Advertisement

ಕಾರ್ಪೊರೇಟರ್‌ಗಳಿಗೆ ಇಂದಿರಾ ಕ್ಯಾಂಟೀನ್‌ ಊಟ

12:38 PM Oct 20, 2018 | Team Udayavani |

ಬೆಂಗಳೂರು: ಬಿಬಿಎಂಪಿಯ ಮಾಸಿಕ ಸಭೆಯಲ್ಲಿ ಪಾಲ್ಗೊಳ್ಳುವ ಕಾರ್ಪೊರೇಟರ್‌ಗಳಿಗೆ ಇನ್ನುಮುಂದೆ ಇಂದಿರಾ ಕ್ಯಾಂಟೀನ್‌ ಊಟ ಪೂರೈಕೆಯಾಗಲಿದೆ.

Advertisement

ಇಂದಿರಾ ಕ್ಯಾಂಟೀನ್‌ ಆಹಾರದ ಗುಣಮಟ್ಟ ಹಾಗೂ ರುಚಿಯ ಬಗ್ಗೆ ದೂರುಗಳು ಬರುತ್ತಿರುವುದು ಹಾಗೂ ಪಾಲಿಕೆ ಸದಸ್ಯರು ಸಹ ಆಹಾರದ ಗುಣಮಟ್ಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಮಾಸಿಕ ಸಭೆಗಳಲ್ಲಿ ಟೀಕೆಗಳನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆಯ ಸದಸ್ಯರಿಗೆ ಇಂದಿರಾ ಕ್ಯಾಂಟೀನ್‌ನಿಂದ ಊಟ ತರಿಸಿ ಗುಣಮಟ್ಟ ಹಾಗೂ ರುಚಿಯ ಪರೀಕ್ಷೆ ಮಾಡಲು ನಿರ್ಧರಿಸಲಾಗಿದೆ.

ಪಾಲಿಕೆಯ 180ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳು ಸೇವೆ ನೀಡುತ್ತಿದ್ದು, ನಿತ್ಯ 3 ಲಕ್ಷಕ್ಕೂ ಹೆಚ್ಚಿನ ಜನರಿಗೆ ತಿಂಡಿ-ಆಹಾರ ಪೂರೈಸುತ್ತಿವೆ. ಕೆಲವು ಕಡೆಗಳಲ್ಲಿ ಗುಣಮಟ್ಟ ಚೆನ್ನಾಗಿದ್ದರೆ, ಇನ್ನು ಕೆಲವು ಕಡೆ ಗುಣಮಟ್ಟ ನಿಗದಿತ ಪ್ರಮಾಣದಲ್ಲಿಲ್ಲ ಎಂಬ ಆರೋಪಗಳಿವೆ. ಇದರೊಂದಿಗೆ ಪಾಲಿಕೆಯ ಸದಸ್ಯರು ಹಾಗೂ ಅಧಿಕಾರಿಗಳು ಕ್ಯಾಂಟೀನ್‌ಗಳಲ್ಲಿನ ಆಹಾರ ಸೇವಿಸಲು ಹಿಂಜರಿಯುವುದರಿಂದ ಗುಣಮಟ್ಟದ ಬಗ್ಗೆ ತಿಳಿಯುವುದಿಲ್ಲ.

