Advertisement

ತಿಮ್ಮಾಪುರ ಮಾತಿಗೆ ಯತ್ನಾಳ‌ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ

08:53 AM Sep 20, 2024 | Team Udayavani |

ಮುಧೋಳ: ‌ಕಾಂಗ್ರಸ್ ಸರ್ಕಾರದ ಮಂತ್ರಿಯೊಬ್ಬರು ನನ್ನನ್ನು ಬೊಗಳುವ ನಾಯಿಯೆಂದು ನಾಯಿಗೆ ಹೋಲಿಕೆ‌ ಮಾಡುತ್ತಾರೆ. ಹೌದು ನಾನು ದೇಶದ ಕಾನೂನಿಗೆ ಗೌರವ ನೀಡುವ, ನಮ್ಮ ನೆಲದ ಕಾನೂನನ್ನು ಗೌರವಿಸುವ ನಿಯತ್ತಿನ‌ ನಾಯಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ಶಾಸಕ ಬಸನಗೌಡ ಪಾಟೀಲಯತ್ನಾಳ  ಪರೋಕ್ಷವಾಗಿ ಕುಟುಕಿದರು.

Advertisement

ನಗರದಲ್ಲಿ ಸೆ.19ರ ಗುರುವಾರ ರಾತ್ರಿ‌ ನಡೆದ ಜನತಾ ರಾಜ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮದಲ್ಲಿ‌ ಮಾತನಾಡಿದ ಅವರು, ಇಂದಿನ‌ ಕಾಂಗ್ರೆಸ್ ಸರ್ಕಾರದ ಹಲವಾರು ಭ್ರಷ್ಟಾಚಾರದ ಕೃತ್ಯದಿಂದ ಅಧಿಕಾರಿಗಳು ಬೇಸತ್ತು ಹೋಗಿದ್ದಾರೆ. ಇನ್ನು 6 ತಿಂಗಳಲ್ಲಿ‌ ಸರ್ಕಾರ ಪತನಗೊಳ್ಳಲಿದ್ದು, ನಮ್ಮ ಆಡಳಿತಾವಧಿಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ ದೇಶದ ಭದ್ರತೆಗೆ ಹೆಚ್ಚಿನ ಒತ್ತು ನೀಡುತ್ತೇವೆ ಎಂದರು.

ಮುಸ್ಲಿಮರು ಸಮಾಜ ವಿರೋಧಿಗಳು, ಭಾರತದಲ್ಲಿ ಷರಿಯಾ ಕಾನೂನು ಜಾರಿಗೊಳಿಸಲು ಒಲವು ತೋರುವ ಅವರು, ನಮ್ಮ ನೆಲದ ಸಂವಿಧಾನವನ್ನು ವಿರೋಧಿಸುತ್ತಾರೆ. ಮುಸ್ಲಿಮರು ಭಾರತದ ಹಿಂದೂಗಳ ಸರ್ಕಾರವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಉಲ್ಲೇಖಿಸಿದ್ದಾರೆ. ಈ ನೆಲದ ಋಣ ಹೊತ್ತ ಪ್ರತಿಯೊಬ್ಬರೂ ಶಿವಾಜಿ ಮಹಾರಾಜ ಹಾಗೂ ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ಪೂಜಿಸಬೇಕು. ಅಂತಹ ಮುಸ್ಲಿಮರಿಗೆ ನಾವು ಹೆಚ್ಚಿನ ಗೌರವ ನೀಡುತ್ತೇವೆ ಎಂದು ಹೇಳಿದರು.

