Advertisement

ಬಡ ಮಹಿಳೆಯರಿಗೆ ಇಂದಿರಾ ಸಾರಿಗೆ

11:57 AM Nov 22, 2017 | |

ಬೆಂಗಳೂರು: ನಗರದಲ್ಲಿರುವ ಸಿದ್ಧಉಡುಪು ಕಾರ್ಖಾನೆ (ಗಾರ್ಮೆಂಟ್‌ ಫ್ಯಾಕ್ಟರಿ)ಗಳಲ್ಲಿನ ಮಹಿಳಾ ಕಾರ್ಮಿಕರಿಗೆ ಸರ್ಕಾರದ ಮಹತ್ವಾಕಾಂಕ್ಷಿ “ಇಂದಿರಾ ಸಾರಿಗೆ’ ಸೇವೆ ಪರಿಚಯಿಸಲು ಉದ್ದೇಶಿಸಿದ್ದು, ಯೋಜನೆಯಿಂದ ಆಗಬಹುದಾದ ಹೊರೆ ತಗ್ಗಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕಾರ್ಮಿಕ ಇಲಾಖೆ, ಬಿಎಂಟಿಸಿ ಮೊರೆಹೋಗಿದೆ.

Advertisement

ಈ ಸಂಬಂಧ ಕಾರ್ಖಾನೆಗಳಿಗೆ ಬೆಳಿಗ್ಗೆ ಪಿಕ್‌ಅಪ್‌ ಮತ್ತು ಸಂಜೆ ಡ್ರಾಪ್‌ ಅಥವಾ ಕಾರ್ಖಾನೆಗಳ ಮಹಿಳೆಯರಿಗಾಗಿಯೇ ಪ್ರತ್ಯೇಕ ಬಸ್‌ ಮೀಸಲಿಡುವುದು ಅಥವಾ ರಿಯಾಯ್ತಿ ದರದಲ್ಲಿ “ಇಂದಿರಾ ಪಾಸು’ ವಿತರಣೆ ಸೇರಿದಂತೆ ಹಲವು ಆಯ್ಕೆಗಳು ಬಿಎಂಟಿಸಿ ಮುಂದಿವೆ. ಈ ಆಯ್ಕೆಗಳನ್ನು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ರಚನೆಯಾದ ಸಮಿತಿ ಮುಂದಿಡಲಾಗಿದೆ. ಈ ಪೈಕಿ ಸೂಕ್ತ ಮಾದರಿಯನ್ನು ಸರ್ಕಾರ ಅಂತಿಮಗೊಳಿಸಲಿದೆ. 

ನಗರದಲ್ಲಿ ಸುಮಾರು 775 ಗಾರ್ಮೆಂಟ್‌ ಕಾರ್ಖಾನೆಗಳಿದ್ದು, 2.50ರಿಂದ 3 ಲಕ್ಷ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ ಶೇ. 80ರಷ್ಟು ಮಹಿಳೆಯರೇ ಆಗಿದ್ದಾರೆ. ಅಲ್ಲೆಲ್ಲಾ ಬಹುತೇಕ ಖಾಸಗಿ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿವೆ. ಈ ಕಾರ್ಖಾನೆಗಳಿಗೆ ಬಿಎಂಟಿಸಿ ಬಸ್‌ಗಳ ಕಾರ್ಯಾಚರಣೆಗೆ ಈ ಹಿಂದೆಯೇ ಚಿಂತನೆ ನಡೆದಿತ್ತು. ಈಗ “ಇಂದಿರಾ ಸಾರಿಗೆ’ ಅಡಿ ಅದನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 

ಇನ್ನು ಈ ಮಹತ್ವಾಕಾಂಕ್ಷಿ “ಇಂದಿರಾ ಸಾರಿಗೆ’ ಯೋಜನೆಯಿಂದ ಬಿಎಂಟಿಸಿ ಮೇಲೆ ಆಗಬಹುದಾದ ಹೊರೆ ತಗ್ಗಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆರ್ಥಿಕ ನೆರವು ಪಡೆಯಲು ನಿರ್ಧರಿಸಲಾಗಿದೆ. ಜತೆಗೆ ಈ ಯೋಜನೆಗೆ ಕಾರ್ಖಾನೆಗಳ ಸಹಭಾಗಿತ್ವ ಕೋರುವಂತೆ ಕಾರ್ಮಿಕ ಇಲಾಖೆಗೆ ಸೂಚಿಸಲಾಗಿದೆ. ಅದರಂತೆ ಈಗ ಕಾರ್ಖಾನೆಗಳ ಮಾಲಿಕರೊಂದಿಗೆ ಕಾರ್ಮಿಕ ಇಲಾಖೆ ಮಾತುಕತೆ ನಡೆಸಲಿದೆ.  

