Advertisement

ಇಂದಿರಾ ಕ್ಯಾಂಟೀನ್‌: ಜನರ ಇಳಿಮುಖ

11:26 AM Apr 11, 2020 | Suhan S |

ಬೆಂಗಳೂರು: ನಗರದ ಇಂದಿರಾ ಕ್ಯಾಂಟೀನ್‌ ಗಳು ಈಗ ಬಡವರಿಗೆ ಇನ್ನಷ್ಟು ಹತ್ತಿರವಾಗಿವೆ. ಆದರೆ, ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಊಟ ನೀಡಿದಾಗ ಇದ್ದ ಗ್ರಾಹಕರ ಸಂಖ್ಯೆ ಸದ್ಯ ಶೇ. 80ರಷ್ಟು ಕುಸಿದಿದೆ.

Advertisement

ಲಾಕ್‌ಡೌನ್‌ನಿಂದಾಗಿ ನಿಜವಾದ ಬಡ ಮತ್ತು ಕೂಲಿ ಕಾರ್ಮಿಕರು ತಿಂಡಿ ಹಾಗೂ ಊಟಕ್ಕೆ ಇಂದಿರಾ ಕ್ಯಾಂಟೀನ್‌ ಮೇಲೆ ಅವಲಂಬನೆಯಾಗುತ್ತಿದ್ದಾರೆ. ಉಚಿತ ಊಟ ನೀಡುತ್ತಿದ್ದ ಸಂದರ್ಭದಲ್ಲಿ ಪ್ರತಿ ಇಂದಿರಾ ಕ್ಯಾಂಟೀನ್‌ನಲ್ಲಿ 1.200  ರಿಂದ 1,500 ಜನ ಊಟಮಾಡುತ್ತಿದ್ದರು. ಸದ್ಯ ಈ ಸಂಖ್ಯೆ 200ರಿಂದ 300ಜನರಿಗೆ ಕುಸಿದಿದೆ.

ಆದರೆ, ಎನ್ನುತ್ತಾರೆ ಇಂದಿರಾ ಕ್ಯಾಂಟೀನ್‌ನ ಸಿಬ್ಬಂದಿ. ಇನ್ನು ಒಟ್ಟಾರೆ ಸಂಖ್ಯೆಯನ್ನು ನೋಡುವುದಾದರೆ, ಮಾ.23 ರಂದು ಉಚಿತ ಊಟ ನೀಡಲು ಪ್ರಾರಂಭಿಸಿದಾಗ 55, ಸಾವಿರ ಜನ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡಿದ್ದು, 1,61,680 ಆಹಾರ ಪೊಟ್ಟಣಗಳನ್ನು ಹಂಚಲಾಗಿದೆ. ಏ.3ಕ್ಕೆ ಅಂದಾಜು 92 ಸಾವಿರ ಜನ ಇಂದಿರಾ ಕ್ಯಾಂಟೀನಲ್ಲಿ ಊಟ ಮಾಡಿದ್ದು, 2,78,985 ಆಹಾರ ಪೊಟ್ಟಣ ವಿತರಣೆ ಮಾಡಲಾಗಿದೆ.

ಆದರೆ, ದರ ನಿಗದಿ ಮಾಡಿದ ನಂತರ ಇಂದಿರಾ ಕ್ಯಾಂಟೀನ್‌ ನತ್ತ ಸಾರ್ವಜನಿಕರು ಹೆಜ್ಜೆ ಹಾಕುವುದು ಕಡಿಮೆಯಾಗಿದೆ. ಏ. 9ಕ್ಕೆ ಇಂದಿರಾ ಕ್ಯಾಂಟೀನ್‌ನಲ್ಲಿ 22,194 ಜನ ಊಟ ಮಾಡಿದ್ದು, 66,582 ಆಹಾರ ಪೊಟ್ಟಣಗಳನ್ನು ನೀಡಲಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೋವಿಡ್ 19 ಸೋಂಕು ಹರಡುವುದನ್ನು ತಪ್ಪಿಸುವ ಉದ್ದೇಶದಿಂದ ಆಹಾರ ಪೊಟ್ಟಣ ನೀಡಲಾಗುತ್ತಿದೆ. ಸರ್ಕಾರ ಲಾಕ್‌ಡೌನ್‌ ಆದೇಶ ಹೊರಡಿಸಿದ ಮೇಲೆ ನಗರದಲ್ಲಿನ ಸಾವಿರಾರು ಬಡವರು, ನಿರಾಶ್ರಿತರು ಹಾಗೂ ಕೂಲಿ ಕಾರ್ಮಿಕರಿಗೆ ಕೂಡಲೇ ಊಟದ ವ್ಯವಸ್ಥೆ ಮಾಡುವಲ್ಲಿ ಇಂದಿರಾ ಕ್ಯಾಂಟೀನ್‌ ಪ್ರಮುಖ ಪಾತ್ರ ವಹಿಸಿತ್ತು. ಸ್ವಯಂ ಸೇವಕರು ಹಾಗೂ ಜನಪ್ರತಿನಿಧಿಗಳ ಉಚಿತ ಊಟ ನೀಡುವ ಮುನ್ನ ಇಂದಿರಾ ಕ್ಯಾಂಟೀನ್‌ ನೆರವಿಗೆ ಬಂದಿತ್ತು. ಈಗಾಗಲೇ ವ್ಯವಸ್ಥಿತ ಯೋಜನೆ ಇರುವುದರಿಂದಲೂ ಊಟ ನೀಡುವುದಕ್ಕೆ ಸಹಕಾರಿಯಾಯಿತು ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು. ಗುಣಮಟ್ಟದಲ್ಲಿ ಬದಲಾವಣೆ: ಇಂದಿರಾ ಕ್ಯಾಂಟೀನ್‌ನಲ್ಲಿ ನೀಡುತ್ತಿರುವ ಊಟದ ಪ್ರಮಾಣ ಕಡಿಮೆ ಇದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ ಮೇಲೆ ಇಂದಿರಾ ಕ್ಯಾಂಟೀನ್‌ ಊಟದ ಗುಣಮಟ್ಟದಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಸದ್ಯ ಊಟದಲ್ಲಿ ಬಟಾಣಿ, ತರಕಾರಿಗಳು ಸಿಗುತ್ತಿವೆ. ರುಚಿ ಮತ್ತು ಆಹಾರ ಪ್ರಮಾಣದಲ್ಲೂ ಬದಲಾವಣೆಯಾಗಿದೆ.

