Advertisement

ಇನ್ನೂ ಆರಂಭವಾಗದ ಇಂದಿರಾ ಕ್ಯಾಂಟೀನ್‌! 

05:26 PM Jul 12, 2018 | Team Udayavani |

ಬಾಗಲಕೋಟೆ: ಬಡ ಜನರಿಗೆ ಅತಿ ಕಡಿಮೆ ದರದಲ್ಲಿ ಊಟ-ಉಪಾಹಾರ ಒದಗಿಸುವ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿದ ಇಂದಿರಾ ಕ್ಯಾಂಟೀನ್‌ ಜಿಲ್ಲೆಯಲ್ಲಿ ಇನ್ನೂ ಆರಂಭಗೊಂಡಿಲ್ಲ.

Advertisement

ಮೊದಲು ನಗರ ಕೇಂದ್ರ, ಬಳಿಕ ಗ್ರಾಪಂ ಮಟ್ಟದಲ್ಲೂ ಇಂದಿರಾ ಕ್ಯಾಂಟೀನ್‌ ಆರಂಭಿಸುವುದಾಗಿ ಹೇಳಿದ್ದ ಸರ್ಕಾರ ಇನ್ನೂ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲೇ ಆರಂಭಿಸಿಲ್ಲ. ಬಾಗಲಕೋಟೆ ನಗರ ಹಾಗೂ ನವನಗರ ಬಸ್‌ ನಿಲ್ದಾಣ ಆವರಣ, ಹುನಗುಂದ ಪಟ್ಟಣದ ಅಮರಾವತಿ ರಸ್ತೆಯ ಗುರು ಭವನ ಪಕ್ಕದ ಶಿಕ್ಷಣ ಇಲಾಖೆಯ ಜಾಗೆಯಲ್ಲಿ, ಬಾದಾಮಿ ಪಟ್ಟಣದ ಅರಣ್ಯ ಇಲಾಖೆ ಕಚೇರಿ ಹಾಗೂ ವಸತಿ ಗೃಹಗಳ ಆವರಣ, ಜಮಖಂಡಿ ನಗರಸಭೆಯ ವ್ಯಾಪ್ತಿಯ ಬಸ್‌ ನಿಲ್ದಾಣ ಆವರಣ, ಮುಧೋಳದ ಬಸ್‌ ನಿಲ್ದಾಣ ಎದುರಿನ ಬಸವೇಶ್ವರ ವೃತ್ತದ ನಗರಸಭೆ ಜಾಗೆ ಹಾಗೂ ಬೀಳಗಿ ಪಟ್ಟಣದ ಜಿಎಲ್‌ಬಿಸಿ ಕಚೇರಿ ಆವರಣದಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಜಾಗೆ ಗುರುತಿಸಿ, ಟೆಂಡರ್‌ ಕೂಡ ಕರೆಯಲಾಗಿದೆ. 

ಮೊದಲು ಜಿಲ್ಲೆಯ ಎಲ್ಲ ನಗರ-ಸ್ಥಳೀಯ ಸಂಸ್ಥೆಗಳಲ್ಲಿ (15 ಕಡೆ) ಕ್ಯಾಂಟೀನ್‌ ನಿರ್ಮಾಣ ಮಾಡುವುದಾಗಿ ಆಗಿನ ಆಡಳಿತ ಪಕ್ಷದ ಸಚಿವರು, ಶಾಸಕರು ಹೇಳಿದ್ದರು. ಆದರೆ, ಮೊದಲ ಹಂತದಲ್ಲಿ ಜಿಲ್ಲಾ ಕೇಂದ್ರ ಸ್ಥಾನಕ್ಕೆ 2 ಹಾಗೂ ತಾಲೂಕು ಕೇಂದ್ರಕ್ಕೆ ತಲಾ 1 ಕ್ಯಾಂಟೀನ್‌ ನಿರ್ಮಿಸುವಂತೆ ಅಂದಿನ ಸರ್ಕಾರ ನಿರ್ದೇಶನ ನೀಡಿತ್ತು. ಹೀಗಾಗಿ ಜಿಲ್ಲೆಯಲ್ಲಿ ಒಟ್ಟು 7 ಕ್ಯಾಂಟೀನ್‌ ನಿರ್ಮಾಣಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ.

