ಶಿರಸಿ: ಹಸಿದವರಿಗೆ ಕಡಿಮೆ ದರದಲ್ಲಿ ಊಟ-ಉಪಾಹಾರ ನೀಡಿ ನೆರವಾಗಬೇಕಿದ್ದ ಇಂದಿರಾ ಕ್ಯಾಂಟೀನ್ ಕಟ್ಟಡಕ್ಕೆ ಆರು ವರ್ಷಗಳು ಉರುಳಿದರೂ ಶಿಲಾನ್ಯಾಸಕ್ಕೆ ಮುಹೂರ್ತವೇ ಸಿಕ್ಕಿಲ್ಲ.
ಮಂಜೂರಾಗಿ ಆರು ವರ್ಷಗಳು ಕಳೆದಿದ್ದರೂ ಇನ್ನೂ ನಗರದಲ್ಲಿ ಎಲ್ಲಿ ನಿರ್ಮಿಸುವುದು ಎಂಬುದೇ ಬಗೆಹರಿಯುತ್ತಿಲ್ಲ! ಬಡವರಿಗೆ ಕಡಿಮೆ ದರದಲ್ಲಿ ಊಟ, ಉಪಾಹಾರ ಒದಗಿಸಲು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಯೋಜನೆಯ ಲಾಭ ತಾಲೂಕಿನ ಜನತೆಗೆ ಸಿಕ್ಕಿಲ್ಲ. ಬೆಳಗ್ಗೆಯ ಉಪಾಹಾರ 5 ರೂ., ಮಧ್ಯಾಹ್ನ ಮತ್ತು ಸಂಜೆಯ ಊಟ ತಲಾ 10 ರೂ. ನಲ್ಲಿ ಒಟ್ಟು ಒಂದು ದಿನದಲ್ಲಿ ಕೇವಲ 25 ರೂ. ನಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ಇಂದಿರಾ ಕ್ಯಾಂಟೀನ್‌ನಲ್ಲಿ ಸಾಧ್ಯವಿದೆ ಎಂದು ಬಡವರು ಈ ಕ್ಯಾಂಟೀನ್ ಆರಂಭಕ್ಕೆ ಕಾದಿದ್ದರೂ ಅವಕಾಶ ಇಲ್ಲದಂತಾಗಿದೆ.
ಕಳೆದ ಆರು ವರ್ಷಗಳ ಹಿಂದೆ ಇಂದಿರಾ ಕ್ಯಾಂಟೀನ್ ಮಂಜೂರಾದಾಗ ಇಲ್ಲಿಯ ಅಂಚೆ ವೃತ್ತದ ಹಿಂಭಾಗದಲ್ಲಿ ನಿರ್ಮಿಸಲು ನಗರಸಭೆ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಜಾಗದಲ್ಲಿ ಬುನಾದಿ ಕಾರ್ಯವನ್ನೂ ನಗರಸಭೆ ಪೂರ್ಣಗೊಳಿಸಿದೆ. ಆದರೆ ಕೆಲವರು ಈ ಜಾಗ ತಮಗೆ ಸೇರಿದ್ದು ಎಂದು ನ್ಯಾಯಾಲಯಕ್ಕೆ ತೆರಳಿದ ಕಾರಣ ನಿರ್ಮಾಣ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ. ಎರಡು ವರ್ಷದ ಹಿಂದೆಯೇ ಪೂರೈಕೆಯಾಗಿದ್ದ ಕ್ಯಾಂಟೀನ್ ಪಾತ್ರೆ, ಅಡುಗೆ ತಯಾರಿಕೆ ಸಾಮಗ್ರಿಗಳು ನಗರಸಭೆಯ ದಾಸ್ತಾನು ಕೊಠಡಿಯಲ್ಲಿ ಧೂಳು ತಿನ್ನುತ್ತಿವೆ.
ಕಳೆದ ವರ್ಷದವರೆಗೂ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಗೊಳ್ಳಬಹುದು ಎಂದು ನಗರಸಭೆ ಕಾದದ್ದೂ ಆಯಿತು. ನಗರಸಭೆ ಸಾಮಾನ್ಯ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದು, ಬೇರೆ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿ ಬಡವರಿಗೆ ಈ ಸೌಲಭ್ಯ ಒದಗಿಸುವ ಬಗ್ಗೆ ನಿರ್ಧರಿಸಲಾಗಿದೆ. ಕ್ಯಾಂಟೀನ್ ನಿರ್ಮಾಣಕ್ಕೆ ಎರಡು ಗುಂಟೆ ಜಾಗದ ಅಗತ್ಯತೆ ಇದೆ. ಇಲ್ಲಿಯ ರಾಯಪ್ಪ ಹುಲೇಕಲ್ ಶಾಲೆ ಸಮೀಪ ಕ್ಯಾಂಟೀನ್ ಸ್ಥಾಪನೆಗೆ ಜಾಗ ಒದಗಿಸುವ ಬಗ್ಗೆ ಚರ್ಚೆಯೂ ನಡೆದಿತ್ತು. ಆದರೆ ಜಾಗ ಇನ್ನೂ ಒದಗಿಸಲು ಈವರೆಗೂ ಅಂತಿಮ ನಿರ್ಣಯವಾಗಿಲ್ಲ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಯಾದ ಯೋಜನೆಯದ್ದರಿಂದ ಈಗಿನ ಬಿಜೆಪಿ ಆಡಳಿತದ ನಗರಸಭೆ ಆಸಕ್ತಿ ತೋರುತ್ತಿಲ್ಲ. ಯೋಜನೆ ಯಾವ ಸರ್ಕಾರದ್ದಾದರೂ ಇದು ಬಡವರಿಗೆ ಅಮೃತ ನೀಡಿದಂತಾಗುತ್ತದೆ ಎಂಬುದನ್ನು ಮರೆಯಬಾರದು ಎಂದು ನಗರಸಭೆ ಕಾಂಗ್ರೆಸ್ ಸದಸ್ಯರು ಅಸಮಾಧಾನ ಹೊರ ಹಾಕಿದ್ದಾರೆ.
ಈಗಾಗಲೇ ನಗರದ ಮೂರು ನಾಲ್ಕು ಕಡೆ ಜಾಗ ನೋಡಿದ್ದೇವೆ. ಹೆಚ್ಚು ಜನ ಸಂದಣಿ ಇರುವ ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಕ್ಯಾಂಟೀನ್ ಕಟ್ಟಡ ನಿರ್ಮಿಸುತ್ತೇವೆ.
-ಗಣಪತಿ ನಾಯ್ಕ, ನಗರಸಭೆ ಅಧ್ಯಕ್ಷ