Advertisement

ಆರೋಗ್ಯಕರ ರೀತಿಯಲ್ಲಿ ನಡೆಸಿ ಇಂದಿರಾ ಕ್ಯಾಂಟೀನ್‌

08:32 AM Aug 17, 2017 | |

ಬರಗಾಲದಂಥ ಪರಿಸ್ಥಿತಿಯಲ್ಲಿ ಜನರಿಗೆ ಧಾನ್ಯ ಕಾಳುಕಡ್ಡಿಗಳನ್ನು ಕೊಡುವ ಬದಲು ಆ ಪ್ರದೇಶಗಳಲ್ಲಿ ಸಬ್ಸಿಡಿ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಿ ತಯಾರಾದ ಆಹಾರವನ್ನೇ ಕೊಡುವುದು ಉತ್ತಮ.

Advertisement

ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್‌ ಬೆಂಗಳೂರಿನಲ್ಲಿ ಉದ್ಘಾಟನೆಯಾಗಿದೆ. ತಮಿಳುನಾಡಿನಲ್ಲಿ ದಿ| ಜಯಲಲಿತಾ 2013ರಲ್ಲಿ ಪ್ರಾರಂಭಿಸಿದ ಅಮ್ಮ ಕ್ಯಾಂಟೀನ್‌ನ ತದ್ರೂಪಿ ಇದು. ಭಾರೀ ರಿಯಾಯಿತಿ ಬೆಲೆಯಲ್ಲಿ ಬೆಳಗ್ಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ನೀಡುವ ಅಮ್ಮ ಕ್ಯಾಂಟೀನ್‌ ತಮಿಳುನಾಡಿನಲ್ಲಿ ದಿಢೀರ್‌ ಜನಪ್ರಿಯವಾದದ್ದಲ್ಲದೆ ಇತರ ಹಲವು ರಾಜ್ಯಗಳಿಗೆ ಈ ಮಾದರಿಯ ಕ್ಯಾಂಟೀನ್‌ ಪ್ರಾರಂಭಿಸಲು ಪ್ರೇರಣೆಯನ್ನೂ ನೀಡಿತು. ರಾಜಸ್ಥಾನದಲ್ಲಿ ಅನ್ನಪೂರ್ಣ ರಸೋಯಿ ಯೋಜನೆ, ಮಧ್ಯಪ್ರದೇಶದಲ್ಲಿ ದೀನ್‌ ದಯಾಳ್‌ ಕ್ಯಾಂಟೀನ್‌, ಆಂಧ್ರ ಪ್ರದೇಶದಲ್ಲಿ ಎನ್‌ಟಿಆರ್‌ ಅನ್ನ ಕ್ಯಾಂಟೀನ್‌, ದಿಲ್ಲಿಯಲ್ಲಿ ಆಮ್‌ ಆದ್ಮಿ ಕ್ಯಾಂಟೀನ್‌ ಎಂಬ ಹೆಸರಿನಲ್ಲಿ ಯೋಜನೆ ಜಾರಿಗೊಂಡಿದೆ. ಕಡಿಮೆ ಬೆಲೆಗೆ ಉಪಾಹಾರ ಮತ್ತು ಭೋಜನವನ್ನು ನೀಡಿ ಜನರನ್ನು ಖುಷಿಪಡಿಸುವ ಮೂಲಕ ಮತಬ್ಯಾಂಕ್‌ ಗಟ್ಟಿಗೊಳಿಸಿಕೊಳ್ಳುವುದು ಇಂತಹ ಕ್ಯಾಂಟೀನ್‌ ಪ್ರಾರಂಭಿಸುವ ನಿಜವಾದ ಉದ್ದೇಶ ಎಂಬ ಆರೋಪವನ್ನು ಅಲ್ಲಗಳೆಯುವಂತಿಲ್ಲವಾದರೂ ಇದೇ ವೇಳೆ ರಾಜಕೀಯದ ಹೊರತಾಗಿಯೂ ಈ ಕ್ಯಾಂಟೀನ್‌ಗಳಿಂದ ಜನರಿಗೆ ಹಲವು ರೀತಿಯ ಪ್ರಯೋಜನಗಳಿವೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ತಮಿಳುನಾಡಿನಲ್ಲಿ 2016ರಲ್ಲಿ ಜಯಲಲಿತಾ ಪಕ್ಷ ನಿಚ್ಚಳ ಬಹುಮತ ಸಾಧಿಸುವಲ್ಲಿ ಅಮ್ಮ ಕ್ಯಾಂಟೀನ್‌ ಪಾಲು ದೊಡ್ಡದಿತ್ತು. 

