Advertisement

ಪೌರಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್‌ ಊಟ

11:43 AM Jul 28, 2018 | Team Udayavani |

ಬೆಂಗಳೂರು: ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಆಗಸ್ಟ್‌ 1 ರಿಂದ “ಇಂದಿರಾ ಕ್ಯಾಂಟೀನ್‌’ಗಳಿಂದಲೇ ಮಧ್ಯಾಹ್ನದ ಬಿಸಿಯೂಟ ಪೂರೈಸಲು ಬಿಬಿಎಂಪಿ ತೀರ್ಮಾನಿಸಿದೆ. 

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಇಸ್ಕಾನ್‌ ಸಂಸ್ಥೆ ಮಧ್ಯಾಹ್ನ ಬಿಸಿಯೂಟದ ದರ ಹೆಚ್ಚಿಸುವ ಬೇಡಿಕೆ ಇರಿಸಿತ್ತು.

ಆದರೆ, ಪಾಲಿಕೆ ದರ ಹೆಚ್ಚಿಸಲು ಒಪ್ಪದ ಹಿನ್ನೆಲೆಯಲ್ಲಿ ಆಹಾರ ಪೂರೈಸುವುದಿಲ್ಲ ಎಂದು ಇಸ್ಕಾನ್‌ ಲಿಖೀತ ರೂಪದಲ್ಲಿ ತಿಳಿಸಿದೆ. ಆ ಹಿನ್ನೆಲೆಯಲ್ಲಿ ಮಧ್ಯಾಹ್ನ ಬಿಸಿಯೂಟವನ್ನು ಇಂದಿರಾ ಕ್ಯಾಂಟೀನ್‌ಗಳ ಗುತ್ತಿಗೆದಾರರ ಮೂಲಕ ಪೂರೈಸಲಾಗುವುದು ಎಂದು ಹೇಳಿದರು. 

ಪಾಲಿಕೆ ಹಾಗೂ ಇಸ್ಕಾನ್‌ ನಡುವೆ ಪ್ರತಿ ಪೌರಕಾರ್ಮಿಕನಿಗೆ 20 ರೂ.ಗೆ ಊಟ ಪೂರೈಸುವ ಕುರಿತು ಒಪ್ಪಂದವಾಗಿತ್ತು. ಜುಲೈ ಅಂತ್ಯಕ್ಕೆ ಈ ಒಪ್ಪಂದ ಮುಕ್ತಾಯವಾಗಲಿದ್ದು, ಇನ್ನು ಮುಂದೆ ಪ್ರತಿ ಊಟಕ್ಕೆ 24 ರೂ. ನೀಡಿದರೆ ಮಾತ್ರ ಆಹಾರ ಪೂರೈಕೆ ಮಾಡುವುದಾಗಿ ಇಸ್ಕಾನ್‌ ತಿಳಿಸಿದೆ.

ಆದರೆ ಪಾಲಿಕೆಯಿಂದ ಅಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದೇವೆ. ಇದೇ ವೇಳೆ ಹಿಂದೆ ಇಸ್ಕಾನ್‌ಗೆ ನೀಡುತ್ತಿದ್ದ 20 ರೂ. ದರದಲ್ಲೇ ಇಂದಿರಾ ಕ್ಯಾಂಟೀನ್‌ನಿಂದ ಆಹಾರ ಪೂರೈಸಲು ಗುತ್ತಿಗೆದಾರರು ಒಪ್ಪಿದ್ದಾರೆ. ಅದರಂತೆ ಮಸ್ಟರಿಂಗ್‌ ಕೇಂದ್ರಗಳಿಗೆ ಆಹಾರ ತಲುಪಿಸಲಾಗುವುದು ಎಂದರು ಮಾಹಿತಿ ನೀಡಿದರು. 

Advertisement

181 ವಾರ್ಡ್‌ ಮ್ಯಾಪಿಂಗ್‌ ಪೂರ್ಣ: ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ಹಾಗೂ ಇತರೆ ಸಂಸ್ಥೆಗಳು ನಡೆಸಿದ “ಟೈಮ್‌ ಆಂಡ್‌ ಮೋಷನ್‌’ ಅಧ್ಯಯನದಂತೆ ಒಬ್ಬ ಪೌರಕಾರ್ಮಿಕ ಅರ್ಧ ಕಿ.ಮೀ ಪ್ರದೇಶವನ್ನು ಮಾತ್ರ ಗುಡಿಸಲು ಸಾಧ್ಯ. ಅದರಂತೆ ವಾರ್ಡ್‌ ರಸ್ತೆಗಳ ಮ್ಯಾಪಿಂಗ್‌ ಕಾರ್ಯ ನಡೆಯುತ್ತಿದ್ದು,

