ಇಂಡಿ: ತಾಲೂಕಿನ ಅಗರಖೇಡ ಗ್ರಾಪಂ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ 11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗ್ರಾಮದಲ್ಲಿ ಫೆ.25ರಂದು ನಡೆಸಲು ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ವಿಠ್ಠಲಗೌಡ ಪಾಟೀಲ ಮಾತನಾಡಿ, ಎಲ್ಲ ಸಮುದಾಯದ ಜನರು ಒಗ್ಗಟಾಗಿ ಕನ್ನಡದ ಹಬ್ಬವನ್ನು ಅದ್ದೂರಿಯಾಗಿ ಆಚರಿಸೋಣ. ಅಂದು ಪ್ರತಿ ಮನೆ-ಮನೆಗಳಲ್ಲಿ ತಳೀರು ತೋರಣಗಳಿಂದ ಶೃಂಗರಿಸಿ ಮನೆ ಮುಂಭಾಗದಲ್ಲಿ ರಂಗೋಲಿ ಹಾಕಬೇಕೆಂದು ಸಲಹೆ ನೀಡಿದರು.
ಸಾಹಿತ್ಯ ಜಾತ್ರೆ ಅಚ್ಚುಕಟ್ಟಾಗಿ ನಡೆಯಬೇಕಾದರೆ ಪ್ರತಿಯೊಬ್ಬರು ಒಂದೊಂದು ಜವಾಬ್ದಾರಿ ಹಂಚಿಕೆ ಮಾಡಿಕೊಳ್ಳಬೇಕು ಎಂದ ಅವರು, ಆಹಾರ ಸಮಿತಿ, ಹಣಕಾಸಿನ ಸಮಿತಿ, ಮಂಟಪ, ಮೆರವಣಿಗೆ ಸಮಿತಿ ಹೀಗೆ ವಿವಿಧ ಸಮಿತಿಗಳನ್ನು ರಚಿಸಿ ಇಂದಿನಿಂದಲೇ ಕೆಲಸ ಕಾರ್ಯಗಳು ಆರಂಭವಾಗಲಿ ಎಂದರು.
ಕಸಾಪ ಅಧ್ಯಕ್ಷ ಕಾಂತು ಇಂಡಿ ಮಾತನಾಡಿ, ಸಾಹಿತ್ಯ ಸಮ್ಮೇಳನ ಕನ್ನಡದ ಮನಸುಗಳು ಒಂದಾಗಿಸುವ ಸಂಸ್ಥೆಯಾಗಿದೆ. ಜಾತ್ಯತೀತ, ಪಕ್ಷಾತೀತ ಸಮ್ಮೇಳನವನ್ನಾಗಿ ಮಾಡಲು ಗ್ರಾಮದ ಹಾಗೂ ತಾಲೂಕಿನ ಸಹೃದಯ ಜನರು ತನುಮನ ಧನದಿಂದ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.
ಮಹಾ ಮಂಟಪ್ಪಕ್ಕೆ ಶಂಕರಲಿಂಗ ನಾಮಕರಣ ಮಾಡಲು, ಪ್ರಧಾನ ವೇದಿಕೆ ಶ್ರೀರಂಗರ, ದಾಸೋಹ ಮನೆಗೆ ಸಿದ್ಧಾರೂಢರ, ಮಹಾದ್ವಾರಗಳಿಗೆ ಗಂಗಲಿಂಗ ಮಹಾರಾಜರ, ಬೈರಸಿದ್ದ, ಚನ್ನಕವಿ ಮಧುರಚೆನ್ನ, ಸಿಂಪಿ ಲಿಂಗಣ್ಣ, ತಾಲೂಕಿನ ಪ್ರಮುಖ ದಾರ್ಶನಿಕರ, ಶರಣರ, ಸಂತರ ಹೆಸರುಗಳನ್ನು ಸ್ಮರಿಸುವಂತೆ ಸಾಹಿತ್ಯ ಸಮ್ಮೇಳನ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಕಾರ್ಯದರ್ಶಿ ಜಿ.ಜಿ ಬರಡೋಲ, ಸಿದ್ದು ಡಂಗಾ, ನಿಜಣ್ಣಾ ಕಾಳೆ, ಪ್ರಶಾಂತ ಬಿರಾದಾರ, ಪ್ರಭು ಹೊಸಮನಿ, ಮಲ್ಲು ಮಡ್ಡಿಮನಿ, ರಾಜು ಕುಲಕರ್ಣಿ ಸೇರಿದಂತೆ ಗ್ರಾಪಂ ಸದಸ್ಯರು, ಮುಖಂಡರು ಇದ್ದರು.