ಬಾಬಾ ಸಾಹೇಬರನ್ನು‌ ಸೋಲಿಸಿ ಅವರಿಗೆ ಅವಮಾನ ಮಾಡಿದ್ದು ಕಾಂಗ್ರೆಸ್ ನವರು. ಯಾದಗಿರಿಯಲ್ಲಿ ದಲಿತ ಪಿಎಸ್ ಐಗೆ ಅಲ್ಲಿನ ಎಂಎಲ್ಎ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಮಾನಸಿಕ ಖಿನ್ನತೆಗೊಳಗಾದ ಪಿಎಸ್ಐ ಆತ್ಮಹತ್ಯೆ ಮಾಡಿಕೊಂಡರು ಎಂದ ಅವರು ವರ್ಗಾವಣೆಗಾಗಿ ಪೊಲೀಸರಿಗೆ ಲಂಚಕ್ಕೆ ಬೇಡಿಕೆಯಿಡುತ್ತಿದ್ದಾರೆ ಇದು ಸರಿಯಲ್ಲ. ಅಧಿಕಾರ ಶಾಶ್ವತವಲ್ಲ, 6 ತಿಂಗಳಲ್ಲಿ ನಿಮ್ಮ ಸರ್ಕಾವೇ ಇರುವುದಿಲ್ಲ. ಮುಂದಿನ ದಿನದಲ್ಲಿ ನಾನು ಮುಖ್ಯಮಂತ್ರಿಯಾದರೆ ಅಧಿಕಾರಿಗಳಿಗೆ ಬೇರೆ ರೀತಿಯಲ್ಲಿಯೇ ಪಾಠ‌‌ ಕಲಿಸುವೆ ಎಂದರು.

ಮುಧೋಳಕ್ಕೆ ಬರಬೇಕಿದ್ದ ರಾಜಾಸಿಂಗರನ್ನು ನಿರ್ಬಂಧ ವಿಧಿಸಿರುವ ನಿಮಗೆ ಹೈಕೋರ್ಟ್ ನಿಂದ ತಕ್ಕ‌ ಪಾಠ ಕಲಿಸಿ‌ ಬಾಗಲಕೋಟೆ ತುಂಬ ಭಾಷಣ ಮಾಡುತ್ತೇವೆ. ಹೈದರಾಬಾದ್‌ ನ ಓವೈಸಿ ಇಳಕಲ್ಲದಲ್ಲಿ ಭಾಷಣ ಮಾಡಿದರೆ ನಿರ್ಬಂಧ ವಿಧಿಸಿಲ್ಲ. ಈಗ ಯಾಕೆ ನಿರ್ಬಂಧ ವಿಧಿಸುತ್ತೀರಿ. ಮುಂದಿನ ದಿನದಲ್ಲಿ ನಾವು ನಿಮಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ‌ ನೀಡಿದರು.

Advertisement

ನಾಗಮಂಗಲದಲ್ಲಿ ಗಣೇಶ ಮೂರ್ತಿಯನ್ನು ಪೊಲೀಸ್ ವಾಹನದಲ್ಲಿ ಕೊಂಡ್ಯೊಯುತ್ತಾರೆ. ನಿಮಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ‌ ನಡೆಸಿದರು.

ದೇಶದ ಅನ್ನ ತಿಂದು ನಮ್ಮ‌‌ ಕಾನೂನು ಗೌರವಿಸುವ ಪ್ರತಿಯೊಂದು ಮುಸ್ಲಿಮನನ್ನು‌ ನಾವು ಗೌರವಿಸುತ್ತೇವೆ. ಮನೆಗೆ ದ್ರೋಹ ಬಗೆಯುವ ಮುಸ್ಲಿಮರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದರು.

ಚುನಾವಣೆ ವೇಳೆ ಯಾವ ಸಾಹುಕಾರ ಹಾಗೂ ಗೌಡನ ಮಾತುಗಳನ್ನು ಕೇಳಬೇಡಿ. ನಮ್ಮ ಪಾರ್ಟಿಯಲ್ಲಿನ ಕೆಲ ಹುಳುಕಿನಿಂದ ಈ ಬಾರಿ ಅಧಿಕಾರ ಕಳೆದುಕೊಂಡಿದ್ದೇವೆ. ಮುಂದಿನ ದಿನದಲ್ಲಿ ನಾವು ಅಧಿಕಾರಕ್ಕೆ ಬಂದು ಧರ್ಮದ್ರೋಹಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದರು.