ಪ್ರಸ್ತುತ “ಅಟಲ್‌ ಸಾರಿಗೆ’ ಅಡಿ ಶೇ. 50ರಷ್ಟು ರಿಯಾಯ್ತಿ ದರದಲ್ಲಿ ಗ್ರಾಮೀಣ ಭಾಗದಲ್ಲಿ ಸೇವೆ ಕಲ್ಪಿಸಲಾಗುತ್ತಿದೆ. 19 ಬಸ್‌ಗಳು ನಗರದ ಸುತ್ತಲಿನ ಗ್ರಾಮೀಣ ಭಾಗಗಳಲ್ಲಿ ಕಾರ್ಯಾಚರಣೆ ಮಾಡುತ್ತಿವೆ. ಆದರೆ, ಇದಕ್ಕೆ ಸರ್ಕಾರದಿಂದ ಯಾವುದೇ ನೆರವು ಇಲ್ಲ. ಇದರಿಂದ ನಿಗಮಕ್ಕೆ ಹೊರೆ ಆಗುತ್ತಿದೆ. ಇಂದಿರಾ ಸಾರಿಗೆಯಲ್ಲೂ ಇದು ಮರುಕಳಿಸದಿರಲು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಇತರೆ ಇಲಾಖೆಗಳ ನೆರವು ಪಡೆಯಲಾಗುತ್ತಿದೆ. ಅಟಲ್‌ ಸಾರಿಗೆ ಮಾದರಿಯಲ್ಲೇ ಇಲ್ಲಿಯೂ ಶೇ. 50ರಷ್ಟು ರಿಯಾಯ್ತಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 

Advertisement

ಯೋಜನೆ ಅನುಷ್ಠಾನಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಮಿಕ ಇಲಾಖೆ ಆಯುಕ್ತರು ಹಾಗೂ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರನ್ನು ಒಳಗೊಂಡ ಸಮಿತಿ ರಚಿಸಿದ್ದು, ತಿಂಗಳಲ್ಲಿ ಸಾಧಕ-ಬಾಧಕಗಳ ಅಧ್ಯಯನ ನಡೆಸಿ, ಯೋಜನೆ ಅನುಷ್ಠಾನಗೊಳಿಸುವ ಗುರಿ ಹೊಂದಲಾಗಿದೆ ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜು ತಿಳಿಸಿದರು.

ಇಂದಿರಾ ಪಾಸು?: ಇಂದಿರಾ ಸಾರಿಗೆ ಜತೆ “ಇಂದಿರಾ ಪಾಸು’ ಕೂಡ ಪರಿಚಯಿಸುವ ಚಿಂತನೆ ನಡೆದಿದೆ. ಈ ಪಾಸುಗಳನ್ನು ಯಾವುದೇ ಮಹಿಳೆ ಹೊಂದಬಹುದು. ಯೋಜನೆಯ ವ್ಯವಸ್ಥಿತ ಅನುಷ್ಠಾನಕ್ಕಾಗಿ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಅದು ರೂಪುರೇಷೆ ಅಂತಿಮಗೊಳಿಸಲಿದೆ ಎಂದು ಬಿಎಂಟಿಸಿ ಅಧ್ಯಕ್ಷ ಎಂ. ನಾಗರಾಜ (ಯಾದವ್‌) ತಿಳಿಸಿದರು. 

“ಇಂದಿರಾ ಸಾರಿಗೆ’ಗೆ ಸಂಬಂಧಿಸಿದಂತೆ ಬಿಎಂಟಿಸಿಯಿಂದ ಸರ್ಕಾರಕ್ಕೆ ಅಥವಾ ಯೋಜನೆ ಅನುಷ್ಠಾನಕ್ಕೆ ರಚಿಸಿದ ಸಮಿತಿಗೆ ಯಾವುದೇ ಅಧಿಕೃತ ಪ್ರಸ್ತಾವನೆ ಸಲ್ಲಿಸಿಲ್ಲ. ಈಗಷ್ಟೇ ಪ್ರಾಥಮಿಕ ಸಭೆ ನಡೆದಿದೆ. ಮುಂದಿನ ಸಭೆಯಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ಯೋಜನೆ ಅಡಿ ರಿಯಾಯ್ತಿಗಿಂತ ಸಾಮಾನ್ಯ ಪ್ರಯಾಣ ದರದಲ್ಲಿ ಸೇವೆ ನೀಡುವುದು ಸೂಕ್ತ ಎಂಬುದು ನನ್ನ ಅನಿಸಿಕೆ. ಆದರೆ, ಈ ಬಗ್ಗೆ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್‌ ಸ್ಪಷ್ಟಪಡಿಸಿದರು. 

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next