ಹೊಸದಿಲ್ಲಿ : ಇಂಡಿಗೋ ಏರ್ ಲೈನ್ಸ್‌ನ ಪ್ರಯಾಣಿಕರ ಬಸ್ಸೊಂದರಲ್ಲಿ ಇಂದು ಬೆಳಗ್ಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬೆಂಕಿ ಕಾಣಿಸಿಕೊಂಡಿತು.
ಟಾರ್‌ಮ್ಯಾಕ್‌ನಲ್ಲಿ ಪ್ರಯಾಣಿಕರನ್ನು ಇಳಿಸಿದ ಬಳಿಕ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿತು.ಹಾಗಾಗಿ ಯಾರಿಗೂ ಯಾವುದೇ ಅಪಾಯವಾಗಲಿಲ್ಲ. ಹಾಗಿದ್ದರೂ ಈ ಘಟನೆಯ ಬಗ್ಗೆ ಇಂಡಿಗೋ ಏರ್ ಲೈನ್ಸ್ ತನ್ನ ಅಧಿಕೃತ ಹೇಳಿಕೆಯನ್ನು ಈ ತನಕವೂ ಪ್ರಕಟಿಸಿಲ್ಲ.
ಬೆಂಕಿ ಅವಘಡದಿಂದಾಗಿ ಬಸ್ಸಿನ ಎದುರು ಭಾಗವು ತೀವ್ರವಾಗಿ ಹಾನಿಗೊಂಡಿತು. ಬಸ್ಸಿನ ವಿಂಡ್ ಸ್ಕ್ರೀನ್ ಸಂಪೂರ್ಣವಾಗಿ ಧ್ವಂಸವಾಯಿತು. ಹಾಗೆಯೇ ಬಸ್ ಡ್ರೈವರ್ ಕುಳಿತುಕೊಳ್ಳುವಲ್ಲಿನ ಸ್ಥಳ ಕೂಡ ಬೆಂಕಿಯಲ್ಲಿ ಸುಟ್ಟು ಕರಕಲಾಯಿತು. ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದು ಇನ್ನಷ್ಟೇ ತನಿಖೆಯಿಂದ ಗೊತ್ತಾಗಬೇಕಾಗಿದೆ.
ಎರಡು ದಿನಗಳ ಹಿಂದಷ್ಟೇ ದಿಲ್ಲಿಯ ಇಂದಿರಾ ಗಾಂಧಿ ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌ನಲ್ಲಿ 173 ಮಂದಿ ಪ್ರಯಾಣಿಕರನ್ನು ಒಳಗೊಂಡ ಇಂಡಿಗೋ ವಿಮಾನದ ಇಂಧನ ಟ್ಯಾಂಕ್ ಓವರ್ ಫ್ಲೋ ಆದ ಕಾರಣ ಅದರ ಟೇಕಾಫ್ ಅನ್ನು ತತ್‌ಕ್ಷಣವೇ ಕೈಬಿಡಬೇಕಾದ ಸ್ಥಿತಿ ಒದಗಿತ್ತು.
ವಿಮಾನವು ಆಗಸಕ್ಕೆ ನೆಗೆಯುವ ಮುನ್ನ ರನ್‌ವೇಯಲ್ಲಿ ಸಾಗುತ್ತಿದ್ದ ವೇಳೆ ಅದರ ಇಂಧನ ಟ್ಯಾಂಕ್‌ನಿಂದ ಇಂಧನ ಹೊರ ಸುರಿಯುತ್ತಿದ್ದುದು ಕಂಡು ಬಂತೆಂದು ಕೆಲವು ಪ್ರಯಾಣಿಕರು ಹೇಳಿದ್ದರು. ಆದರೆ ಇಂಡಿಗೋ ಆ ರೀತಿಯ ಯಾವುದೇ ಇಂಧನ ಸೋರಿಕೆ ಆದದ್ದಿಲ್ಲ ಎಂದು ಸಮಜಾಯಿಷಿಕೆ ನೀಡಿತ್ತು.