ಅಳ್ನಾವರ: ಹುಲಿಕೇರಿಯ ಇಂದಿರಮ್ಮನ ಕೆರೆಯಲ್ಲಿ ಮಾಸಾರಂಭದ ಮಳೆಗೆ ನೀರು ಅಪಾಯಮಟ್ಟಕ್ಕಿಂತ ಹೆಚ್ಚು ಸಂಗ್ರಹವಾಗಿದ್ದರಿಂದ ಕೆರೆ ಒಡೆಯುವ ಭೀತಿ ಎದುರಾಗಿತ್ತು. ಹೀಗಾಗಿ ನೀರನ್ನು ಗೇಟ್‌ಗಳ ಮೂಲಕ ಅಧಿಕ ಪ್ರಮಾಣದಲ್ಲಿ ಹೊರಗೆ ಬಿಟ್ಟಿದ್ದು, ಮಳೆ ನಿಂತರೂ ಗೇಟ್‌ಗಳನ್ನು ಮುಚ್ಚದಿರುವುದರಿಂದ ನೀರು ಹರಿದು ಹೋಗುತ್ತಿದೆ, ಕೆರೆ ಬರಿದಾಗುತ್ತಿದೆ. ಬೇಸಿಗೆಯಲ್ಲಿ ನೀರಿಗಾಗಿ ಪರದಾಡುವ ಎಚ್ಚರಿಕೆ ಕರೆಗಂಟೆ ಬಾರಿಸುತ್ತಿದೆ.
ಬೊಬ್ಬಿರಿದ ಕೆರೆ ಶಾಂತ: ನೀರು ಭರ್ತಿಯಾಗಿ ಕೆರೆ ಒಡೆಯುವ ಆತಂಕ ಎದುರಾಗಿತ್ತು. ಅಳ್ನಾವರದ ಜನ ಮುಳುಗಡೆ ಭೀತಿಯಲ್ಲಿದ್ದರು. ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿತ್ತು. ಆ ಸ್ಥಿತಿಯಲ್ಲಿ ಅಪಾಯ ದೂರ ಮಾಡಲು ಕೆರೆಯ ಗೇಟ್‌ಗಳನ್ನು ತೆರೆದು ನೀರು ಹೊರಬಿಡಲಾಗಿತ್ತು. ಅದು ಈಗಲೂ ಮುಂದುವರಿದಿದೆ. ಇದರಿಂದ ಬೇಸಿಗೆಯಲ್ಲಿ ನೀರಿನ ಅಭಾವ ಶತಸಿದ್ಧ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಕೆರೆ ಸಂರಕ್ಷಣೆ ಅಗತ್ಯ: ಅಳ್ನಾವರ ತಾಲೂಕಿನ ಹುಲಿಕೇರಿ, ಕಡಬಗಟ್ಟಿ, ಕಾಶೆನಟ್ಟಿ ಹಾಗೂ ಖಾನಾಪುರ ತಾಲೂಕಿನ ಕಕ್ಕೇರಿ, ಸುರಪುರ ಗ್ರಾಮಗಳ ಸಾವಿರಾರು ಏಕರೆ ಜಮೀನುಗಳಿಗೆ ನೀರಾವರಿಗಾಗಿ ಇದೇ ಕೆರೆ ನೀರನ್ನು ಉಪಯೋಗಿಸಲಾಗುತ್ತದೆ. ಒಂದೂವರೆ ಟಿಎಂಸಿ ಅಡಿಗೂ ಅಧಿಕ ನೀರು ಸಂಗ್ರಹವಾಗುತ್ತದೆ. ಕೆರೆಯ ನೀರನ್ನು ಹಳ್ಳದ ಮೂಲಕ ಹರಿಸಿ ಅಳ್ನಾವರದಲ್ಲಿ ನಿರ್ಮಾಣಗೊಂಡಿರುವ ಬ್ಯಾರೇಜ್‌ನಲ್ಲಿ ಸಂಗ್ರಹಿಸಿಟ್ಟುಕೊಂಡು ಬೇಸಿಗೆಯಲ್ಲಿ ಪಟ್ಟಣದ ಜನರಿಗೆ ಕುಡಿಯಲು ಉಪಯೋಗಿಸಲಾಗುತ್ತದೆ. ಭಾರೀ ಮಳೆಯಿಂದ ಕೆರೆಗೆ ಹಾನಿಯಾಗಿದ್ದು, ಸಂರಕ್ಷಿಸಿಕೊಳ್ಳುವದು ಅತಿ ಅವಶ್ಯವೆನಿಸಿದೆ.
