ನವದೆಹಲಿ: ಖಾಸಗಿತನ ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್ ನ 9 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಸರ್ವಸಮ್ಮತದಾದ ತೀರ್ಪು ನೀಡಿದ್ದು, ಇದರಿಂದಾಗಿ ಕೇಂದ್ರ ಸರ್ಕಾರದ ಮಹತ್ವದ ಆಧಾರ್ ಯೋಜನೆಗೆ ತೀವ್ರ ಹಿನ್ನಡೆ ಉಂಟಾದಂತಾಗಿದೆ.
ಖಾಸಗಿತನದ ಹಕ್ಕು ಎತ್ತಿಹಿಡಿದ ಸುಪ್ರೀಂಕೋರ್ಟ್, ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವುದನ್ನು ನಿರಾಕರಿಸಬಹುದು ಎಂದು ಸುಪ್ರೀಂ ಪೀಠ ಹೇಳಿದೆ.
ಸಂವಿಧಾನದ ಅಡಿ ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕು ಎಂದು ಪರಿಣಿಗಣಿಸಬೇಕೇ ಎಂಬ ಬಹುಚರ್ಚಿತ ವಿಷಯದ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಗುರುವಾರ ಹೊರಬಿದ್ದಿದೆ.
ಈ ಚರ್ಚೆಯ ಸಂಬಂಧ ಹಲವಾರು ಪರ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾದ ಕಾರಣ, ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೆಹರ್ ನೇತೃತ್ವದ 9 ಸದಸ್ಯರ ಪೀಠ ಆ.2ರಂದೇ ನೀಡಬೇಕಿದ್ದ ಈ ತೀರ್ಪನ್ನು ಕಾಯ್ದಿರಿಸಿತ್ತು. ಸರ್ಕಾರದ ಎಲ್ಲಾ ಸಮಾಜ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಲು ಸರ್ಕಾರ ಆಧಾರ್ ಕಾರ್ಡನ್ನು ಕಡ್ಡಾಯ ಮಾಡಿರುವುದರಿಂದ ಜನರ ಖಾಸಗಿ ಮಾಹಿತಿಗಳು ಬಹಿರಂಗವಾಗುತ್ತಿವೆ ಎಂದು ಕರ್ನಾಟಕ ಸೇರಿದಂತೆ 5 ರಾಜ್ಯಗಳು ಅರ್ಜಿ ಸಲ್ಲಿಸಿದ್ದವು.
ಖಾಸಗಿತನ ಮೂಲಭೂತ ಹಕ್ಕು ಅಲ್ಲ ಎಂದು ಕೇಂದ್ರ ಸರ್ಕಾರ ವಾದಿಸಿತ್ತು. ಆದರೆ ಕೇಂದ್ರದ ವಾದವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ್ದು, ಸಂವಿಧಾನದ 21ನೇ ವಿಧಿಯಡಿ ಖಾಸಗಿತನ ಒಂದು ಭಾಗ ಎಂದು ಹೇಳಿದೆ.