ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಇಂದಿರಾ ಕ್ಯಾಂಟೀನ್’ಗೆ ಶುಕ್ರವಾರ ಪ್ರಕಾಶನಗರ, ಬಸವನಗುಡಿ ಮತ್ತು ಎಚ್‌ಬಿಆರ್ ಬಡಾವಣೆಯಲ್ಲಿ ಚಾಲನೆ ಸಿಕ್ಕಿದೆ. ಒಂದು ಕ್ಯಾಂಟೀನ್ ಜೋಡಣೆಗೆ ಎರಡು ಮೂರು ದಿನ ಹಿಡಿಯಲಿದೆ.
ಕೆಇಎಫ್ ಇನ್‌ಫ್ರಾ ಕಂಪೆನಿಗೆ ಕಾಮಗಾರಿ ಗುತ್ತಿಗೆ ನೀಡಲಾಗಿದ್ದು, ತಿಂಗಳೊಳಗೆ 106 ಕ್ಯಾಂಟೀನ್‌ಗಳ ಜೋಡಣೆ ಕಾರ್ಯ ಪೂರ್ಣಗೊಳ್ಳಲಿದೆ. ಆನಂತರ ಹೆಚ್ಚುವರಿ ತಂಡಗಳ ಮೂಲಕ 92 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ಗಳ ಅಳವಡಿಕೆ ಕಾರ್ಯ ನಡೆಯಲಿದೆ.
ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾರ್ಯ ಆರಂಭವಾಗಿರುವ ಹಿನ್ನೆಲೆಯಲ್ಲಿ ಮೇಯರ್ ಜಿ.ಪದ್ಮಾವತಿ ಅವರು ಕೆಇಎಫ್ ಇನ್‌ಫ್ರಾ ಕಂಪೆನಿಯ ಹೊಸೂರಿನ ಕೃಷ್ಣಗಿರಿ ಬಳಿಯ ಪ್ರೀಕಾಸ್ಟ್ ಎಲಿಮೆಂಟ್ ತಯಾರಿಕಾ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲಿ ಆಗಸ್ಟ್ 9ರೊಳಗೆ ಕ್ಯಾಂಟೀನ್‌ಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಕ್ಯಾಂಟೀನ್ ನಿರ್ಮಾಣಕ್ಕೆ ಸಿದ್ಧವಿರುವ 106 ಸ್ಥಳಗಳನ್ನು ಕಂಪೆನಿಗೆ ಹಸ್ತಾಂತರ ಮಾಡಲಾಗಿದ್ದು, ಅವರಿಗೆ ಅಗತ್ಯ ನೆರವನ್ನು ಪಾಲಿಕೆಯಿಂದ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪಾಲಿಕೆಯ ಕೆಲವೊಂದು ವಾರ್ಡ್‌ಗಳಲ್ಲಿ ಕ್ಯಾಂಟೀನ್ ವಿನ್ಯಾಸಕ್ಕೆ ಅಗತ್ಯವಾದ ಸ್ಥಳ ದೊರೆಯದಿರುವ ಹಿನ್ನೆಲೆಯಲ್ಲಿ ಬಿಡಿಎ, ಕಂದಾಯ, ಜಲಮಂಡಳಿ, ಬಿಎಂಆರ್‌ಸಿಎಲ್ ಸೇರಿದಂತೆ ಅಧೀನ ಸ್ಥಳೀಯ ಸಂಸ್ಥೆಗಳನ್ನು ಜಾಗಗಳನ್ನು ಗುರುತಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಸಚಿವ ಸಂಪುಟ ಸಭೆಯಲ್ಲಿ ಸ್ಥಳೀಯ ಸಂಸ್ಥೆಗಳ ಜಾಗ ಪಡೆಯಲು ಒಪ್ಪಿಗೆ ನೀಡಲಾಗಿದೆ ಎಂದರು.
ಪ್ರೀಕಾಸ್ಟ್ ಎಲಿಮೆಂಟ್‌ಗಳ ನಿರ್ಮಾಣ ತಂತ್ರಜ್ಞಾನದ ಕುರಿತು ಮಾಹಿತಿ ನೀಡಿದ ಕೆಇಎಫ್ ಇನ್‌ಫ್ರಾ ಕಂಪೆನಿಯ ಪ್ರತಿನಿಧಿಯೊಬ್ಬರು, ಒಂದು ಕ್ಯಾಂಟೀನ್ ನಿರ್ಮಾಣಕ್ಕೆ 74 ಎಲಿಮೆಂಟ್‌ಗಳ ಅಗತ್ಯವಿದೆ. ಹೀಗಾಗಿ ಕಾಂಕ್ರಿಟ್ ಎಲಿಮೆಂಟ್‌ಗಳನ್ನು ಸಿದ್ಧಪಡಿಸಲು ರೋಬೋಟಿಕ್ ತಂತ್ರಜ್ಞವಾನವನ್ನು ಬಳಸಿಕೊಳ್ಳಲಾಗಿದೆ. ಅದರಂತೆ ಕಂಪ್ಯೂಟರ್‌ನಲ್ಲಿ ದಾಖಲಿಸಿ ವಿನ್ಯಾಸಕ್ಕೆ ತಕ್ಕಂತೆ ಸ್ವಯಂಚಾಲಿತವಾಗಿ ಕಬ್ಬಿಣವನ್ನು ತುಂಡರಿಸಿ, ವೆಲ್ಡ್ ಮಾಡುತ್ತದೆ ಎಂದು ಮಾಹಿತಿ ನೀಡಿದರು.
ಕ್ಯಾಂಟೀನ್ ಹೇಗಿದೆ?
– ಕ್ಯಾಂಟೀನ್ ಬಳಿಯೇ ಶೌಚಾಲಯ ವ್ಯವಸ್ಥೆ ಇರುತ್ತದೆ.
– ಕ್ಯಾಂಟೀನ್ ಒಳಭಾಗದಲ್ಲಿ 48 ಮಂದಿ ಕುಳಿತು ಊಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.
– ಕ್ಯಾಂಟೀನ್‌ಗೆ 4 ಕಡೆಗಳಲ್ಲಿ ಪ್ರವೇಶ ದ್ವಾರಗಳಿರುತ್ತವೆ.
– ಹೊರ ಭಾಗದಲ್ಲಿ ನಿಂತು ಊಟ ಮಾಡುವ 8 ಟೇಬಲ್‌ಗಳಿರುತ್ತವೆ.