ಬೆಂಗಳೂರು: ಇಂದಿರಾ ಕ್ಯಾಂಟೀನ್ ಹೊರೆಯಿಂದ ತಪ್ಪಿಸಿಕೊಳ್ಳಲು ಪಾಲಿಕೆ ಊಟದ ದರ ಏರಿಸಲು ಮುಂದಾಗಿದೆ. ಬಡವರಿಗಾಗಿ ಕಡಿಮೆ ದರದಲ್ಲಿ ಊಟ ಹಾಗೂ ತಿಂಡಿ ನೀಡಲು ಮೂರು ವರ್ಷಗಳ ಹಿಂದೆ ಬೆಳಗಿನ ತಿಂಡಿಗೆ 5 ರೂ., ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ 10 ರೂ. ನಿಗದಿ ಮಾಡಿತ್ತು. ಈಗ ತಿಂಡಿಗೆ 10 ರೂ., ಊಟಕ್ಕೆ 15 ರೂ. ಹೆಚ್ಚಳ ಮಾಡಲು ಪಾಲಿಕೆ ಚಿಂತನೆ ನಡೆಸಿದೆ.
ಬಿಬಿಎಂಪಿ ಮೂಲಗಳ ಪ್ರಕಾರ ಹೊಸ ಗುತ್ತಿಗೆದಾರರಿಗೆ ಇಂದಿರಾ ಕ್ಯಾಂಟೀನ್ ನಿರ್ವಹಣೆ ನೀಡುವ ಮುನ್ನವೇ ದರ ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ 2 ವರ್ಷದಿಂದ ರಾಜ್ಯ ಸರ್ಕಾರದಿಂದ ಇಂದಿರಾ ಕ್ಯಾಂಟೀನ್‌ಗೆ ಅನುದಾನ ನೀಡಿಲ್ಲ. ಹೀಗಾಗಿ, ಇಂದಿರಾ ಕ್ಯಾಂಟೀನ್ ನಿರ್ವಹಣೆ ಹೊರೆಯಾಗಿದ್ದು, ದರ ಏರಿಕೆಗೆ ಮುಂದಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್, “ಬಡವರ ಬಗ್ಗೆ ಕಾಳಜಿ ಇದ್ದರೆ ಊಟದ ಗುಣಮಟ್ಟ ಹೆಚ್ಚಿಸಲಿ. ಅದನ್ನು ಬಿಟ್ಟು ಬಡವರ ತಿನ್ನುವ ಅನ್ನದ ದರ ಹೆಚ್ಚಿಸುವುದು ಎಷ್ಟರ ಮಟ್ಟಿಗೆ ಸರಿ.
ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಇಂದಿರಾ ಕ್ಯಾಂಟೀನ್‌ಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಲಿ’ ಎಂದು ಆಗ್ರಹಿಸಿದರು. “ಇಂದಿರಾ ಕ್ಯಾಂಟೀನ್ ಅನ್ನು ಪಾಲಿಕೆ ಬೇಡದ ಶಿಶುವಿನ ರೀತಿ ಕಡೆಗಣಿಸುತ್ತಿದೆ. ರಾಷ್ಟ್ರದ ಬಡಜನತೆ ಮಹತ್ವದ ಆಹಾರ ಭದ್ರತೆ ಕಾಯ್ದೆಯ ಈ ಯೋಜನೆಗಾಗಿ ರಾಜ್ಯ ಸರ್ಕಾರ ಪ್ರತಿ ವರ್ಷ ಕೊಡುವ 100 ಕೋಟಿ ರೂ., 2 ವರ್ಷದಿಂದ ನೀಡಿಲ್ಲ. ಬಿಬಿಎಂಪಿಯೂ ಆರ್ಥಿಕ ಕೊರತೆ ಇದೆ ಎಂಬ ಸಬೂಬು ಹೇಳುತ್ತಿದೆ’ ಎಂದು ಆಮ್ ಆದ್ಮಿ ಪಾರ್ಟಿ ಸಂಚಾಲಕ ಜಗದೀಶ್ ವಿ.ಸದಮ್ ಆರೋಪಿಸಿದ್ದಾರೆ.
ಶೇ.50 ಅನುದಾನ ಸರ್ಕಾರದಿಂದ: ಇಂದಿರಾ ಕ್ಯಾಂಟೀನ್ ಯೋಜನೆಗೆ ರಾಜ್ಯ ಸರ್ಕಾರ 2017-18ರಲ್ಲಿ ಯೋಜನೆ ಅನುಷ್ಠಾನಕ್ಕೆ 100 ಕೋಟಿ ರೂ. ನೀಡಿತ್ತು. ಆದರೆ, ಅನುಷ್ಠಾನದ ಸಮಯದಲ್ಲಿ ಬಿಬಿಎಂಪಿ 24.37ಕೋಟಿ ರೂ. ಹೆಚ್ಚುವರಿ ವ್ಯಯಿಸಿದೆ. ಇಂದಿರಾ ಕ್ಯಾಂಟೀನ್ ಯೋಜನೆಗೆ 2018-19ರಲ್ಲಿ ಸರ್ಕಾರ 115 ಕೋಟಿ ರೂ. ಬಿಡುಗಡೆ ಮಾಡಿತ್ತಾದರೂ, 145 ಕೋಟಿ ರೂ. ವೆಚ್ಚವಾಗಿದೆ. ಅಂದರೆ ಉಳಿದ 21.67 ಕೋಟಿ ರೂ. ಬಿಬಿಎಂಪಿಯೇ ಭರಿಸಿತ್ತು. ಜನವರಿಯಲ್ಲಿ ಮೈತ್ರಿ ಸರ್ಕಾರಕ್ಕೆ 210 ಕೋಟಿ ರೂ. ಅನುದಾನ ಮೀಸಲಿರಿಸಲು ಮನವಿ ಮಾಡಲಾಗಿತ್ತು. ಅದೂ ಬಿಡುಗಡೆ ಆಗಿರಲಿಲ್ಲ. ಸದ್ಯ ಇಂದಿರಾ ಕ್ಯಾಂಟೀನ್ ಯೋಜನೆಗೆ ಶೇ.50 ಆರ್ಥಿಕ ಹೊರೆ ಭರಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಇಂದಿರಾ ಕ್ಯಾಂಟೀನ್‌ನಲ್ಲಿ ಗುಣಮಟ್ಟದ ಆಹಾರ ನೀಡಲು ಚಿಂತಿಸಿದ್ದೇವೆ. ದರ ಏರಿಕೆ ಪ್ರಸ್ತಾವನೆಯನ್ನು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಪ್ರಸ್ತಾಪಿಸಿದ್ದು, ಈ ಬಗ್ಗೆ ಇನ್ನು ಚರ್ಚೆಯಾಗಿಲ್ಲ.
-ಎಂ.ಗೌತಮ್‌ಕುಮಾರ್, ಮೇಯರ್