Advertisement

ಶೀಘ್ರ ಪ್ರಮುಖ ಆಸ್ಪತ್ರೆಗಳಲ್ಲಿ ಇಂದಿರಾ ಕ್ಯಾಂಟೀನ್‌

12:50 PM Sep 16, 2017 | Team Udayavani |

ಬೆಂಗಳೂರು: ರೋಗಿಗಳೊಂದಿಗೆ ಬರುವವರ ಅನುಕೂಲಕ್ಕಾಗಿ ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಶೀಘ್ರವೇ ಇಂದಿರಾ ಕ್ಯಾಂಟೀನ್‌ ಆರಂಭಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 

Advertisement

ನಗರದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ನೆಫ್ರೋ-ಯುರಾಲಜಿ ಸಂಸ್ಥೆ ಮತ್ತು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅನೆಕ್ಸ್‌ ಕಟ್ಟಡದ ಶಂಕುಸ್ಥಾಪನೆ, ಬಿಎಂಸಿಆರ್‌ಐನ ವಿವಿಧ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. 

ನಗರದಲ್ಲಿರುವ ಪ್ರಮುಖ ಆಸ್ಪತ್ರೆಗಳಿಗೆ ನಿತ್ಯ ನೂರಾರು ಬಡ ರೋಗಿಗಳು ಬರುತ್ತಾರೆ. ಅವರೊಂದಿಗೆ ರೋಗಿಗಳ ಸಂಬಂಧಿಕರು ಅಥವಾ ಸಹಾಯಕರು ಬರುವುದು ಸಾಮಾನ್ಯ. ಆದರೆ, ಅವರೆಲ್ಲಾ ದುಬಾರಿ ಬೆಲೆ ತೆತ್ತು ಊಟ ಮಾಡಬೇಕಾಗಿದೆ. ಆದ್ದರಿಂದ ಪ್ರಮುಖ ಆಸ್ಪತ್ರೆಗಳ ಆವರಣದಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಬೌರಿಂಗ್‌, ವಿಕ್ಟೋರಿಯಾ, ಜಯದೇವ, ಕೆ.ಸಿ. ಜನರಲ್‌ ಮತ್ತಿತರ ಆಸ್ಪತ್ರೆಗಳಲ್ಲಿ ಇಂದಿರಾ ಕ್ಯಾಂಟೀನ್‌ ತೆರೆಯಲಾಗುವುದು. ಅಗತ್ಯಬಿದ್ದರೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಎರಡು ಕ್ಯಾಂಟೀನ್‌ಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು. 

ರಸ್ತೆ ದುರಸ್ತಿ: ಅಷ್ಟೇ ಅಲ್ಲ, ಕೆಲವು ಆಸ್ಪತ್ರೆಗಳನ್ನು ಕೂಡುವ ರಸ್ತೆಗಳು ಹಾಳಾಗಿದ್ದು, ದುರಸ್ತಿಗಾಗಿ ವೈದ್ಯಕೀಯ ಶಿಕ್ಷಣ ಸಚಿವರು ಮನವಿ ಮಾಡಿದ್ದಾರೆ. ಅದರಂತೆ ಶೀಘ್ರ ಆಸ್ಪತ್ರೆ ಸುತ್ತಲಿನ ರಸ್ತೆಗಳ ದುರಸ್ತಿಗೆ ಸೂಚಿಸಲಾಗುವುದು ಹಾಗೂ ಆಸ್ಪತ್ರೆ ಆವರಣದಲ್ಲಿನ ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದೂ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. 

Advertisement

ಜಿಲ್ಲೆಗೊಂದು ವೈದ್ಯ ಕಾಲೇಜು: ಪ್ರತಿ ಜಿಲ್ಲೆಗೊಂದು ವೈದ್ಯಕೀಯ ಶಿಕ್ಷಣ ಕಾಲೇಜು ಆರಂಭಿಸುವ ಗುರಿ ಇದೆ. ಈ ಪೈಕಿ ಈಗಾಗಲೇ 12 ಹೊಸ ಕಾಲೇಜುಗಳ ತಲೆಯೆತ್ತಿದ್ದು, ಇನ್ನೂ ಏಳು ವಿವಿಧ ಹಂತಗಳಲ್ಲಿವೆ. ಶೀಘ್ರದಲ್ಲೇ ಮೈಸೂರು, ಕಲಬುರಗಿ ವೈದ್ಯಕೀಯ ಶಿಕ್ಷಣ ಕಾಲೇಜು ಆರಂಭಗೊಳ್ಳಲಿವೆ ಎಂದು ಮಾಹಿತಿ ನೀಡಿದ ಅವರು, ಪ್ರತಿ ಕಾಲೇಜಿಗೆ 400 ಕೋಟಿ ರೂ. ಖರ್ಚಾಗುತ್ತದೆ. ಇದನ್ನು ಹಂತ-ಹಂತವಾಗಿ ನಿರ್ಮಿಸಲಾಗುವುದು ಎಂದು ಸಿಎಂ ತಿಳಿಸಿದರು.

