ಕೆ.ಆರ್.ನಗರ: ಕನಕದಾಸರ ಜಯಂತಿಯನ್ನು ತಾಲೂಕು ಆಡಳಿತದ ಅಸಡ್ಡೆಯಿಂದ ಬಲವಂತದಿಂದ ಆಚರಿಸುವಂತಾಗಿದೆ ಎಂದು ಜಿಪಂ ಸದಸ್ಯ ಅಮಿತ್ ವಿ.ದೇವರಹಟ್ಟಿ ಹೇಳಿದರು. ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ನಡೆದ ಕನಕದಾಸರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಪ್ರತಿ ವರ್ಷ ಒತ್ತಡ ಹೇರಿ ಜಯಂತಿ ಆಚರಿಸುತ್ತಿರುವುದು ಕನಕದಾಸರಿಗೆ ಮಾಡುತ್ತಿರುವ ಅಪಮಾನ ಎಂದರು.
ನ.15ರಂದು ಜಯಂತಿ ನಡೆಸಬೇಕಿದ್ದು, ಕೇವಲ 2 ದಿನಗಳ ಮುನ್ನ ಸಭೆ ಕರೆದಿರುವುದಕ್ಕೆ ತಹಶೀಲ್ದಾರ್ ಎಂ.ಮಂಜುಳಾ ಅವರನ್ನು ತರಾಟೆಗೆ ತೆಗೆದುಕೊಂಡ ಅಮಿತ್, ಮುಂದಿನ ವರ್ಷದಿಂದ ಕನಿಷ್ಠ 10 ದಿನ ಮುಂಚಿತವಾಗಿ ಪೂರ್ವ ಸಿದ್ಧತಾ ಸಭೆ ನಡೆಸುವಂತೆ ತಾಕೀತು ಮಾಡಿದರಲ್ಲದೇ ಇದೇ ಪುನರಾವರ್ತನೆಯಾದರೆ ತಾಲೂಕು ಆಡಳಿತದ ವಿರುದ್ಧ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ.ಮಾಲೇಗೌಡ, ಪುರಸಭೆ ಸದಸ್ಯ ಕೋಳಿಪ್ರಕಾಶ್, ಎಐಸಿಸಿ ವಕ್ತಾರೆ ಐಶ್ವರ್ಯ, ಜಿಪಂ ಮಾಜಿ ಸದಸ್ಯ ಜಿ.ಆರ್.ರಾಮೇಗೌಡ ಮತ್ತಿತರರು ಮಾತನಾಡಿ, ಪೂರ್ವ ಸಿದ್ಧಾತಾ ಸಭೆ ಮತ್ತು ಜಯಂತಿ ಆಚರಣೆಗೆ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಎಲ್ಲಾ ಸಮಾಜದವರನ್ನು ಆಹ್ವಾನಿಸಬೇಕು ಎಂದು ಕೋರಿದರು.
ಕೇವಲ 2 ದಿನಗಳಿರುವಾಗ ಅದ್ಧೂರಿಯಾಗಿ ಆಚರಿಸಲು ಕಷ್ಟವಾಗುವುದರಿಂದ ಶುಕ್ರವಾರ ಬೆಳಗ್ಗೆ 11ಕ್ಕೆ ತಾಲೂಕು ಕಚೇರಿಯ ಸಭಾಂಗಣದಲ್ಲಿ ಶಾಸಕ ಸಾ.ರಾ.ಮಹೇಶ್ ಅಧ್ಯಕ್ಷತೆಯಲ್ಲಿ ಜಯಂತಿ ಆಚರಿಸುವಂತೆ ಸೂಚಿಸಿದ ಮುಖಂಡರು, 5 ಮಂದಿಗೆ ಕನಕಶ್ರೀ ಪ್ರಶಸ್ತಿ ನೀಡಬೇಕು ಮತ್ತು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಜರಿರುವಂತೆ ತಹಶೀಲ್ದಾರ್ ಆದೇಶ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ತಾಪಂ ಮಾಜಿ ಸದಸ್ಯ ನಾಗಣ್ಣ, ಎಪಿಎಂಸಿ ನಿರ್ದೇಶಕ ಬಿ.ಎಂ.ನಾಗರಾಜು, ಮಾಜಿ ನಿರ್ದೇಶಕ ರಾಜಶೇಖರ್, ಪುರಸಭೆ ಸದಸ್ಯ ನಟರಾಜು, ಕುರುಬರ ಸಂಘದ ನಿರ್ದೇಶಕರಾದ ಕೆ.ಎಂ.ಶ್ರೀನಿವಾಸ್, ಸಾಕರಾಜು, ರಾಮಕೃಷ್ಣೇಗೌಡ, ಎಂ.ಪಿ.ಶ್ರೀನಿವಾಸ್, ಬಿ.ಎಂ.ಗಿರೀಶ್, ಅಪ್ಪಾಜಿಗೌಡ, ಕೃಷ್ಣೇಗೌಡ, ಮುಖಂಡರಾದ ಆನಂದ್, ಕಾಂತರಾಜು, ಮಹದೇವ್ ಇತರರಿದ್ದರು.