ಇದೇ ಕಾರಣದಿಂದ ಗುತ್ತಿಗೆದಾರರು ಸಹ ಗುಣಮಟ್ಟದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಹೀಗಾಗಿ ಪಾಲಿಕೆಯ ಸದಸ್ಯರಿಗೂ ಇಂದಿರಾ ಕ್ಯಾಂಟೀನ್‌ ಊಟ ಪೂರೈಕೆ ಮಾಡಿದಾಗ ಗುಣಮಟ್ಟದ ಬಗ್ಗೆ ಪ್ರಶ್ನಿಸುತ್ತಾರೆ ಎಂಬ ಭಯದಿಂದಾರೂ ಜನರಿಗೆ ಗುಣಮಟ್ಟದ ಆಹಾರ ದೊರೆಯಲಿ ಎಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಹೇಳುತ್ತಾರೆ.
ಸುಮ್ಮನೆ ಆರೋಪ
ಇಂದಿರಾ ಕ್ಯಾಂಟೀನ್‌ಗಳಿಂದ ನಿತ್ಯ ಲಕ್ಷಾಂತರ ಜನರಿಗೆ ಆಹಾರ ಪೂರೈಕೆ ಮಾಡಲಾಗುತ್ತಿದೆ. ಆದರೆ, ಪಾಲಿಕೆ ಸಭೆಗಳಲ್ಲಿ ಕೆಲವು ಸದಸ್ಯರು ಉದ್ದೇಶಪೂರ್ವಕವಾಗಿ ಕ್ಯಾಂಟೀನ್‌ಗಳಲ್ಲಿನ ಆಹಾರ ರುಚಿಕರವಾಗಿಲ್ಲ, ಗುಣಮಟ್ಟದಿಂದ ಕೂಡಿಲ್ಲ ಎಂದು ಆರೋಪಿಸುತ್ತಾರೆ. ವಾಸ್ತವದಲ್ಲಿ ಅವರು ಎಂದೂ ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟ ಮಾಡದಿದ್ದರೂ ಆರೋಪಿಸುತ್ತಾರೆ. ಹೀಗಾಗಿ ಪ್ರಾಯೋಗಿಕವಾಗಿ ತಿಂಗಳ ಸಭೆಯಲ್ಲಿ ಪಾಲಿಕೆ ಸದಸ್ಯರಿಗೂ ಇಂದಿರಾ ಕ್ಯಾಂಟೀನ್‌ ಊಟ ಪೂರೈಕೆ ಮಾಡಲಾಗುವುದು ಎಂದು  ಕಾಂಗ್ರೆಸ್‌ನ ಪಾಲಿಕೆ ಸದಸ್ಯರು ಹೇಳುತ್ತಾರೆ.

ಇಂದಿರಾ ಕ್ಯಾಂಟೀನ್‌ಗಳಲ್ಲಿನ ತಿಂಡಿ-ಊಟದ ಬಗ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಂಚಾರಿ ಇಂದಿರಾ ಕ್ಯಾಂಟೀನ್‌ಗಳಿಗೆ ಭಾರಿ ಬೇಡಿಕೆ ಬಂದಿದೆ. ಪಾಲಿಕೆಯಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್‌ಗಳಿಂದಲೇ ಮಧ್ಯಾಹ್ನದ ಬಿಸಿಯೂಟ ಪೂರೈಕೆ ಮಾಡಲಾಗುತ್ತಿದೆ ಎನ್ನುತ್ತಾರೆ.

Advertisement

ಲಕ್ಷಾಂತರ ಜನ ಸೇವಿಸುವ ಇಂದಿರಾ ಕ್ಯಾಂಟೀನ್‌ ಆಹಾರವನ್ನು ಪಾಲಿಕೆಯ ಸದಸ್ಯರು ಸೇವಿಸುವುದರಲ್ಲಿ ತಪ್ಪೇನಿಸಿದೆ. ನಾವು ಕ್ಯಾಂಟೀನ್‌ ಊಟ ಮಾಡುವುದರಿಂದ ಆಹಾರದ ಗುಣಮಟ್ಟ ಹಾಗೂ ರುಚಿ ಹೇಗಿದೆ ಎಂಬುದು ತಿಳಿಯಲಿದೆ. ಸರಿಯಿಲ್ಲದಿದ್ದರೆ ಅದನ್ನು ಸರಿಪಡಿಸಬಹುದಾಗಿದೆ. 
-ಗಂಗಾಂಬಿಕೆ, ಮೇಯರ್‌

ಪಾಲಿಕೆ ಸದಸ್ಯರಿಗಾಗಿ ವಿಶೇಷವಾಗಿ ಆಹಾರ ತಯಾರಿಸದೆ, ಸಾರ್ವಜನಿಕರಿಗೆ ಮತ್ತು ಪೌರಕಾರ್ಮಿಕರಿಗೆ ಪೂರೈಸುವ ಆಹಾರವನ್ನೇ ಪಾಲಿಕೆ ಸದಸ್ಯರಿಗೂ ಪೂರೈಸಬೇಕು. ಆಗ ಜನರಿಗೆ ಯಾವ ಗುಣಮಟ್ಟದ ಆಹಾರ ದೊರೆಯುತ್ತಿದೆ ಎಂಬುದು ತಿಳಿಯುತ್ತದೆ.
-ಪದ್ಮನಾಭರೆಡ್ಡಿ, ವಿಪಕ್ಷ ನಾಯಕ ಬಿಬಿಎಂಪಿ

* ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next