ಈಗಾಗಲೇ 181 ವಾರ್ಡ್‌ಗಳ ರಸ್ತೆಗಳಲ್ಲಿ ಯಾರು ಕಸ ಗುಡಿಸಬೇಕು ಎಂದು ಮ್ಯಾಪಿಂಗ್‌ ಮಾಡಲಾಗಿದೆ. 198 ವಾರ್ಡ್‌ಗಳು ಪೂರ್ಣಗೊಂಡ ನಂತರ ಎಷ್ಟು ಮಂದಿ ಪೌರಕಾರ್ಮಿಕರು ಬೇಕಾಗುತ್ತಾರೆ ಎಂಬುದು ತಿಳಿಯಲಿದೆ. ಪ್ರಮುಖ ರಸ್ತೆಗಳ ಸ್ವತ್ಛತೆಗೆ 34 ಮೆಕ್ಯಾನಿಕಲ್‌ ಸ್ವೀಪಿಂಗ್‌ ಯಂತ್ರಗಳ ಖರೀದಿಗೆ ಟೆಂಡರ್‌ ಕರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಸೇವೆಯಿಂದ ತೆಗೆಯುವುದಿಲ್ಲ: ಸದ್ಯ ಪಾಲಿಕೆಯಲ್ಲಿರುವ ಯಾವುದೇ ಪೌರಕಾರ್ಮಿಕರನ್ನು ಸೇವೆಯಿಂದ ತೆಗೆಯುವುದಿಲ್ಲ. ಕೆಲವೊಂದು ವಾರ್ಡ್‌ಗಳಲ್ಲಿ ಕಾರ್ಮಿಕರು ಹೆಚ್ಚುವರಿಯಾಗಿದ್ದರೆ, ಕೆಲವು ಕಡೆ ಕಡಿಮೆ ಇದ್ದಾರೆ. ಹಾಗೇ 59ರಿಂದ 60 ವರ್ಷದ ಅಸುಪಾಸಿನ ಕಾರ್ಮಿಕರ ಸಂಖ್ಯೆ ಕೂಡ ಹೆಚ್ಚಾಗಿದೆ. ಅವರು ಸೇವೆಯಿಂದ ನಿವೃತ್ತರಾದ ಬಳಿಕ ಅವರ ಸ್ಥಾನಕ್ಕೆ ಹೆಚ್ಚುವರಿ ಕಾರ್ಮಿಕರನ್ನು ನಿಯೋಜಿಸಿಕೊಳ್ಳಲಾಗುವುದು ಎಂದು ಮೇಯರ್‌ ಆರ್‌.ಸಂಪತ್‌ರಾಜ್‌ ತಿಳಿಸಿದರು.

ಸುಳ್ಳು ಹೇಳಿದ್ರಾ ಮೇಯರ್‌?: ಇತ್ತೀಚೆಗೆ ನಗರದಲ್ಲಿನ ರಸ್ತೆಗುಂಡಿಗಳ ಪರಿಶೀಲನೆಗೆ ಮುಂದಾದ ಮೇಯರ್‌ ಸಂಪತ್‌ರಾಜ್‌, ರಸ್ತೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ 36 ಗುತ್ತಿಗೆದಾರರನ್ನು ಈಗಾಗಲೇ ಕಪ್ಪುಪಟ್ಟಿಗೆ ಸೇರಿಸಲಾಗಿದ್ದು, ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದಿದ್ದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಯಾವೆಲ್ಲ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂಬ ಮಾಹಿತಿ ನೀಡುವಂತೆ ಕೋರಿದಾಗ ಕಕ್ಕಾಬಿಕ್ಕಿಯಾದರು. ಕೊನೆಗೆ ಆಯುಕ್ತರಿಂದ ಪಟ್ಟಿ ಪಡೆಯುವಂತೆ ಹೇಳಿ ಜಾರಿಕೊಳ್ಳುವ ಪ್ರಯತ್ನ ಮಾಡಿದರು.

ಪ್ರತಿ ತಿಂಗಳ 7ರೊಳಗೆ ವೇತನ: ಪೌರಕಾರ್ಮಿಕರಿಗೆ ಜುಲೈ ತಿಂಗಳವರೆಗಿನ ವೇತನವನ್ನು ಅವರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗಿದ್ದು, ಸಂಪೂರ್ಣ ಮಾಹಿತಿಯನ್ನು ಪಾಲಿಕೆ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ತಿಂಗಳ 7ನೇ ತಾರೀಖೀನೊಳಗೆ ವೇತನವನ್ನು ಬಿಡುಗಡೆಗೊಳಿಸಿ, ಅದರ ಮಾಹಿತಿಯನ್ನು ವೆಬ್‌ಸೈಟ್‌ಗೆ ಹಾಕಲಾಗುವುದು ಎಂದು ಆಯುಕ್ತರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next