Advertisement

ಸಂಖ್ಯೆ ಕುಸಿಯಲು ಕಾರಣವೇನು? :  ಇಂದಿರಾ ಕ್ಯಾಂಟೀನ್‌ನಲ್ಲಿ ಸಾರ್ವಜನಿಕರು ಉಪಹಾರ ಮತ್ತು ಊಟ ಮಾಡದೆ ಇರುವುದಕ್ಕೆ ದರ ನಿಗದಿ ಮಾಡಿರುವುದರ ಜೊತೆಗೆ ಸ್ವಯಂ ಸೇವಾ ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಹಲವು ಸ್ವಯಂ ಸೇವಕರು ಸದ್ಯ ಉಚಿತ ಊಟ ನೀಡಲು ಪ್ರಾರಂಭಿಸಿರುವುದು ಇಂದಿರಾ ಕ್ಯಾಂಟೀನ್‌ನತ್ತ ಬರುವ ಗ್ರಾಹಕರ ಸಂಖ್ಯೆ ಕುಸಿಯಲು ಕಾರಣವಾಗಿರುವ ಸಾಧ್ಯತೆ ಇದೆ. ಈ ಮಧ್ಯೆ ನಗರದ ಹಲವೆಡೆ ಸಾರ್ವಜನಿಕರು ಇಂದಿರಾ ಕ್ಯಾಂಟೀನ್‌ನಿಂದ ಆಹಾರ ಖರೀದಿಸಿ ಬಡವರಿಗೆ ಹಂಚುತ್ತಿದ್ದಾರೆ. ಹೊಂಬೇಗೌಡ ನಗರ ವಾರ್ಡ್‌ನ ಸ್ಥಳೀಯರಾದ ರಾಜು ಎಂಬವರು ಮತ್ತು ಅವರ ಸ್ನೇಹಿತರು ಐದಾರು ಜನ ಬಡವರಿಗೆ ನಿತ್ಯ ಇಂದಿರಾ ಕ್ಯಾಂಟೀನ್‌ನಲ್ಲಿ ಹಣ ನೀಡಿ ಆಹಾರ ಪೊಟ್ಟಣ ಖರೀದಿಸಿ ಹಂಚುತ್ತಿದ್ದಾರೆ.

ಇಂದಿರಾ ಕ್ಯಾಂಟೀನ್‌ನಲ್ಲಿ ದರ ನಿಗದಿ ಮಾಡಿದ ಮೇಲೆ ರಸ್ತೆ ಬದಿಯಲ್ಲಿದ್ದ ಹಲವು ಕೂಲಿ ಕಾರ್ಮಿಕರಿಗೆ ಸಮಸ್ಯೆಯಾಗುತ್ತಿರುವುದು ಗೊತ್ತಾಗಿ, ಸ್ವಂತ ಖರ್ಚಿನಲ್ಲಿ ಖರೀದಿಸಿ ಹಂಚುತ್ತಿದ್ದೇನೆ. –  ರಾಜು, ಹೊಂಬೇಗೌಡ ವಾರ್ಡ್‌, ಸ್ಥಳೀಯ ನಿವಾಸಿ

 

-ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next