ನಾನು ಸಿಎಂ ಆದರೆ ಒಂದೆ ಒಂದು ರೂ. ಲಂಚ ಪಡೆಯದೆ ಎಲ್ಲ ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡುತ್ತೇನೆ. ದೇಶದ ಭದ್ರತೆಗಾಗಿ ಪೊಲೀಸ್ ಇಲಾಖೆಯನ್ನು ಭದ್ರಗೊಳಿಸಲು ಒತ್ತು ನೀಡಬೇಕು ಎಂದರು.

ಹಿಂದುಗಳು ಇದೇ ರೀತಿ ನಿರ್ಲಿಪ್ತವಾಗಿದ್ದರೆ ಮುಂದಿನ ದಿನದಲ್ಲಿ ಜೀವನ ನಡೆಸುವುದು ಕಠಿಣವಾಗುತ್ತದೆ ಎಂದು ಹದು ಜನಾಂಗವನ್ನು ಜಾಗೃತಗೊಳಿಸಿದರು. ಅಪ್ಪ-ಮಕ್ಕಳು ದುಡ್ಡು ನೀಡಿ ಮುಖ್ಯಮಂತ್ರಿಯಾಗಲು ಹವಣಿಸಿದರೆ ಜನಬಲದಿಂದ ನಾನು ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದು ತಮ್ಮ ಮುಖ್ಯಮಂತ್ರಿ ಹುದ್ದೆಯ ಕನಸನ್ನು ಬಿಚ್ಚಿಟ್ಟರು.

ದೇಶಕ್ಕೆ ಗಾಂಧಿ ಒಬ್ಬರಿಂದಲೇ ಸ್ವಾತಂತ್ರ್ಯ ಸಿಕ್ಕಿಲ್ಲ, ನೇತಾಜಿ, ಸುಭಾಷ್ ಚಂದ್ರ ಬೋಸ್ ಅವರ ಭಯದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆಕಿದೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದಾರೆ ಎಂದ ಅವರು ಪಾಕಿಸ್ತಾನದಲ್ಲಿ ಪ್ರವಾಹ ಉಂಟಾದರೆ ಸಿನಿಮಾ ನಟರು 10 ಕೋಟಿ ರೂ. ಪರಿಹಾರ ನಿಧಿ ಕೊಡುತ್ತಾರೆ. ಅಮೀರ್ ಖಾನ್ ನಮ್ಮ ದೇಶದಲ್ಲಿ ಅತಂತ್ರ ಭಯ ಕಾಡುತ್ತಿದೆ ಎಂಬ ಹೇಳಿಕೆ ನೀಡುತ್ತಾರೆ. ಯುವಕರು ಅವರನ್ನು ರೋಲ್ ಮಾಡೆಲ್ ಮಾಡಿಕೊಳ್ಳದೆ ನಮ್ಮ ಸೈನಿಕರು, ಪೊಲೀಸರು, ಕಾರ್ಮಿಕರನ್ನು ರೋಲ್ ಮಾಡೆಲ್ ಆಗಿ‌‌ ಮಾಡಿಕೊಳ್ಳಬೇಕು ಎಂದರು.

ರಾಜಾ ಸಿಂಗ್ ಅವರನ್ನು ನಿಷೇಧಿಸಿದ್ದಕ್ಕೆ ನನಗೆ ಬಹಳ ನೋವಾಗಿದೆ. ಓವೈಸಿಯನ್ನು ಬಿಟ್ಟು ರಾಜಾಸಿಂಗ್ ರನ್ನು ನಿಷೇಧಿಸುತ್ತೀರಿ, ಮುಂದಿನ ದಿನದಲ್ಲಿ‌ ನಾವು ಅಧಿಕಾರಕ್ಕೆ ಬಂದಾಗ ನಿಮ್ಮ ಹುದ್ದೆಗೆ ಕುತ್ತು ತರುತ್ತೇವೆ ಎಂದರು.

