟರ್ನ್ ಎಕನಾಮಿಕ್‌ ಫೋರಂ ಸಮ್ಮೇಳನವು ರಷ್ಯಾ ವ್ಲಾಡಿವೊಸ್ಟೊಕ್‌ನಲ್ಲಿ ನಡೆಯಲಿದೆ. ಇದೇ ವೇಳೆ, ಜೂನ್‌ 28 ಜಾಗೂ 29 ರಂದು ನಡೆಯಲಿರುವ ಜಿ20 ಶೃಂಗದಲ್ಲಿ ರಷ್ಯಾ, ಭಾರತ ಮತ್ತು ಚೀನ ಮೂರೂ ದೇಶಗಳ ಸಭೆ ನಡೆಸಲೂ ಯೋಜಿಸಲಾಗಿದೆ. ಜಪಾನ್‌ ಒಸಾಕಾದಲ್ಲಿ ಈ ಬಾರಿಯ ಜಿ20 ಶೃಂಗ ನಡೆಯಲಿದೆ.

ಜಿನ್‌ಪಿಂಗ್‌ಗೆ ಆಹ್ವಾನ

ಭಾರತಕ್ಕೆ ಆಹ್ವಾನಿಸುವಂತೆ ಕ್ಸಿ ಜಿನ್‌ಪಿಂಗ್‌ರನ್ನು ಮೋದಿ ಆಹ್ವಾನಿಸಿದ್ದು, ಅದಕ್ಕೆ ಜಿನ್‌ಪಿಂಗ್‌ ಕೂಡ ಸಮ್ಮತಿಸಿದ್ದಾರೆ. ಈ ವರ್ಷದಲ್ಲೇ ಅನೌಪಚಾರಿಕ ಮಾತುಕತೆಗೆ ಆಗಮಿಸುವಂತೆ ಮೋದಿ ಆಹ್ವಾನಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next