ಲಕ್ನೋ : ಲಕ್ನೋದಿಂದ ಬೆಂಗಳೂರಿಗೆ ಹಾರಲಿದ್ದ ಇಂಡಿಗೋ ಏರ್ ಲೈನ್ಸ್ ವಿಮಾನದಲ್ಲಿ ಕ್ಷುಲ್ಲಕ ಕಾರಣಕ್ಕೆ ದುರ್ವರ್ತನೆ ತೋರಿದ ಸೌರಭ್ ರಾಯ್ ಎಂಬ ಪ್ರಯಾಣಿಕನನ್ನು ಸಿಬಂದಿಗಳು ವಿಮಾನದಿಂದ ಹೊರ ಹಾಕಿದ ಘಟನೆ ಇಂದು ಮಂಗಳವಾರ ಬೆಳಗ್ಗೆ ನಡೆದಿದೆ.
ಇಂಡಿಗೋ ಏರ್ ಲೈನ್ಸ್ ಸಂಸ್ಥೆ ಈ ಘಟನೆಯ ಬಗ್ಗೆ ಅಧಿಕೃತ ಹೇಳಿಕೆಯನ್ನು ಪ್ರಕಟಿಸಿದ್ದು ಸೌರಭ್ ರಾಯ್ ಎಂಬ ಪ್ರಯಾಣಿಕ ತೋರಿದ ದುರ್ವರ್ತನೆಗಾಗಿ ಆತನನ್ನು ವಿಮಾನದಿಂದ ಹೊರಹಾಕಬೇಕಾಯಿತು ಎಂದು ತಿಳಿಸಿದೆ.
ಇಂಡಿಗೋ ಏರ್ ಲೈನ್ಸ್ ಪ್ರಕಾರ ಆರೋಪಿ ಪ್ರಯಾಣಿಕ ಸೌರಭ್ ರಾಯ್ ವಿಮಾನದೊಳಗೆ ನುಸಿ ಕಾಟ ಇದೆ ಎಂದು ಕೂಗಾಡಿದ್ದ. ಆತನ ದೂರಿನ ಪ್ರಕಾರ ಸಮಸ್ಯೆಯನ್ನು ನಿವಾರಿಸಲು ಕ್ಯಾಬಿನ್ ಸಿಬಂದಿಗಳು ಮುಂದಾದಾಗ ಆತ ವ್ಯಗ್ರನಾಗಿ ಬೆದರಿಕೆಯ ಭಾಷೆಯನ್ನು ಬಳಸಿದ ಎಂದು ತಿಳಿದು ಬಂದಿದೆ.
ವಿಮಾನವು ಹಾರಾಟಕ್ಕೆ ಅಣಿಯಾಗಿ ಬಾಗಿಲುಗಳನ್ನು ಮುಚ್ಚಿದಾಗ ಆರೋಪಿ ಪ್ರಯಾಣಿಕ ಸೌರಭ್ ರಾಯ್, ಇತರ ಪ್ರಯಾಣಿಕರನ್ನೂ ತನ್ನ ಕೆಟ್ಟ ಭಾಷೆಯಿಂದ ಪ್ರಚೋದಿಸಿ ವಿಮಾನಕ್ಕೆ ಹಾನಿ ಉಂಟುಮಾಡುವಂತೆ ಕರೆಕೊಟ್ಟ; ಮಾತ್ರವಲ್ಲದೆ ಹೈಜಾಕ್ ಮುಂತಾದ ಬೆದರಿಕೆಯ ಪದಗಳನ್ನು ಕೂಡ ಬಳಸಿದ.
ವಿಮಾನ ಹಾಗೂ ಪ್ರಯಾಣಿಕರ ಸುರಕ್ಷೆಯ ಶಿಷ್ಟಾಚಾರಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಪೈಲಟ್ ಇನ್ ಕಮಾಂಡ್ ಆರೋಪಿ ಪ್ರಯಾಣಿಕನನ್ನು ವಿಮಾನದಿಂದ ಹೊರ ಹಾಕಲು ನಿರ್ಧರಿಸಿದರು ಎಂದು ಇಂಡಿಗೋ ಪ್ರಕಟನೆ ತಿಳಿಸಿದೆ.