Advertisement

ಶೀಘ್ರ ಜಿಲ್ಲೆಯಲ್ಲೂ ಇಂದಿರಾ ಕ್ಯಾಂಟೀನ್‌ ಆರಂಭ

04:47 PM Dec 28, 2017 | Team Udayavani |

ಮಂಡ್ಯ: ಬೆಂಗಳೂರಿಗೆ ಸೀಮಿತವಾಗಿದ್ದ ಇಂದಿರಾ ಕ್ಯಾಂಟೀನ್‌ ಎಲ್ಲಾ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಿಗೂ ವಿಸ್ತರಣೆಯಾಗುತ್ತಿದೆ. ಮಂಡ್ಯ ನಗರ ಸೇರಿದಂತೆ ಜಿಲ್ಲೆಯಲ್ಲೂ ಶೀಘ್ರ “ಇಂದಿರಾ ಕ್ಯಾಂಟೀನ್‌’ ಆರಂಭಕ್ಕೆ ಸ್ಥಳ ಗುರುತಿಸಲಾಗಿದ್ದು, ಶೀಘ್ರ ಚಾಲನೆ ದೊರಕಲಿದೆ.

Advertisement

ಹೊಸ ವರ್ಷದ ಮೊದಲ ದಿನ ಅಥವಾ ಜನವರಿ ಮೊದಲ ವಾರದೊಳಗೆ ಆರಂಭಿಸಲು ಸಿದ್ಧತೆ ನಡೆದೆ. ತಾಲೂಕು ಕೇಂದ್ರಗಳ ವಿವಿಧೆಡೆ ಇಂದಿರಾ ಕ್ಯಾಂಟೀನ್‌ ನಿರ್ಮಿಸಲು ಸ್ಥಳ ಗುರುತಿಸಲಾಗಿದೆ. ಜಿಲ್ಲಾದ್ಯಂತ ನಿತ್ಯ ಪ್ರತಿ ಹೊತ್ತಿಗೆ ಸುಮಾರು 2,600 ಜನರಿಗೆ ಈ ಕಾರ್ಯಕ್ರಮದ ಪ್ರಯೋಜನ ದೊರೆಯಲಿದೆ. ಸ್ಥಳೀಯ ಉಪಾಹಾರ, ಊಟಕ್ಕೆ ಆದ್ಯತೆ ನೀಡಲಾಗುವುದು. 

ಜನಸಂಖ್ಯೆ ಪ್ರಮಾಣ: ನಗರ ಮತ್ತು ತಾಲೂಕು ಕೇಂದ್ರಗಳಲ್ಲಿನ ಸ್ಥಳೀಯ ಸಂಸ್ಥೆಗಳ ಜನಸಂಖ್ಯೆಯನ್ನು ಪರಿಗಣಿಸಿ ಕ್ಯಾಂಟೀನ್‌ಗಳಲ್ಲಿ ಪ್ರತಿ ಹೊತ್ತಿಗೆ ಆಹಾರ ಒದಗಿಸಲು ನಿರ್ಧರಿಸಲಾಗಿದೆ. ಅದರಂತೆ 25 ಸಾವಿರ ಜನಸಂಖ್ಯೆಯವರೆಗೆ 200 ಜನರಿಗೆ, 45 ಸಾವಿರ ಜನಸಂಖ್ಯೆ ಇದ್ದಲ್ಲಿ 300 ಮಂದಿ, 45 ರಿಂದ 1 ಲಕ್ಷ ಜನಸಂಖ್ಯೆಗೆ 500 ಹಾಗೂ ಒಂದು ಲಕ್ಷಕ್ಕಿಂತ ಹೆಚ್ಚಿ ಜನಸಂಖ್ಯೆ ಇದ್ದಲ್ಲಿ 10 ಸಾವಿರ ಜನಸಂಖ್ಯೆಗೆ ಒಂದರಂತೆ ಕ್ಯಾಂಟೀನ್‌ ಹೆಚ್ಚಿಸಲು ನಿರ್ಧರಿಸಲಾಗಿದೆ. 

ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್‌ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಕಾರಣ ರಾಜ್ಯ ಸರ್ಕಾರ ಈ ಯೋಜನೆಯನ್ನು ಎಲ್ಲಾ ಜಿಲ್ಲೆ ಹಾಗೂ ತಾಲೂಕುಗಳ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ 5 ರೂ.ಗೆ ಬೆಳಗ್ಗಿನ ಉಪಾಹಾರ, 10 ರೂ.ಗೆ ಮಧ್ಯಾಹ್ನ ಮತ್ತು ಸಂಜೆಯ ಊಟ ಒದಗಿಸಲಿದೆ. 

ಕಟ್ಟಡ, ಅಡುಗೆ ಕೋಣೆ: ಒಂದು ಅಥವಾ ಎರಡು ಕ್ಯಾಂಟೀನ್‌ ಅಗತ್ಯವಿರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಡುಗೆ ಕೋಣೆ ಹೊಂದಿರುವ ಕ್ಯಾಂಟೀನ್‌ಗಳನ್ನು ನಿರ್ಮಿಸುವುದು, ಎರಡಕ್ಕಿಂತ ಹೆಚ್ಚಿನ ಸಂಖ್ಯೆಯ ಕ್ಯಾಂಟೀನ್‌ಗಳನ್ನು ಹೊಂದಿರುವ ಕೇಂದ್ರಗಳಲ್ಲಿ ಕಾಂಟೀನ್‌ ಕಟ್ಟಡ ಮತ್ತು ಅಡುಗೆ ಕೋಣೆ ಕಟ್ಟಡಗಳನ್ನು ಪ್ರತ್ಯೇಕಿಸಿ, ಸಾಮಾನ್ಯ ಅಡುಗೆ ಕೋಣೆಗಳನ್ನು ನಿರ್ಮಿಸಲು ತಿಳಿಸಿದೆ.

Advertisement

ಕ್ಯಾಂಟೀನ್‌ ಸ್ಥಳದಲ್ಲಿ ವಾಟರ್‌ ರೀಚಾರ್ಜ್‌, ನೀರಿನ ನೆಲತೊಟ್ಟಿ, ಸೋಕ್‌ ಪಿಟ್‌, ತಂತಿಬೇಲಿ ನಿರ್ಮಿಸಲಾಗುವುದು. ಶುಚಿತ್ವ ಮತ್ತು ನೈರ್ಮಲ್ಯಕ್ಕೆ ಆದ್ಯತೆ ನೀಡುವುದರ ಜೊತೆಗೆ ಸಿಸಿ ಟೀವಿ ಕ್ಯಾಮರಾ ಅಳವಡಿಸಲಾಗುವುದು. ಅಡುಗೆ ಉಪಕರಣ ಮತ್ತು ಪೀಠೊಪಕರಣಗಳ ಸಂಗ್ರಹಣೆಯನ್ನು ಕರ್ನಾಟಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ 1999ರ ಪ್ರಕಾರ ಟೆಂಡರ್‌ ಮುಖಾಂತರ ಒದಗಿಸಲಾಗುವುದು. ಆಹಾರ ಸರಬರಾಜುದಾರರ ಆಯ್ಕೆ ಬಗ್ಗೆ ಟೆಂಡರ್‌ ಪ್ರಕ್ರಿಯೆಯನ್ನು ಜಿಲ್ಲೆಯ ಜಿಲ್ಲಾಧಿಕಾರಿಗಳು ನಿರ್ವಹಿಸಲಿದ್ದಾರೆ.

