Advertisement

ಸಮಸ್ಯೆಗಳ ಸುಳಿಯಲ್ಲಿ ಬಿ.ಸಿ. ರೋಡ್‌ ಇಂದಿರಾ ಕ್ಯಾಂಟೀನ್‌

02:10 AM Nov 13, 2018 | Team Udayavani |

ಬಂಟ್ವಾಳ: ಬಿ.ಸಿ. ರೋಡ್‌ನ‌ಲ್ಲಿ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಆರಂಭವಾಗಿದ್ದ ಇಂದಿರಾ ಕ್ಯಾಂಟೀನ್‌ ಅಂತಿಮ ಹಂತಕ್ಕೆ ಬರುವಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇನ್ನಿಲ್ಲದ ಗೊಂದಲಗಳಿಂದ ವಿವಾದ ಕೇಂದ್ರವಾಗಿ ಮುಂದುವರಿದಿದೆ. ಆಡಳಿತ ಮತ್ತು ಜನಪ್ರತಿನಿಧಿಗಳ ನಡುವಿನ ಬಿಗುಮಾನ, ಪರಸ್ಪರ ಸಂವಹನದ ಕೊರತೆ, ಇಚ್ಛಾಶಕ್ತಿ ಕೊರತೆ ಒಟ್ಟು ಸಮಸ್ಯೆಗೆ ಕಾರಣ ಎಂಬುದಾಗಿ ತರ್ಕಿಸಲಾಗಿದೆ.

Advertisement

ಪ್ರಗತಿಗೆ ಗ್ರಹಣ
ಕ್ಯಾಂಟೀನ್‌ ನಿರ್ಮಾಣದ ಆರಂಭದ ಕಾಮಗಾರಿ ಭರದಿಂದ ನಡೆಯಿತಾದರೂ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಕಾರಣಕ್ಕಾಗಿ ಒಮ್ಮೆ ನಿಲುಗಡೆಯ ಹಂತಕ್ಕೆ ಬಂದಿತ್ತು. ಚುನಾವಣೆ ಬಳಿಕ ಕಾಮಗಾರಿ ಪ್ರಗತಿಗೆ ಗ್ರಹಣ ಹಿಡಿದಿದೆ. ನ. 3ರಂದು ಕ್ಯಾಂಟೀನ್‌ ಸುತ್ತಲೂ ಕಂಪೌಂಡ್‌ ನಿರ್ಮಾಣದ ಕೆಲಸ ದಿಢೀರನೆ ಆರಂಭವಾಗಿತ್ತು. ಬಿ.ಸಿ. ರೋಡ್‌ ಮಿನಿ ವಿಧಾನಸೌಧ ಕಟ್ಟಡದ ಕಂಪೌಂಡಿಗೆ ಸಮಾನವಾಗಿ ಸುತ್ತುಗೋಡೆ ನಿರ್ಮಿ ಸುವ ಬದಲು ಅದರ ವ್ಯಾಪ್ತಿ ಮೀರಿ ಹೆಚ್ಚು ಸ್ಥಳವನ್ನು ಅತಿಕ್ರಮಿಸುವಂತೆ ನಿರ್ಮಾಣ ಸಂದರ್ಭ ಸಾರ್ವಜನಿಕರು ತಡೆ ಒಡ್ಡಿದ್ದರು.

ಅನಂತರ ಪೌರಾಡಳಿತ ಇಲಾಖೆಗೆ ಸಂಬಂಧಿಸಿ ಮಂಗಳೂರಿನಿಂದ ಬಂದಿದ್ದ ಪಿ.ಡಿ. ಅವರು ಇಲ್ಲಿನ ಪ್ರತಿರೋಧ ಕಂಡು ಹಿಂದೆ ಹೋಗಿದ್ದರು. ಪುರಸಭೆ ಮುಖ್ಯಾಧಿಕಾರಿಗೆ ಇದು ಸಮಸ್ಯೆಯಾಗಿಯೇ ಉಳಿದಿದೆ. ಮೇಲಧಿಕಾರಿಗಳಿಂದ ತತ್‌ಕ್ಷಣ ಇಂದಿರಾ ಕ್ಯಾಂಟೀನ್‌ ಕಾಮಗಾರಿ ಮುಕ್ತಾಯ ಮಾಡುವಂತೆ ಒತ್ತಡ ಹೆಚ್ಚುತ್ತಿದ್ದು, ಸ್ಥಳದಲ್ಲಿ ಕಾಮಗಾರಿ ನಡೆಸುವುದೇ ಕಷ್ಟ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಅಧಿಕಾರಿಗಳ ಮಟ್ಟದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ. ನ.10ರಂದು ಪುರಸಭೆಯಿಂದ ಕಂಪೌಂಡ್‌ ನಿರ್ಮಿಸುವ ಮತ್ತೂಂದು ಪ್ರಯತ್ನವೂ ವಿಫಲವಾಗಿತ್ತು. ಮಾತ್ರವಲ್ಲ ಅನಂತರ ನಡೆದ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಪುರಸಭಾ ಮುಖ್ಯಾಧಿಕಾರಿಗೆ ಪ್ರಶ್ನೆಗಳ ಸುರಿಮಳೆ ಎದುರಾಗಿತ್ತು.