ಈ ವೇದಿಕೆಯಲ್ಲಿ ನನಗೆ ಭಾಷಣ ಇದೇ ರೀತಿ ಮಾಡಿ ಎಂದು ಸಲಹೆ ನೀಡುತ್ತೀರಿ. ನಾನು ಜನಪ್ರತಿನಿಧಿಯಾಗಿದ್ದೇನೆ, ನನಗೆ ಹೇಳುವ ಅಧಿಕಾರ ನಿಮಗಿಲ್ಲ. ಕೇವಲ ರಕ್ಷಣೆ ನೀಡುವ ಕೆಲಸ ಮಾಡಿ ಎಂದು ಪೊಲೀಸರ ನಡೆಗೆ ಬೇಸರ ವ್ಯಕ್ತಪಡಿಸಿದರು.

ಮೋದಿ ಆಡಳಿತದಲ್ಲಿ ಸೈನಿಕರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿದ ಪರಿಣಾಮ ದೇಶದ ಭದ್ರತೆ ಹೆಚ್ಚಾಗಿದೆ. ಮುಂದಿನ ದಿನದಲ್ಲಿ ಮುಖ್ಯಮಂತ್ರಿಯಾಗುವ ವ್ಯಕ್ತಿಯೊಬ್ಬನ ಬಗ್ಗೆ ಸಿಬಿಐ ಹಾಗೂ ಲೋಕಾಯುಕ್ತದಲ್ಲಿ ಕೇಸ್ ಹಾಕಿದ್ದೇನೆ. ಅದನ್ನು ಎದುರಿಸಲು ಸುಪ್ರೀಂ ಕೋರ್ಟ್ ನಲ್ಲಿ 17 ವಕೀಲರನ್ನು ಬುಕ್ ಮಾಡಿಕೊಂಡಿದ್ದಾರೆ ಎಂದು ಕುಟುಕಿದರು.

ಗಮನಸೆಳೆದ ಮೆರವಣಿಗೆ :

ಗಣೇಶೋತ್ಸವ ಮೆರಚಣಿಗೆಯುದ್ದಕ್ಕೂ ಬೊಂಬೆ ಕುಣಿತ, ಪುಣ್ಯಕೋಟಿ, ಆಂಜನೇಯ, ಶ್ರೀಕೃಷ್ಣ, ಛತ್ರಪತಿ‌ ಶಿವಾಜಿ‌ ಮಹಾರಾಜ, ಸ್ಥಬ್ದ ಚಿತ್ರ ಮೆರವಣಿಗೆ, ಮಹಾರಾಷ್ಟ್ರದ ಸ್ವರನಾದ ಸಂಭಾಳ, ಹಲಗೆ ವಾದನ ನೋಡುಗರ ಕಣ್ಮನ ಸೆಳೆಯಿತು. ಡಿಜೆ ಹಾಡಿಗೆ ಯುವಸಮೂಹ ಭರ್ಜರಿ ಹೆಜ್ಜೆ ಹಾಕಿದರು.

ಬಿಗಿ ಬಂದೋಬಸ್ತ್: ನಗರದ ಜನತಾ ರಾಜಾ ಎಂದೇ ಖ್ಯಾತಿ ಹೊಂದಿರುವ ಗಣೇಶ ಮೂರ್ತಿ ವಿಸರ್ಜನೆಗೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಏರ್ಪಡಿಸಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ಡಿವೈಎಸ್ಪಿ ಶಾಂತವೀರ ಈ, ಸಿಪಿಐ ಹಾಗೂ ಪಿಎಸ್ಐ ಅಜಿತ ಕುಮಾರ ಹೊಸಮನಿ ಸೇರಿದಂತೆ ನೂರಾರು ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಒದಗಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next