ಕಂದಾಯ ಇಲಾಖೆ, ನಗರ ಸ್ಥಳೀಯ ಸಂಸ್ಥೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ವಿದ್ಯುತ್‌ ಕಂಪನಿಗಳು, ಪೊಲೀಸ್‌ ಇಲಾಖೆ ಅಥವಾ ಇತರೆ ಯಾವುದೇ ಸರ್ಕಾರಿ ಸಂಸ್ಥೆಗಳಿಗೆ ಸಂಬಂಧಿಸಿದ ಜಾಗದಲ್ಲಿ ಕ್ಯಾಂಟೀನ್‌ ಕಟ್ಟಡ ನಿರ್ಮಿಸಬೇಕು. ಸಾರ್ವಜನಿಕ ಪ್ರದೇಶ, ಸಾರ್ವಜನಿಕ ಆಸ್ಪತ್ರೆ, ವಾಹನ ನಿಲ್ದಾಣ, ರೈಲ್ವೆ ನಿಲ್ದಾಣಗಳಂತಹ ಪ್ರದೇಶ ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿದೆ. 

ಪ್ರತ್ಯೇಕ ಅಡುಗೆ ಕೋಣೆಗಳಿಂದ ವಿವಿಧ ಕ್ಯಾಂಟೀನ್‌ಗಳಿಗೆ ಆಹಾರವನ್ನು ಸಾಗಿಸಲು ಕಾರ್ಮಿಕ ಇಲಾಖೆಯಿಂದ ಅದಕ್ಕಾಗಿ ವಿಶೇಷ ಮಾದರಿಯ ವಾಹನ ಒದಗಿಸಲಾಗುವುದು. ಅಡುಗೆ ಕೋಣೆಯಿಂದ 10 ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿನ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿರುವ 50ಕ್ಕಿಂತ ಹೆಚ್ಚಿನ 250ಕ್ಕಿಂತ ಕಡಿಮೆ ಇರುವ ಕಾರ್ಮಿಕರಿಗೆ ಮಧ್ಯಾಹ್ನ ಒಂದು ಗಂಟೆ ನಂತರ ಆಹಾರ ತಲುಪಿಸಲು ಈ ವಾಹನ ಬಳಸಲಾಗುವುದು. 

ಸಮಿತಿ ರಚನೆ: ಕ್ಯಾಂಟೀನ್‌ಗಳ ಅನುಷ್ಠಾನ ಮತ್ತು ನಂತರದ ನಿರ್ವಹಣೆ, ಮೇಲ್ವಿಚಾರಣೆ ನಡೆಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಆಹಾರ ಮತ್ತು ನಾಗರಿಕರ ಪೂರೈಕೆ ಇಲಾಖೆ ಉಪನಿರ್ದೇಶಕರು, ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ, ನಗರ ಸ್ಥಳೀಯ ಸಂಸ್ಥೆ
ಆಯುಕ್ತರು, ಮುಖ್ಯಾಧಿಕಾರಿ, ಜಿಲ್ಲಾ ಕಾರ್ಮಿಕ ಅಧಿಕಾರಿ, ರಾಜ್ಯ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ, ಸಹಾಯ, ಕಾರ್ಯಪಾಲಕ ಅಭಿಯಂತರರು, ಪರಿಸರ ಅಭಿಯಂತರರು, ಆರೋಗ್ಯಾಧಿಕಾರಿ, ಜಿಲ್ಲಾ ನಗರಾಭಿವೃದ್ಧಿ
ಘಟಕದ ಯೋಜನಾಧಿಕಾರಿ ಸದಸ್ಯರನ್ನಾಗಿ ನಿಯೋಜಿಸಲಾಗಿದೆ. ಬೆಂಗಳೂರಿನ ಜನತೆ ಇಂದಿರಾ ಕ್ಯಾಂಟೀನ್‌ನಲ್ಲಿ ಪಡೆಯುವ ಉಪಾಹಾರ, ಭೋಜನವನ್ನು ಶೀಘ್ರ ಮಂಡ್ಯ ನಗರ ಮತ್ತು ಜಿಲ್ಲೆಯ ಪಟ್ಟಣ ಪ್ರದೇಶದ ಜನತೆ ಸವಿಯಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next