Advertisement

ಇಂದಿರಾ ಕ್ಯಾಂಟಿನ್‌ನಲ್ಲಿ ಅಕ್ರಮದ ಆರೋಪ

11:11 AM Jul 21, 2017 | Team Udayavani |

ಬೆಂಗಳೂರು: ನಗರದ 198 ವಾರ್ಡ್‌ಗಳಲ್ಲಿ ರಾಜ್ಯ ಸರ್ಕಾರದಿಂದ ತೆರೆಯುತ್ತಿರುವ ಇಂದಿರಾ ಕ್ಯಾಂಟಿನ್‌ ಯೋಜನೆಯಲ್ಲಿ 65 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಬಿಜೆಪಿ ನಗರ ವಕ್ತಾರ ಎನ್‌.ಆರ್‌.ರಮೇಶ್‌ ಆರೋಪಿಸಿದ್ದಾರೆ. 

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಬಿಬಿಎಂಪಿ ವ್ಯಾಪ್ತಿಯ 27 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದು ಅಡುಗೆ ಮನೆ ಹಾಗೂ 198 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟಿನ್‌ಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಒಂದು ಅಡುಗೆ ಮನೆ ನಿರ್ಮಾಣಕ್ಕೆ 21 ಲಕ್ಷ ರೂ. ಹಾಗೂ 9 ಲಕ್ಷ ರೂ. ವೆಚ್ಚದಲ್ಲಿ ಕ್ಯಾಂಟಿನ್‌ ನಿರ್ಮಾಣ ಮಾಡಬಹುದು.

ಆದರೆ, ಸರ್ಕಾರದ ವತಿಯಿಂದ ಅಡುಗೆ ಮನೆ ನಿರ್ಮಾಣಕ್ಕೆ 60 ಲಕ್ಷ ರೂ. ಹಾಗೂ ಕ್ಯಾಂಟೀನ್‌ ನಿರ್ಮಾಣಕ್ಕೆ 28.50 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಹೀಗಾಗಿ, ಪ್ರತಿ ಅಡುಗೆ ಮನೆ ಹಾಗೂ ಕ್ಯಾಂಟೀನ್‌ಗೆ ಹೆಚ್ಚುವರಿಯಾಗಿ 50.50 ಲಕ್ಷ ರೂ.ವ್ಯಯಿಸಲಾಗುತ್ತಿದೆ,’ ಎಂದು ದೂರಿದರು.

“ರಾಜ್ಯದಲ್ಲಿ ಹಲವಾರು ಪ್ರೀಕಾಸ್ಟಿಂಗ್‌ ಕಟ್ಟಡ ನಿರ್ಮಾಣ ಸಂಸ್ಥೆಗಳು ಕಡಿಮೆ ದರದಲ್ಲಿ ಕ್ಯಾಂಟಿನ್‌ ನಿರ್ಮಿಸಲು ಮುಂದಾದರೂ, ದುಬಾರಿಗೆ ಬೆಲೆ ತಮಿಳುನಾಡಿನ ಕೃಷ್ಣಗಿರಿಯ ಇನ್‌ಫ್ರಾಸ್ಟ್ರಕ್ಚರ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ಗೆ ಗುತ್ತಿಗೆ ನೀಡಲಾಗಿದೆ. ಈ ಹಗರಣದ ಬಗ್ಗೆ  ಸಾರ್ವಜನಿಕ ಚರ್ಚೆಗೆ ನಾನು ಸಿದ್ಧ,’ ಎಂದು ಸವಾಲು ಹಾಕಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ನಗರ ಉಸ್ತುವಾರಿ ಸಚಿವರು ಹಾಗೂ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಪಾಲಿಕೆಯ ವಿಶೇಷ ಆಯುಕ್ತರ (ಹಣಕಾಸು) ವಿರುದ್ಧ ಎಸಿಎಂಎಂ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗಿದೆ ಎಂದು ತಿಳಿಸಿದರು.

Advertisement

ಸಾಕ್ಷಿ ಕೊಟ್ಟು ಮಾತನಾಡಲಿ 
ಇಂದಿರಾ ಕ್ಯಾಂಟೀನ್‌ ನಿರ್ಮಾಣದಲ್ಲಿ ಅವ್ಯವಹಾರ ಆಗಿದೆ ಎಂಬುದರ ಬಗ್ಗೆ ನಿರ್ದಿಷ್ಟ ದಾಖಲೆ ಇದ್ದರೆ ಕೊಡಲಿ. ಸುಮ್ಮನೆ ಆರೋಪ ಮಾಡುವುದು ಬೇಡ. ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂಬುದು ಸತ್ಯಕ್ಕೆ ದೂರ. ಅವ್ಯವಹಾರ ಮಾಡುವವರ ಹೆಸರು ಕೊಟ್ಟರೆ ನಾವೇ ತನಿಖೆಗೆ ಒಪ್ಪಿಸುತ್ತೇವೆ.
-ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ

ಅವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆ ಇಲ್ಲದೆ ಆರೋಪ ಮಾಡುವುದು ಸರಿಯಲ್ಲ. ದಾಖಲೆ ಇದ್ದರೆ ತನಿಖೆ ನಡೆಯಲಿ. ನಗರದಲ್ಲಿನ ಬಡವರಿಗೆ ಕಡಿಮೆ ದರದಲ್ಲಿ ಆಹಾರ ಪೂರೈಸುವ ಉದ್ದೇಶದಿಂದ ಇಂದಿರಾ ಕ್ಯಾಂಟಿನ್‌ ಯೋಜನೆ ಜಾರಿಗೊಳಿಸಲಾಗುತ್ತಿದೆ. ಯೋಜನೆಯಿಂದ ಕಾಂಗ್ರೆಸ್‌ ಬಗ್ಗೆ ಜನರ ಒಲವು ವ್ಯಕ್ತವಾಗುತ್ತದೆ ಎಂಬ ಆತಂಕದಲ್ಲಿ ಬಿಜೆಪಿಯವರು ಯೋಜನೆಯನ್ನು ವಿರೋಧಿಸುತ್ತಿದ್ದಾರೆ.
-ಜಿ.ಪದ್ಮಾವತಿ, ಮೇಯರ್‌ 

Advertisement

Udayavani is now on Telegram. Click here to join our channel and stay updated with the latest news.

Next