ಸಮಸ್ಯೆ ಏನು ?
ಬಿ.ಸಿ. ರೋಡ್‌ ಮಿನಿ ವಿಧಾನಸೌಧ ಬಳಿಯಲ್ಲಿ ವಾಹನ ನಿಲುಗಡೆಗೆ ಸಾಕಷ್ಟು ಸ್ಥಳವಿಲ್ಲ. ಅಲ್ಲಿಯೇ ಕ್ಯಾಂಟೀನ್‌ ನಿರ್ಮಾಣ ಆಗಿದ್ದು, ಅದರ ಕಂಪೌಂಡ್‌ ವಿಸ್ತರಿಸಿ ರಸ್ತೆ ಅತಿಕ್ರಮಣ ಇಲ್ಲಿನ ಸಮಸ್ಯೆಯಾಗಿದೆ. ರಾಜಮಾರ್ಗದಲ್ಲಿ ಈ ರೀತಿಯ ಕಂಪೌಂಡ್‌ ನಿರ್ಮಾಣ ಬೇಡ ಎನ್ನುವುದು ಸಾರ್ವಜನಿಕ ವಾದವಾಗಿದೆ.

ಯಾವುದೇ ಕಟ್ಟಡ ನಿರ್ಮಾಣಕ್ಕೆ ಮೊದಲು ಅದಕ್ಕೆ ಸಂಬಂಧಿಸಿದ ಇಲಾಖೆಗಳಿಂದ ಸೂಕ್ತ ಅನುಮತಿ, ನೀಲಿ ನಕಾಶೆ, ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ಇತ್ಯಾದಿ ಪಡೆಯಬೇಕು. ಆದರೆ ಕ್ಯಾಂಟೀನ್‌ ನಿರ್ಮಾಣಕ್ಕೆ ಇದಾವುದೂ ಇಲ್ಲ ಎನ್ನುವುದು ಪುರಸಭಾ ಸದಸ್ಯ ರೊಬ್ಬರು ತಿಳಿಸಿದ್ದಾರೆ. ಸರಕಾರಿ ಇಲಾಖೆಯಿಂದ ನಿರ್ಮಿಸುವ ಸಾರ್ವಜನಿಕ ಕಟ್ಟಡಗಳಿಗೆ  ಅನುಮತಿ ಪಡೆದುಕೊಳ್ಳುವ ಕ್ರಮವಿಲ್ಲ. ಉದಾಹರಣೆಗೆ ಮಿನಿ ವಿಧಾನಸೌಧ ಸಹಿತ ಇತ್ತೀಚಿನ ಸರಕಾರಿ ಪ್ರಾಯೋಜಿತ ಕೆಲವು ಕಟ್ಟಡಗಳಿಗೆ ಅನುಮತಿ ನೀಡುವಂತೆ ಅರ್ಜಿಯೂ ಸಲ್ಲಿಕೆಯಾಗದೆ ಕಟ್ಟಡ ನಿರ್ಮಾಣ ಆಗಿದೆ. ಅದು ಹಿಂದಿನಿಂದ ನಡೆದು ಬಂದ ಪದ್ಧತಿ. ಇದನ್ನು ಯಾವುದೇ ವ್ಯವಸ್ಥೆ ಪ್ರಶ್ನಿಸುವುದಿಲ್ಲ ಎನ್ನುವುದು ಅಧಿಕಾರಿಯೊಬ್ಬರ ಮಾತು. ಬಿ.ಸಿ. ರೋಡ್‌ ನಗರ ಕೇಂದ್ರದಲ್ಲಿ ಕಡಿಮೆ ಮೊತ್ತದಲ್ಲಿ ಉಪಾಹಾರ ಮತ್ತು ಊಟದ ವ್ಯವಸ್ಥೆ ಶೀಘ್ರ ಅನುಷ್ಠಾನ ಆಗಬೇಕು ಎಂಬುದು ಜನಸಾಮಾನ್ಯರ ಅಪೇಕ್ಷೆ. ಸರಕಾರ ನೀಡುವ ಸೌಲಭ್ಯವನ್ನು ಜನರಿಗೆ ಮುಟ್ಟಿಸುವ ಕ್ರಮ ಅಧಿಕಾರಿಗಳ ಮಟ್ಟದಿಂದಲೇ ಆಗಬೇಕು.

