Advertisement
ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರಿಗೆ ಆಪ್ತರಾಗಿದ್ದ ಜೀವನದ ಕೊನೇ ಕ್ಷಣದವರೆಗೆ ಕಾಂಗ್ರೆಸ್ ಜತೆ ನಿಕಟಪೂರ್ವ ಸಂಬಂಧ ಇರಿಸಿಕೊಂಡು ಬಂದಿದ್ದ ಜಾಫರ್ ಷರೀಫ್, ನಂತರದ ದಿನಗಳಲ್ಲಿ ರಾಜೀವ್‌ಗಾಂಧಿ, ಸೋನಿಯಾಗಾಂಧಿ, ರಾಹುಲ್‌ಗಾಂಧಿ ಅವರೊಂದಿಗೂ ನೇರ ಸಂಪರ್ಕ ಹೊಂದಿದ್ದರು. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಅರಬ್ ರಾಷ್ಟ್ರಗಳ ಜತೆಗಿನ ಸಂಪರ್ಕಕ್ಕೆ ನೆರವಾಗಿದ್ದರು.
Related Articles
2009ರಲ್ಲಿ ಬೆಂಗಳೂರು ಉತ್ತರ ಲೋಕಸಭಾ ಚುನಾವಣೆ ಅವರ ಕಡೇ ಸ್ಪರ್ಧೆ. ಆ ನಂತರ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರೂ ಟಿಕೆಟ್ ಸಿಗಲಿಲ್ಲ. ಮೊಮ್ಮಗನಿಗೆ ಎರಡು ಬಾರಿ ಹೆಬ್ಟಾಳ ಕ್ಷೇತ್ರದಿಂದ ಟಿಕೆಟ್ ಪಡೆದು, ಸೋಲು ಕಂಡ ನಂತರ ತೀವ್ರ ಬೇಸರಗೊಂಡಿದ್ದರು. ತಮ್ಮ ಸಮುದಾಯದ ನಾಯಕರೇ ತಮ್ಮ ವಿರುದ್ಧ ರಾಜಕೀಯ ಸಂಚು ರೂಪಿಸಿದ್ದು ಅವರಿಗೆ ನೋವು ತರಿಸಿತ್ತು.
Advertisement
2014ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗದೆ ಒಮ್ಮೆ ಮುನಿಸಿಕೊಂಡು ಜೆಡಿಎಸ್ ಸೇರ್ಪಡೆ ಯೋಚನೆ ಮಾಡಿ ಮೈಸೂರು ಕ್ಷೇತ್ರದಿಂದ ಬಿ ಫಾರಂ ಸಹ ಪಡೆದು ಮೆಕ್ಕಾಗೆ ಹೋಗಿದ್ದರು. ಆದರೆ, ನಂತರ ಆ ತೀರ್ಮಾನ ಬಿಟ್ಟು ಈ ವಯಸ್ಸಿನಲ್ಲಿ ನಾನ್ಯಾಕೆ ಕಾಂಗ್ರೆಸ್ ಬಿಡಲಿ ಎಂದು ಪ್ರಶ್ನಿಸಿ ಕಾಂಗ್ರೆಸ್‌ನಲ್ಲೇ ಮುಂದುವರಿದಿದ್ದರು.
ವಿಶ್ವನಾಥ್‌ಗಾಗಿ ತ್ಯಾಗ!2014ರಲ್ಲಿ ಕಾಂಗ್ರೆಸ್‌ನಿಂದ ಮೈಸೂರು ಲೋಕಸಭೆ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಈಗಿನ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು, “ಷರೀಫ್ ಸಾಹೇಬರು ನನಗೆ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಟಿಕೆಟ್ ಸಿಗಲು ಕಾರಣಕರ್ತರಾಗಿದ್ದವರು. ಅವರು ನನ್ನ ವಿರುದ್ಧ ಸ್ಪರ್ಧೆ ಮಾಡುವುದಿಲ್ಲ’ ಎಂದು ಹೇಳಿದ್ದರು. ಜತೆಗೆ ದೂರವಾಣಿ ಮೂಲಕವೂ ಸಂಪರ್ಕ ಮಾಡಿ ನೀವು ನಿಲ್ಲುವುದಾದರೆ ಹೇಗೆ? ಎಂದಿದ್ದರು. ಅದರಿಂದ ಕೊನೇ ಕ್ಷಣದಲ್ಲಿ ಷರೀಫ್ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು ಎಂದೇ ವಿಶ್ಲೇಷಿಸಲಾಗಿತ್ತು.
