ಮಂಗಳೂರು: ಭಾರತ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ನಮ್ಮ ಮತದಾನ ವ್ಯವಸ್ಥೆಯನ್ನು ಇತರ ರಾಷ್ಟ್ರಗಳೂ ಅನುಸರಿಸುತ್ತಿವೆ. ಮತದಾನ ಮತ್ತು ಅದಕ್ಕೆ ಸಂಬಂಧಿಸಿದ ಪೂರಕ ವ್ಯವಸ್ಥೆಯನ್ನು ಬಹಳಷ್ಟು ಸರಳಗೊಳಿಸಲಾಗಿದ್ದು, ಚುನಾವಣೆಗೂ ನಮಗೂ ಸಂಬಂಧವಿಲ್ಲ ಎನ್ನುವ ಭಾವನೆಯಿಂದ ಜನರು ಹೊರಬರಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಡಾ| ಆನಂದ್ ಕೆ. ಹೇಳಿದರು.
ದ.ಕ. ಜಿಲ್ಲಾ ಸ್ವೀಪ್ ಸಮಿತಿ, ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಹಾಗೂ ಮಂಗಳೂರಿನ ಕೆನರಾ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳಿಗೆ ಕೆನರಾ ಕಾಲೇಜಿನಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ನಗರದ ಜನರಲ್ಲಿ ನಿರ್ಲಕ್ಷ್ಯ ಗ್ರಾಮೀಣ ಜನರಲ್ಲಿ ಮತದಾನ ಕುರಿತಂತೆ ಜಾಗೃತಿ ಮೂಡಿದೆ. ಆದರೆ ನಗರ ಪ್ರದೇಶದ ಜನರಲ್ಲಿ ಯಾಕೆ ಮತದಾನ ಮಾಡಬೇಕು ಎನ್ನುವ ಭಾವನೆ ಇದೆ. ಮತದಾನ ಪ್ರತಿಯೊಬ್ಬರ ಹಕ್ಕು. ಅದನ್ನು ಪ್ರತಿಯೊಬ್ಬರೂ ಚಲಾಯಿಸಲೇಬೇಕು. ವಿದ್ಯಾರ್ಥಿಗಳು ತಮ್ಮ ಮನೆ, ಪರಿಸರದ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ಹಿಂದುಳಿ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ, ಜಿಲ್ಲಾ ಸ್ವೀಪ್ ಸಮಿತಿ ನೋಡೆಲ್ ಅಧಿಕಾರಿ ಸಚಿನ್ ಕುಮಾರ್ ಮಾತನಾಡಿ, ಮತದಾನ ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಹೃದಯವಿದ್ದಂತೆ. ಮತದಾನ ಕುಂಠಿತ ಆದರೆ ಪ್ರಜಾಪ್ರಭತ್ವ ಸಾಯುತ್ತದೆ. ಆದ್ದರಿಂದ 18 ವರ್ಷ ಮೇಲ್ಪಟ್ಟವರು ಮತದಾನ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಉಪನಿರ್ದೇಶಕ ಸಿ.ಡಿ. ಜಯಣ್ಣ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಸಂಚಾಲಕ ಗೋಪಾಕಕೃಷ್ಣ ಶೆಣೈ, ದ.ಕ. ಜಿಲ್ಲಾ ಪ.ಪೂ. ಕಾಲೇಜು ಪ್ರಾಚಾರ್ಯರ ಸಂಘದ ಅಧ್ಯಕ್ಷ ಜಯಾನಂದ ಸುವರ್ಣ, ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಸ್ವೀಪ್ ಸಮಿತಿ ಇಲಾಖಾ ನೋಡೆಲ್ ಅಧಿಕಾರಿ ಚಂದ್ರನಾಥ್ ಎಂ. ಪ್ರಸ್ತಾವನೆಗೈದರು. ಕೆನರಾ ಪ.ಪೂ. ಕಾಲೇಜು ಪ್ರಾಂಶುಪಾಲೆ ಲತಾ ಮಹೇಶ್ವರಿ ಸ್ವಾಗತಿಸಿ, ಉಪನ್ಯಾಸಕಿ ಕಿರಣ ಕುಮಾರಿ ವಂದಿಸಿದರು. ಉಪನ್ಯಾಸಕ ರಘು
ಎಡ್ಕಿದು ನಿರ್ವಹಿಸಿದರು.
ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ ಪ್ರಬಂಧ ಸ್ಪರ್ಧೆ, ಪೋಸ್ಟರ್ ರಚನೆ ಮತ್ತು ರಸಪ್ರಶ್ನೆ ಸ್ಪರ್ಧೆಗಳು ನಡೆದವು. ತಾಲೂಕು ಮಟ್ಟದ ಪ್ರಥಮ ಸ್ಥಾನ ಪಡೆದವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರು. ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ.