ಮುಂಬೈ: ತಾವು ಪ್ರಯಾಣಿಸಬೇಕಿದ್ದ ಇಂಡಿಗೋ ವಿಮಾನದಲ್ಲಿ ಸೊಳ್ಳೆಯ ಕಾಟವಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಬೆಂಗಳೂರು ಮೂಲದ ಹೃದ್ರೋಗ ತಜ್ಞರಾದ ಸೌರಭ್ ರೈ ಎಂಬುವರನ್ನು ವಿಮಾನದ ಸಿಬ್ಬಂದಿ ಬಲವಂತವಾಗಿ ವಿಮಾನ ನಿಲ್ದಾಣದಲ್ಲೇ ಕೆಳಗಿಳಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ರಾಷ್ಟ್ರಾದ್ಯಂತ ಸುದ್ದಿಯಾಗಿರುವ ಈ ಪ್ರಕರಣವೀಗ ನಾಗರಿಕ ವಿಮಾನಯಾನ ಸಚಿವಾಲಯವನ್ನೂ ತಲುಪಿದ್ದು, ಪ್ರಕರಣದ ತನಿಖೆಗೆ ಸಚಿವ ಸುರೇಶ್ ಪ್ರಭು ಆದೇಶಿಸಿದ್ದಾರೆ. ಸೋಮವಾರ, ರೈ ಅವರು ಲಕ್ನೋದಿಂದ ಬೆಂಗಳೂರಿಗೆ ಹೊರಟಿದ್ದರು. ವಿಮಾನದಲ್ಲಿ ಸೊಳ್ಳೆಗಳ ಕಾಟವಿದ್ದಿದ್ದನ್ನು ಅವರು ಸಿಬ್ಬಂದಿ ಗಮನಕ್ಕೆ ತಂದರು. ಆದರೆ, ಸಿಬ್ಬಂದಿ ಇದಕ್ಕೆ ಸ್ಪಂದಿಸಿಲ್ಲ. ರೈ ಪದೇ ಪದೆ ಮನವಿ ಮಾಡಿದ್ದರಿಂದ, ಬೇಸತ್ತ ಸಿಬ್ಬಂದಿಯೊಬ್ಬ ನೇರವಾಗಿ ಅವರ ಆಸನದ ಬಳಿ ಬಂದು ಅವರ ಕಾಲರ್ ಹಿಡಿದು ವಿಮಾನದಿಂದ ಕೆಳಗಿಳಿಸಿದರು. ಕಿರಿಕಿರಿ ಮಾಡಿದ್ದಕ್ಕೆ ಕ್ಷಮೆ ಕೋರಬೇಕೆಂದು ಪಟ್ಟುಹಿಡಿದರು. ಕ್ಷಮೆ ಕೋರದಿದ್ದರಿಂದ ಅವರನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ವಿಮಾನ ಟೇಕಾಫ್ ಆಯಿತು.
ಇಂಡಿಗೋ ಪ್ರತಿಕ್ರಿಯೆ: ರೈ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆ ನೀಡಿರುವ ಇಂಡಿಗೋ ಸಂಸ್ಥೆ, ರೈ ಮನವಿಗೆ ಸಿಬ್ಬಂದಿ ಸ್ಪಂದಿಸದಿದ್ದಾಗ, ವಿಮಾನ ಹೈಜಾಕ್ ಮಾಡುವ ಬೆದರಿಕೆ ಹಾಕಿದ್ದಾರೆ. ಭದ್ರತೆ ಹಿನ್ನೆಲೆಯಲ್ಲಿ ಕೆಳಗಿಳಿಸಲಾಗಿದೆ ಎಂದಿದೆ.
ಆರೋಪ ನಿರಾಕರಣೆ: ಇದಕ್ಕೆ ಪ್ರತ್ಯುತ್ತರ ನೀಡಿರುವ ರೈ, ತಾವು ಬೆದರಿಕೆ ಹಾಕಿದ್ದರೆ, ತಮ್ಮನ್ನು ಬೇರೊಂದು ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಲು ಏಕೆ ಅನುಮತಿ ನೀಡಲಾಯ್ತು ಹಾಗೂ ನನ್ನ ವಿರುದ್ಧ ಏಕೆ ಪೊಲೀಸರಿಗೆ ದೂರು ನೀಡಲಾಗಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ತಮ್ಮ ಘನತೆಗೆ ಚ್ಯುತಿ ತಂದಿದ್ದರಿಂದ ಪ್ರಕರಣವನ್ನು ಪ್ರಧಾನಿ ಕಚೇರಿ, ವಿಮಾನಯಾನ ಮಹಾ ನಿರ್ದೇಶಕರಿಗೆ (ಡಿಡಿಸಿಎ) ಗಮನಕ್ಕೆ ತರುವುದಾಗಿ ಹೇಳಿದ್ದಾರೆ.