ಉಡುಪಿ: ತುರ್ತುಪರಿಸ್ಥಿತಿ ಜಾರಿ ಬಳಿಕ 1977ರಲ್ಲಿ ಮಹಾಚುನಾವಣೆ ನಡೆದಾಗ ಕರ್ನಾಟಕದಲ್ಲಿ ಕಾಂಗ್ರೆಸ್ ಅಲೆ ಇತ್ತು. ಆದರೆ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಸೋತಿತ್ತು. ಅಮೇಠಿಯಲ್ಲಿ ಇಂದಿರಾ ಗಾಂಧಿಯವರೂ ಸೋಲುಂಡಿದ್ದರು.ಆಗ ಇಂದಿರಾಗೆ ಪುನರ್ಜನ್ಮ ನೀಡಿದ್ದು ಚಿಕ್ಕಮಗಳೂರು ಕ್ಷೇತ್ರ.
1977ರಲ್ಲಿ ಡಿ.ಬಿ. ಚಂದ್ರೇಗೌಡ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂದಿರಾಗೆ ಲೋಕಸಭೆಗೆ ಆಯ್ಕೆಯಾಗಲು ಉಪ
ಚುನಾವಣೆಗೆ ಅವಕಾಶ ಮಾಡಿಕೊಟ್ಟರು. ಚುನಾವಣೆ ನಡೆದದ್ದು 1978ರಲ್ಲಿ. ಇಂದಿರಾ ಎದುರು ವೀರೇಂದ್ರ ಪಾಟೀಲರು ಜನತಾ ಪಕ್ಷದಿಂದ ಸ್ಪರ್ಧಿಸಿದ್ದರು. 2009ರ ವರೆಗೆ ಕಾರ್ಕಳ ಮತ್ತು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಚಿಕ್ಕಮಗಳೂರು ಕ್ಷೇತ್ರಕ್ಕೆ ಸೇರಿತ್ತು. ಈ ಹಿನ್ನೆಲೆಯಲ್ಲಿ ಆ ಚುನಾವಣೆ ಉಡುಪಿ, ದ.ಕ. ಜಿಲ್ಲೆಯವರಿಗೂ ಮಹತ್ವದ್ದಾಗಿತ್ತು.
ಇಂದಿರಾ ಭಾಷಣವನ್ನು ಕೇಳಲು ಸಾವಿರಾರು ಜನ ಬರುತ್ತಿದ್ದರು. ಹೆಬ್ರಿಯಲ್ಲಿ ಮಳೆ ಬರುತ್ತಿದ್ದರೂ ಜನ ಸೇರಿದ್ದರು. ಇಂದಿರಾ ಮನೆಮನೆಗೆ ತೆರಳಿ ಮತಯಾಚನೆ ನಡೆಸಿದ್ದರು. ಆಗ ಹೆಬ್ರಿಯಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದು ಆಸ್ಕರ್ ಫೆರ್ನಾಂಡಿಸ್.
ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರು ವೀರೇಂದ್ರ ಪಾಟೀಲ್ ಪರವಾಗಿ ಕುತ್ತಿಗೆಗೆ ಬಕೆಟ್ ಕಟ್ಟಿಕೊಂಡು ನಿಧಿ ಸಂಗ್ರಹಿಸಿದ್ದರು. ಆಗ ಕೇರಳದ ಅರ್ಥ ಸಚಿವರಾಗಿದ್ದ ಎ.ಕೆ. ಆ್ಯಂಟನಿ ರಾಜೀನಾಮೆ ನೀಡಿ ಕಾರ್ಕಳದ ಬೈಲೂರಿನಲ್ಲಿ ವೀರೇಂದ್ರ ಪಾಟೀಲ್ ಪರವಾಗಿ ಪ್ರಚಾರ ಮಾಡಿದ್ದರು.
ಇಂದಿರಾ ಮತ್ತೆ ಈ ಕ್ಷೇತ್ರದಿಂದ ಸ್ಪರ್ಧಿಸಲಿಲ್ಲ. ಮುಂದಿನ ದಿನಗಳಲ್ಲಿ ವೀರೇಂದ್ರ ಪಾಟೀಲರು ಕಾಂಗ್ರೆಸ್‌ಗೆ ಸೇರಿ ಯಶಸ್ವೀ ಮುಖ್ಯಮಂತ್ರಿ ಎನಿಸಿದರೂ ಅವರು ಹುದ್ದೆಯಿಂದ ಬಲಾತ್ಕಾರವಾಗಿ ನಿರ್ಗಮಿಸುವಂತೆ ಆಯಿತು. ಆಗ ಇಂದಿರಾ ಗಾಂಧಿಯವರಿಗೆ ಕ್ಷೇತ್ರವನ್ನೇ ತ್ಯಾಗ ಮಾಡಿ ಕೊಟ್ಟಿದ್ದ ಡಿ.ಬಿ. ಚಂದ್ರೇಗೌಡರು 2009ರಲ್ಲಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿಯಿಂದ ಬೆಂಗಳೂರಿನಲ್ಲಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾದರು. ಆಗ ಇಂದಿರಾ ವಿರುದ್ಧ ಪ್ರಚಾರ ಮಾಡಿದ ಎ.ಕೆ. ಆ್ಯಂಟನಿಯವರು ಕಾಂಗ್ರೆಸ್ ನಾಯಕರಾಗಿ ಕೇಂದ್ರ ರಕ್ಷಣಾ ಸಚಿವರಾದರು.
ಇದಾಗಿ 40 ವರ್ಷಗಳ ಬಳಿಕ ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸ್ಪರ್ಧಿಸದೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಜೆಡಿಎಸ್ ಪ್ರತಿನಿಧಿಯಾಗಿ ಸ್ಪರ್ಧಿಸುತ್ತಿದ್ದಾರೆ.