ಸಚಿವ ಡಾ.ಶರಣ ಪ್ರಕಾಶ ಪಾಟೀಲ ಮಾತನಾಡಿ, ಸೌಲಭ್ಯಗಳು ವಿಕೇಂದ್ರೀಕರಣಗೊಂಡಾಗ ಜನರ ಅಲೆದಾಟ ತಪ್ಪಲಿದೆ. ಈ ನಿಟ್ಟಿನಲ್ಲಿ ವಿಭಾಗಕ್ಕೊಂದು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಜಿಲ್ಲೆಗೊಂದು ವೈದ್ಯಕೀಯ ಶಿಕ್ಷಣ ಕಾಲೇಜು ಸೇರಿದಂತೆ ಹಲವು ವೈದ್ಯಕೀಯ ಸವಲತ್ತುಗಳನ್ನು ಸರ್ಕಾರ ವಿಸ್ತರಿಸುತ್ತಿದೆ ಎಂದು ಹೇಳಿದರು.

ನೆಫ್ರೋ-ಯುರಾಲಜಿ ಸಂಸ್ಥೆಯ ನಿರ್ದೇಶಕ ಡಾ.ಎಂ. ಶಿವಲಿಂಗಯ್ಯ ಮಾತನಾಡಿ, ಈ ಸ್ವಾಯತ್ತ ಸಂಸ್ಥೆಯಲ್ಲಿ ಪ್ರಸ್ತುತ 250 ಹೊಸ ರೋಗಿಗಳು ಬರುತ್ತಿದ್ದಾರೆ. 19 ಒಳರೋಗಿ ಶಸ್ತ್ರಚಿಕಿತ್ಸೆಗಳು, 63 ಡಯಲಿಸಿಸ್‌, 13 ಸಣ್ಣ ಮತ್ತು 8 ದೊಡ್ಡ ಶಸ್ತ್ರಚಿಕಿತ್ಸೆಗಳು ನಡೆಯುತ್ತಿವೆ. ರಾಷ್ಟ್ರೀಯ ಆರೋಗ್ಯ ಮಾನ್ಯನೆ ಮಂಡಳಿ (ಎನ್‌ಎಬಿಎಚ್‌)ಯಿಂದ ಪ್ರಮಾಣ ಪತ್ರ ಕೂಡ ಈ ಸಂಸ್ಥೆಗೆ ಇತ್ತೀಚೆಗೆ ಲಭಿಸಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ರಾಮಚಂದ್ರಗೌಡ, ಶಾಸಕ ಬಿ.ಝಡ್‌, ಜಮೀರ್‌ ಅಹಮದ್‌ ಖಾನ್‌, ಪಾಲಿಕೆ ಸದಸ್ಯೆ ಕೋಕಿಲಾ ಚಂದ್ರಶೇಖರ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ವಿ. ಮಂಜುಳಾ, ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್‌ ಖರೋಲಾ ಮತ್ತಿತರರು ಉಪಸ್ಥಿತರಿದ್ದರು.

45,387 ರೋಗಿಗಳಿಗೆ ಚಿಕಿತ್ಸೆ
ಕಳೆದ ಹತ್ತು ವರ್ಷಗಳಲ್ಲಿ ನೆಫ್ರೋ-ಯುರಾಲಜಿ ಸಂಸ್ಥೆಯಲ್ಲಿ ಒಟ್ಟಾರೆ 5.93 ಲಕ್ಷ ಹೊರ ಮತ್ತು 45,387 ಒಳರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ ಯುರಾಲಜಿ ವಿಭಾಗದಲ್ಲಿ ಹೊರರೋಗಿಗಳಾಗಿ 3,64,157 ಯುರಾಲಜಿ ಮತ್ತು 2,29,799 ನೆಫ್ರಾಲಜಿ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅದೇ ರೀತಿ, ಒಳರೋಗಿಗಳಾಗಿ 25,718 ಯುರಾಲಜಿ ಮತ್ತು 19,669 ನೆಫ್ರಾಲಜಿ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ. 