ಈ ಮಾದರಿಯ ಕ್ಯಾಂಟೀನ್‌ಗೆ ಬಡವರು ಮಾತ್ರ ಹೋಗಬಹುದು ಎಂದು ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ ತಮಿಳುನಾಡಿನಲ್ಲಿ ಬಡವರಿಂದ ಹಿಡಿದು ಸರಕಾರಿ ಮತ್ತು ಕಾರ್ಪೋರೇಟ್‌ ಕಚೇರಿಗಳಲ್ಲಿ ಐದಂಕಿ, ಆರಂಕಿ ಸಂಬಳ ಎಣಿಸುವವರು ಕೂಡ ಅಮ್ಮ ಕ್ಯಾಂಟೀನ್‌ ಎದುರು ಕ್ಯೂ ನಿಲ್ಲುವುದನ್ನು ಕಂಡ ಬಳಿಕ ಈ ಭಾವನೆ ಹುಸಿಯಾಗಿದೆ. ಬೆಂಗಳೂರಿನಂತಹ ಮಹಾನಗರದಲ್ಲಿ ಐದು ರೂಪಾಯಿಗೆ ಉಪಾಹಾರ, 10 ರೂಪಾಯಿಗೆ ಶುಚಿರುಚಿಯಾದ ಊಟ ಸಿಗುವುದೆಂದರೆ ಅದರಿಂದಾಗುವ ಪ್ರಯೋಜನಗಳು ಒಂದೆರಡಲ್ಲ. ನಾನಾ ಕೆಲಸಗಳಿಗಾಗಿ ದೂರದೂರುಗಳಿಂದ ಬೆಂಗಳೂರಿಗೆ ಬರುವವರಿಗೆ, ಪ್ರವಾಸಿಗರಿಗೆ, ವಿದ್ಯಾರ್ಥಿಗಳಿಗೂ ಕ್ಯಾಂಟೀನ್‌ನಿಂದ ಪ್ರಯೋಜನವಿದೆ. ದುಡಿಯಲು ಹೋಗುವ ಮಹಿಳೆಯರಿಗೆ ಒಂದು ದಿನ ಅಡುಗೆ ಮಾಡುವುದನ್ನು ತಪ್ಪಿಸಿಕೊಂಡರೂ ಚಿಂತೆಯಿಲ್ಲ, ಇಂದಿರಾ ಕ್ಯಾಂಟೀನ್‌ನಲ್ಲೇ ತಿಂಡಿ ಊಟ ಮಾಡಬಹುದು ಎಂಬ ಖಾತರಿಯಿರುತ್ತದೆ. ಅಂತೆಯೇ ಶಾಲೆ ಕಾಲೇಜಿಗೆ ಹೋಗುವ ಮಕ್ಕಳಿರುವ ಗೃಹಿಣಿಯರಿಗೂ ಬೆಳ್ಳಂಬೆಳಗ್ಗೆ ಎದ್ದು ಅವಸರದಿಂದ ಅಡುಗೆ ಮಾಡುವ ಕಷ್ಟವೂ ತಪ್ಪಲಿದೆ. 

ಒಂದು ಸಮೀಕ್ಷೆ ಪ್ರಕಾರ ಭಾರತದಲ್ಲಿ 20 ಕೋಟಿ ಜನರು ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚು. ಇಂತಹ ಪ್ರದೇಶಗಳಲ್ಲಿ ಸಬ್ಸಿಡಿ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಿ ಸಮಸ್ಯೆ  ನಿವಾರಿಸುವ ಪ್ರಯತ್ನ ಮಾಡಬಹುದು. ಬಡವರಿಗೆ ನೇರವಾಗಿ ಸಿದ್ಧಪಡಿಸಿದ ಆಹಾರವನ್ನೇ ನೀಡುವುದರಿಂದಲೂ ಪ್ರಯೋಜನಗಳಿವೆ. ಇದರಿಂದ ಪತಿ- ಪತ್ನಿ ಇಬ್ಬರೂ ದುಡಿಯಲು ಹೋಗಿ  ಕೌಟುಂಬಿಕ ಆದಾಯ ಹೆಚ್ಚಿಸಿಕೊಳ್ಳಬಹುದು. ಅಲ್ಲದೆ ಸಬ್ಸಿಡಿ ಬೆಲೆಯಲ್ಲಿ/ ಉಚಿತವಾಗಿ ಸಿಕ್ಕಿದ ಆಹಾರ ಧಾನ್ಯಗಳನ್ನು ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕಬಹುದು. ಬರಗಾಲದಂಥ ಪರಿಸ್ಥಿತಿ ಯಲ್ಲಿ ಜನರಿಗೆ ಧಾನ್ಯ ಕಾಳುಕಡ್ಡಿಗಳನ್ನು ಕೊಡುವ ಬದಲು ಆ ಪ್ರದೇಶಗಳಲ್ಲಿ ಸಬ್ಸಿಡಿ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಿ ತಯಾರಾದ ಆಹಾರವನ್ನೇ ಕೊಡುವುದು ಉತ್ತಮ. ಅಂತೆಯೇ ಎಲ್ಲ ದೊಡ್ಡ ಸರಕಾರಿ ಕಚೇರಿಗಳು, ಆಸ್ಪತ್ರೆಗಳಲ್ಲೂ ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸಿದರೆ ಜನರಿಗೆ ಅನುಕೂಲವಾದೀತು.

ಇದೇ ವೇಳೆ ಸಬ್ಸಿಡಿ ಕ್ಯಾಂಟೀನ್‌ ಅನ್ನು ನಿರಂತರವಾಗಿ, ಶುಚಿರುಚಿ ಯಾಗಿ, ಆರೋಗ್ಯಕರ ರೀತಿಯಲ್ಲಿ ನಡೆಸಿಕೊಂಡು ಹೋಗುವ ಬದ್ಧತೆ ತೋರಿಸಬೇಕು. ಚೆನ್ನೈಯಲ್ಲಿ ಅಮ್ಮ ಕ್ಯಾಂಟೀನ್‌ಗಳಿಂದಾಗಿ ನಗರಪಾಲಿಕೆಗಳ ಮೇಲೆ ವಿಪರೀತ ಹೊರೆ ಬೀಳುತ್ತಿದೆ. ಚೆನ್ನೈ ನಗರ ಪಾಲಿಕೆ 2015-16ನೇ ಸಾಲಿನಲ್ಲಿ ಬರೋಬ್ಬರಿ 100 ಕೋ. ರೂ. ಅಮ್ಮ ಕ್ಯಾಂಟೀನ್‌ ನಡೆಸಲು ವ್ಯಯಿಸಿರುವುದರಿಂದ ಉಳಿದ ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸು ಕೊರತೆಯಾಗಿದನ್ನು ಸಿಎಜಿ ವರದಿ ತಿಳಿಸಿದೆ. ಈ ಅಂಶವನ್ನು ಸರಕಾರ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next