ಇಂದಿರಾ ಕ್ಯಾಂಟೀನ್‌ ಕಟ್ಟಡ ನಿರ್ಮಾಣಕ್ಕೆ ನಗರಾಭಿವೃದ್ಧಿ ಇಲಾಖೆಯಿಂದಲೇ ರಾಜ್ಯ ಮಟ್ಟದ ಟೆಂಡರ್‌ ಕರೆದಿದ್ದು, ಕೆಇಎಫ್‌ ಇನ್ಫಾಸ್ಟ್ರಕ್ಚರ್‌ ಪ್ರೈವೆಟ್‌ ಲಿಮಿಟೆಡ್‌ ಕಂಪನಿಯರು ರಾಜ್ಯದ ಎಲ್ಲ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಕ್ಯಾಂಟಿನ್‌ ಕಟ್ಟಡ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಆದರೆ, ಈ ಕಂಪನಿಯವರು ಕಟ್ಟಡ ನಿರ್ಮಾಣದ ಹೊಣೆ ಹೊತ್ತು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಆಹಾರ ಆಯ್ಕೆಯ ಹೊಣೆ ಡಿಸಿಗೆ: ಇಂದಿರಾ ಕ್ಯಾಂಟೀನ್‌ಗಳಲ್ಲಿ ಬೆಳಗ್ಗೆ 5 ರೂ.ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ 10 ರೂ.ಗೆ ಊಟ ನೀಡುವ ನಿಯಮವಿದೆ. ಆದರೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 200 ಜನ, ಪುರಸಭೆ ವ್ಯಾಪ್ತಿಯಲ್ಲಿ 300 ಜನ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ 500 ಜನರಿಗೆ ಮಾತ್ರ ಮಿತಿಗೊಳಿಸಲಾಗಿದೆ. 1 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1 ಲಕ್ಷ ಜನಸಂಖ್ಯೆಗೆ ಒಂದರಂತೆ ಕ್ಯಾಂಟೀನ್‌ಗಳ ಸಂಖ್ಯೆ ಹೆಚ್ಚಿಸಲು ಸರ್ಕಾರದ ನಿರ್ದೇಶನವಿದೆ. ಈ ಕ್ಯಾಂಟೀನ್‌ಗಳಲ್ಲಿ ಆಯಾ ಪ್ರಾದೇಶಿಕ ವಲಯವಾರು ಜನರು ಬಯಸುವ ಉಪಾಹಾರ, ಊಟದ ಆಹಾರ ಪದ್ಧತಿಯಡಿ ಪೂರೈಕೆ ಮಾಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.

Advertisement

ಎಲ್ಲೂ ಆರಂಭಗೊಂಡಿಲ್ಲ: ಬಾಗಲಕೋಟೆ ಹಳೆಯ ನಗರದ ಬಸ್‌ ನಿಲ್ದಾಣದಲ್ಲಿ ಮಾತ್ರ ಕ್ಯಾಂಟೀನ್‌ ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ನವನಗರ ಬಸ್‌ ನಿಲ್ದಾಣದಲ್ಲಿ ಅಡಿಪಾಯ ಹಂತದಲ್ಲಿ ಕಾಮಗಾರಿ ಇದೆ. ಈ ಎರಡು ಕಡೆ ಬಿಟ್ಟರೆ ಇನ್ನುಳಿದಂತೆ ಜಿಲ್ಲೆಯ ಐದು ಕಡೆ ಕ್ಯಾಂಟೀನ್‌ ನಿರ್ಮಾಣ ಕಾಮಗಾರಿಯೇ ಆರಂಭಗೊಂಡಿಲ್ಲ. ಇಡೀ ರಾಜ್ಯಕ್ಕೆ ಒಂದೇ ಕಂಪನಿ ಕಟ್ಟಡ ನಿರ್ಮಾಣದ ಹೊಣೆ ಹೊತ್ತಿದ್ದು, ಈ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ. ಡಿಸಿ ನೇತೃತ್ವದ ಸಮಿತಿ: ಇಂದಿರಾ ಕ್ಯಾಂಟೀನ್‌ ಅನುಷ್ಠಾನ ಮತ್ತು ನಿರ್ವಹಣೆ, ಮೇಲ್ವಿಚಾರಣೆಗಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಎಸ್ಪಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಡಿಡಿ, ಡಿಎಚ್‌ಒ, ನಗರ-ಸಂಸ್ಥೆಗಳ ಆಯುಕ್ತರು, ಜಿಲ್ಲಾ ಕಾರ್ಮಿಕ ಅಧಿಕಾರಿ, ಕೆಎಸ್‌ಆರ್‌ಟಿಸಿ ಡಿಸಿ, ಡಿಸಿ ಕಚೇರಿಯ ನಗರಾಭಿವೃದ್ಧಿ ಕೋಶದ ಎಇಇ, ಆಯಾ ನಗರಸಭೆ-ಪುರಸಭೆಯ ಪರಿಸರ ಅಭಿಯಂತರರು ಸಮಿತಿ ಸದಸ್ಯರಾಗಿದ್ದು, ನಗರಾಭಿವೃದ್ಧಿ ಕೋಶದ ಪಿಡಿ, ಇದರ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

ಇಂದಿರಾ ಕ್ಯಾಂಟೀನ್‌ ಆರಂಭಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಹಾರ ಪೂರೈಕೆಗೆ ಟೆಂಡರ್‌ ಮೂಲಕ ಏಜೆನ್ಸಿ ನಿಗದಿಯಾಗಿದೆ. ಆದರೆ, ಕ್ಯಾಂಟೀನ್‌ ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ. ಅದರಿಂದ ವಿಳಂಬವಾಗಿದೆ. ಕಾಮಗಾರಿ ಬೇಗ ಪೂರ್ಣಗೊಳಿಸಿಲು ಸಂಬಂಧಿಸಿದ ಕಂಪನಿಗೆ ಸುಮಾರು ಬಾರಿ ಪತ್ರ ಬರೆದು ಒತ್ತಾಯಿಸಿದ್ದೇವೆ. ಕಾಮಗಾರಿ ಪೂರ್ಣಗೊಂಡ ಬಳಿಕ ಕ್ಯಾಂಟೀನ್‌ ಆರಂಭಿಸಲಾಗುವುದು.
 ಡಾ| ಔದ್ರಾಮ್‌, ಯೋಜನಾ
ನಿರ್ದೇಶಕರು, ನಗರಾಭಿವೃದ್ಧಿ ಕೋಶ

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next