ಸಿಎಂ ಯಾಕೆ ಪಂಚೆ ಹಾಕ್ತಾರೆ?
“ನಾನೂ ಹಿಂದೆ ಪ್ಯಾಂಟು-ಶರ್ಟು ಹಾಕ್ತಿದ್ದೆ. ಆದರೆ, ನನ್ನದು ಒಣಚರ್ಮ. ಇದರಿಂದ ಸಮಸ್ಯೆಯಾಯ್ತು. ಚಳಿಗಾಲದಲ್ಲಿ ಇದು ಮತ್ತಷ್ಟು ಸಮಸ್ಯೆ ಆಗಿಬಿಡೋದು. ಹಾಗಾಗಿ, ಡಾಕ್ಟರ್‌ ಸಲಹೆ ಮೇರೆಗೆ ಪಂಚೆ ಉಡಲು ಶುರುಮಾಡಿದೆ. ಅದು ರೂಢಿ ಆಗ್ಬಿಟ್ತು’. ತಾವು ಪಂಚೆ ಧರಿಸುತ್ತಿರುವುದರ ಹಿಂದಿನ ಗುಟ್ಟನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಚ್ಚಿಟ್ಟಿದ್ದು ಹೀಗೆ.

“ಒಣಚರ್ಮ ಇದ್ದುದರಿಂದ ವೈದ್ಯರಿಗೆ ತೋರಿಸಿದೆ. ಅವರು ಯಾವ್ಯಾವುದೋ ಔಷಧ ಬರೆದುಕೊಟ್ಟರು. ಆದರೆ, ಕೆಲ ಔಷಧಗಳು ಅಲರ್ಜಿಯಾದವು. ಆಗ ಮತ್ತೂಬ್ಬ ವೈದ್ಯರ ಬಳಿ ಹೋದೆ. ಅವರು ಸರಿಯಾದ ಔಷಧ ಬರೆದುಕೊಟ್ಟರು. ಹಾಗೇ ಪಂಚೆ ಧರಿಸುವಂತೆ ಸಲಹೆ ನೀಡಿದರು. ಆಗಿನಿಂದ ಪಂಚೆ ಉಡಲು ಶುರು ಮಾಡಿದೆ,’ ಎಂದರು.

ಹೊಸದಾಗಿ ನಿರ್ಮಾಣಗೊಂಡ ಕಟ್ಟಡಗಳ ವಿವರ
-ಮಿಂಟೋ ಸೂಪರ್‌ ಸ್ಪೆಷಾಲಿಟಿ ಕಟ್ಟಡ (9.40 ಕೋಟಿ ವೆಚ್ಚ)
-ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವಿದ್ಯಾರ್ಥಿನಿಯ ವಸತಿ ನಿಲಯ ಕಟ್ಟಡ (30 ಕೋಟಿ ವೆಚ್ಚ)
-ತೀವ್ರ ಅಪಾಯ ಗರ್ಭಧಾರಣೆ ಆರೈಕೆ ಕೇಂದ್ರ (15.40 ಕೋಟಿ). 
-ಸ್ನಾತಕೋತ್ತರ ವಿದ್ಯಾರ್ಥಿಗಳ ವಸತಿ ನಿಲಯ ಮತ್ತು ಸಿಬ್ಬಂದಿ ವಸತಿ ಗೃಹಗಳು (25 ಕೋಟಿ ವೆಚ್ಚ)
-ಆಧುನೀಕರಣಗೊಮಡ ಸಿಎಸ್‌ಎಸ್‌ಡಿ ವಿಭಾಗ (2.88 ಕೋಟಿ ವೆಚ್ಚ)
-ಅತಿ ಗಣ್ಯರ ವಿಶೇಷ ವಾರ್ಡ್‌ಗಳು (2.39 ಕೋಟಿ ವೆಚ್ಚ)
-ಸುಟ್ಟ ಗಾಯಾಳುಗಳ ವಿಭಾಗದ ನವೀಕೃತ ಕಟ್ಟಡ

Advertisement

Udayavani is now on Telegram. Click here to join our channel and stay updated with the latest news.

Next