ಜಾಫರ್ ಷರೀಫ್ ಕೇವಲ ಮುಸ್ಲಿಂ ಸಮುದಾಯದ ನಾಯಕರಷ್ಟೇ ಅಗಿರಲಿಲ್ಲ. ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ರಾಮನಗರ, ಮೈಸೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಮುಸ್ಲಿಂ ಸಮುದಾಯದ ಜತೆ ಇತರೆ ಸಮುದಾಯಗಳ ಮೇಲೂ ಹಿಡಿತ ಹೊಂದಿದ್ದರು. ಬೆಂಗಳೂರಿನಲ್ಲಿ ಕ್ಷೇತ್ರ ಪುನರ್‌ವಿಂಗಡಣೆಗೆ ಮುಂಚಿನ ವರ್ತೂರು, ಯಲಹಂಕ, ಭಾರತೀನಗರ, ಶಾಂತಿನಗರ, ಶಿವಾಜಿನಗರ, ಹೊಸಕೋಟೆ ಕ್ಷೇತ್ರಗಳಲ್ಲಿ ಜಾಫರ್ ಷರೀಫ್ ಅವರು ಹೇಳಿದವರಿಗೆ ಟಿಕೆಟ್ ದೊರೆಯುತ್ತಿತ್ತು. ಕಾಂಗ್ರೆಸ್ ಟಿಕೆಟ್ ಪಡೆದವರು ಜಾಫರ್ ಷರೀಫ್ ಅವರ ವರ್ಚಸ್ಸಿನಿಂದ ಗೆಲ್ಲುತ್ತಿದ್ದರು. ಅಷ್ಟರ ಮಟ್ಟಿಗೆ ಜಾಫರ್ ಷರೀಫ್ ತಮ್ಮ ಪ್ರಭಾವ ಹೊಂದಿದ್ದರು. ಪಕ್ಷಾತೀತ ಒಡನಾಟ
ರಾಜಕಾರಣದಲ್ಲಿ ಕಾಂಗ್ರೆಸ್ ನಾಯಕರ ಜತೆಗಷ್ಟೇ ಅಲ್ಲ, ಎಚ್.ಡಿ.ದೇವೇಗೌಡ, ಮಾಯಾವತಿ. ಫರೂಕ್ ಅಬ್ದುಲ್ಲಾ, ಚಂದ್ರಬಾಬು ನಾಯ್ಡು ಸೇರಿ ಹಲವು ನಾಯಕರ ಜತೆಯೂ ನಿಕಟ ಬಾಂಧವ್ಯ ಹೊಂದಿದ್ದರು. ಒಮ್ಮೆ ಮಾಯಾವತಿಯವರು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬಿಎಸ್‌ಪಿ ಸಮಾವೇಶ ಮಾಡಿದಾಗ ಸಭಿಕರ ಸಾಲಿನಲ್ಲಿ ಕುಳಿತು ಭಾಷಣ ಆಲಿಸಿದ್ದರು. ಬಿಜೆಪಿ ನಾಯಕರ ಜತೆಯೂ ವೈಯಕ್ತಿಕ ಸ್ನೇಹ ಹೊಂದಿದ್ದರು. ಬೆಂಗಳೂರಿನ ನಾಗವಾರದಲ್ಲಿ ಸಮರತಾ ಸಂಗಮ ಆರ್‌ಎಸ್‌ಎಸ್ ಸಮಾವೇಶ ಆದಾಗಲೂ ಆ ಕ್ಷೇತ್ರದ ಸಂಸದರಾಗಿ ಖುದ್ದು ಭೇಟಿ ನೀಡಿ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಿಸಿದ್ದರು. ಕಾಂಗ್ರೆಸ್‌ನ ಸೇವಾದಳ, ಬಿಜೆಪಿಯ ಆರ್‌ಎಸ್‌ಎಸ್ ಒಂದೇ ಸೇವಾ ಮನೋಭಾವವುಳ್ಳ ವಿಭಾಗಗಳು. ರಾಜಕೀಯ ಸೋಂಕು ತಾಕದಿರಲಿ ಎನ್ನುತ್ತಿದ್ದರು. ಮುಸ್ಲಿಂ ಪ್ರಭಾವಿ ನಾಯಕ
ರಾಜ್ಯದ ಮುಸ್ಲಿಂ ಸಮುದಾಯದಲ್ಲಿ ಮುಖ್ಯಮಂತ್ರಿ ಆಗುವ ಅರ್ಹತೆ ಹೊಂದಿದ್ದವರು ಜಾಫರ್ ಷರೀಫ್. ನಜೀರ್ ಸಾಬ್, ಅಜೀಜ್ ಸೇs…, ಬಿ.ಎ.ಮೊಯಿದ್ದೀನ್ ಸಹ ಮುಸ್ಲಿಂ ಸಮುದಾಯದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದ ನಾಯಕರು. ಅವರೆಲ್ಲರೂ ರಾಜ್ಯ ರಾಜಕಾರಣಕ್ಕೆ ಸೀಮಿತರಾಗಿದ್ದರು. ಆದರೆ, ಜಾಫರ್ ಷರೀಫ್ ಅವರು ಕೇಂದ್ರ ರಾಜಕಾರಣದಲ್ಲಿ ಅನುಭವ ಹೊಂದಿದ್ದವರು. ಮುಸ್ಲಿಂ ಸಮುದಾಯದಲ್ಲಿ ಸಿಎಂ ಆಗಬಲ್ಲ ನಾಯಕ ಎನಿಸಿಕೊಂಡಿದ್ದರು. ಕಾಂಗ್ರೆಸ್‌ನಿಂದ ಸಿಎಂ ಸ್ಥಾನದ ಪ್ರಸ್ತಾಪ ಬಂದಾಗ ಕೆಲವೊಮ್ಮೆ ಜಾಫರ್ ಷರೀಫ್ ಅವರ ಹೆಸರು ಪ್ರಸ್ತಾಪವಾಗಿದ್ದೂ ಉಂಟು. – ಎಸ್. ಲಕ್ಷ್ಮಿನಾರಾಯಣ