Advertisement

ಅತಿಕ್ರಮಿಸದಂತೆ ಸೂಚನೆ
ನಾನು ಕಳೆದ ಮಾರ್ಚ್‌ನಲ್ಲಿ ಬೈಂದೂರಿಗೆ ವರ್ಗಾವಣೆಗೊಂಡು ಹೋಗಿದ್ದು, ಪುನಃ  ಬಂಟ್ವಾಳ ತಹಶೀಲ್ದಾರ್‌ ಆಗಿ ಅಧಿಕಾರ ಸ್ವೀಕರಿಸುವ ಹೊತ್ತಿಗೆ ಇಂದಿರಾ ಕ್ಯಾಂಟೀನ್‌ ಗೋಡೆ ಮತ್ತಿತರ ನಿರ್ಮಾಣಗಳು ಆಗಿದ್ದವು. ಅದು ಪೌರಾಡಳಿತಕ್ಕೆ ಸಂಬಂಧಿಸಿದ ವಿಚಾರವಾಗಿದ್ದು, ಜಮೀನು ಮಂಜೂರಾತಿ ಅರ್ಜಿ ಸಲ್ಲಿಸಲ್ಪಟ್ಟಿದೆಯೇ ಎಂಬುದು ತಿಳಿದಿಲ್ಲ. ಸರಕಾರದ ಮಟ್ಟದಲ್ಲಿ ಆಗಬೇಕಾದ ಕಾನೂನು ಕ್ರಮಗಳು ನಡೆದಿದೆಯೇ ಎಂಬ ಪರಿಶೀಲನೆ ನಡೆಸಿಲ್ಲ. ಜಮೀನು ಅತಿಕ್ರಮಿಸದಂತೆ ಸೂಚನೆ ನೀಡಿದ್ದೇನೆ.
– ಪುರಂದರ ಹೆಗ್ಡೆ, ಬಂಟ್ವಾಳ ತಹಶೀಲ್ದಾರ್‌

ಸೂಚನೆಯಂತೆ ಕ್ರಮ
ಇಂದಿರಾ ಕ್ಯಾಂಟೀನ್‌ ಕಾಮಗಾರಿ ಪೂರ್ತಿ ಮಾಡಲು ಇಲಾಖೆಯಿಂದ ಸೂಚನೆ ಬಂದಿರುವ ಪ್ರಕಾರ ಕಂಪೌಂಡ್‌ ನಿರ್ಮಿಸಲು ಕ್ರಮ ಕೈಗೊಂಡಿದೆ. ಅದಕ್ಕೆ ತಡೆ ಒಡ್ಡಿದ್ದು, ಪೌರಾಡಳಿತ ಯೋಜನಾ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನೈರ್ಮಲ್ಯದ ಉದ್ದೇಶದಿಂದ ಕ್ಯಾಂಟೀನ್‌ ಆವರಣ ಗೋಡೆ ನಿರ್ಮಿಸಲು ಯೋಜಿಸಿದ್ದು ಹೌದು. ಸರಕಾರದ ಯೋಜನೆಯಾದ ಕಾರಣ ಸೂಚನೆ ಪಾಲಿಸುವುದು ಕರ್ತವ್ಯ ಆಗಿದೆ. ಹಿರಿಯ ಅಧಿಕಾರಿಗಳಿಗೆ ಇಲ್ಲಿನ ಬೆಳವಣಿಗೆ ಬಗ್ಗೆ ತಿಳಿಸಲಾಗಿದೆ. ಮುಂದಿನ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುತ್ತದೆ. 
– ರೇಖಾ ಜೆ. ಶೆಟ್ಟಿ, ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ

— ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next