ಕೊಚ್ಚಿ ಹೋಗಿದೆ ಬ್ಯಾರೇಜ್: ಅಳ್ನಾವರ ಪಟ್ಟಣಕ್ಕೆ ಕುಡಿಯುವ ಉದ್ದೇಶಕ್ಕಾಗಿ ನೀರು ಸಂಗ್ರಹಿಸಿಟ್ಟುಕೊಳ್ಳಲು ನಿರ್ಮಾಣವಾಗಿರುವ ಬ್ಯಾರೇಜ್ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಮರು ನಿರ್ಮಾಣಕ್ಕೆ 1.5 ಕೋಟಿ ವೆಚ್ಚದ ಕ್ರಿಯಾ ಯೋಜನೆಯನ್ನು ಜಲಮಂಡಳಿಯವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅಲ್ಲದೆ ಕೆರೆಯ ನೀರಿನ ಪ್ರವಾಹಕ್ಕೆ ಸಿಲುಕಿ ಬೆಳೆಗಳೆಲ್ಲ ಕೊಚ್ಚಿ ಹೋಗಿದ್ದು, ರೈತರು ಹೆಚ್ಚಿನ ಹಾನಿಗೆ ಒಳಗಾಗಿದ್ದಾರೆ. ಕೆಲವೊಬ್ಬರ ಜಮೀನಿನಲ್ಲಿ ಗುರುತಿಸಲೂ ಬೆಳೆ ಇಲ್ಲದಂತಾಗಿದೆ. ಸೂಕ್ತ ಪರಿಹಾರಕ್ಕೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
Advertisement
ಈಗ ಕೆರೆಯಲ್ಲಿನ ನೀರು ತಳ ಕಾಣುವ ಹಂತಕ್ಕೆ ಬಂದಿದ್ದು, ಬೇಸಿಗೆಯಲ್ಲಿ ಹೇಗೆ? ಎಂಬ ಪ್ರಶ್ನೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಮಳೆಯಾಗುತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಮಳೆ ಕಡಿಮೆಯಾಗಿ ಒಳಹರಿವು ನಿಂತಿದೆ. ಯಾವುದೇ ಅಪಾಯ ಇಲ್ಲದ್ದರಿಂದ ಪೋಲಾಗುತ್ತಿರುವ ನೀರನ್ನು ನಿಲ್ಲಿಸಿಕೊಳ್ಳಬೇಕು ಎಂಬು ಮಾತು ಸ್ಥಳಿಯರಿಂದ ಕೇಳಿಬಂದಿದೆ. ಕೆರೆ ಪುನಶ್ಚೇತನಗೊಳಿಸಬೇಕು. ಒಡ್ಡುಗಳನ್ನು ಬಲಪಡಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.
Related Articles
Advertisement
1976ರಲ್ಲಿ ಶುರು-1984ರಲ್ಲಿ ಪೂರ್ಣ:
ಜಿಲ್ಲೆಯ ಸಣ್ಣ ನೀರಾವರಿ ಕೆರೆಗಳಲ್ಲಿಯೇ ದೊಡ್ಡದು ಎನಿಸಿರುವ ಹುಲಿಕೇರಿ ಇಂದಿರಮ್ಮನ ಕೆರೆಯು ಅಳ್ನಾವರ ಭಾಗದ ಜೀವನಾಡಿ ಎನಿಸಿದೆ. 1976ರಲ್ಲಿ ಪ್ರಾರಂಭವಾದ ಕೆರೆ ನಿರ್ಮಾಣ ಕಾರ್ಯ 1984ರಲ್ಲಿ ಪೂರ್ಣಗೊಂಡಿತು. 1988ರಲ್ಲಿ ಕೆರೆ ಭರ್ತಿಯಾಗಿ ಸಾಕಷ್ಟು ಆಸ್ತಿಪಾಸ್ತಿಗೆ ಹಾನಿಯಾಗಿತ್ತು. ನಂತರ 1992, 1998, 2002, 2010 ಮತ್ತು 2015 ರಲ್ಲಿ ಭರ್ತಿಯಾದರೂ ಹಾನಿಯಾಗಿರಲಿಲ್ಲ. ಆದರೆ, ಈ ಸಲ ಮಾತ್ರ ಅತಿ ಹೆಚ್ಚು ನೀರು ಒಳಹರಿವು ಇದ್ದುದರಿಂದ ಅಂದಾಜು ಹತ್ತು ಕೋಟಿಗೂ ಅಧಿಕ ಹಾನಿಯಾಗಿದೆ. ಕೆರೆ ನಿರ್ಮಾಣ ಸಮಯದಲ್ಲಿ ಅಂದಿನ ಮುಖ್ಯಮಂತ್ರಿ
ದೇವರಾಜ ಅರಸ್ ಭೇಟಿ ನೀಡಿ ಪರಿಶೀಲಿಸಿದ್ದು ವಿಶೇಷ:
ಜಲಾನಯನ ಪ್ರದೇಶ 51 ಚ.ಕಿ.ಮೀ. ವಾರ್ಷಿಕ ಸರಾಸರಿ ಮಳೆ 1059.94 ಮಿಮೀ ಜಲಾಶಯದ ಒಟ್ಟು ಸಾಮರ್ಥ್ಯ 5.69 ಮಿಲಿಯನ್ ಘನ ಮೀ. ಅಚ್ಚುಕಟ್ಟು ನೀರಾವರಿ ಕ್ಷೇತ್ರ 1241 ಹೆಕ್ಟೇರ್ ಕೆರೆಯ ಗರಿಷ್ಠ ಎತ್ತರ 121.75 ಮೀಟರ್ ಕೆರೆ ಕೋಡಿಯ ಉದ್ದ 87.50 ಮೀಟರ್ ಕೆರೆ ಏರಿಯ ಮೇಲ್ಭಾಗದ ಅಗಲ 2.43 ಮೀಟರ್ ಕೆರೆ ಎಡದಂಡೆ ಕಾಲುವೆ ಉದ್ದ 9.87 ಕಿಮೀ; ಸಾಮರ್ಥ್ಯ 42.67 ಕ್ಯೂಸೆಕ್ಸ್ ಬಲದಂಡೆ ಕಾಲುವೆ 2.95 ಕಿಮೀ; ಸಾಮರ್ಥ್ಯ 7.28 ಕ್ಯೂಸೆಕ್ಸ್
ವರ್ಷಪೂರ್ತಿ ಕೆರೆಯಲ್ಲಿ ನೀರು ಖಾಲಿಯಾಗುವುದಿಲ್ಲ. ಈ ಕೆರೆಯ ನೀರನ್ನು ಬಳಕೆ ಮಾಡಿ ಜೀವನ ಸಾಗಿಸುವ ಗ್ರಾಮದ ರೈತರ ಬದುಕು ಹಸನಾಗುತ್ತಿದೆ. ಕೆರೆಯ ನೀರನ್ನು ಮಿತವಾಗಿ ಬಳಕೆ ಮಾಡಲು ಮತ್ತು ಕೆರೆಯ ನಿರ್ವಹಣೆಗೆ ಮೆಲ್ವಿಚಾರಣಾ ಸಮಿತಿ ರಚನೆ ಮಾಡುವುದು ಸೂಕ್ತ. • ಶಿವಾಜಿ ಕಿತ್ತೂರ, ಹುಲಿಕೇರಿ ರೈತ
•ಎಸ್. ಗೀತಾ