Advertisement

19ನೇ ಟೆಸ್ಟ್‌ನತ್ತ ಭಾರತದ ಅಜೇಯ ಓಟ

03:45 AM Feb 08, 2017 | Team Udayavani |

ಹೈದರಾಬಾದ್‌: ಇತ್ತೀಚೆಗಷ್ಟೇ ಪ್ರವಾಸಿ ಇಂಗ್ಲೆಂಡಿಗೆ ಎಲ್ಲ ಮೂರು ಪ್ರಕಾರಗಳ ಕ್ರಿಕೆಟ್‌ನಲ್ಲೂ ಸರಣಿ ಸೋಲುಣಿಸಿದ ಭಾರತ, ಗುರುವಾರದಿಂದ ಹೈದರಾಬಾದ್‌ನಲ್ಲಿ ಆರಂಭ ವಾಗಲಿರುವ ಏಕೈಕ ಟೆಸ್ಟ್‌ ಪಂದ್ಯದಲ್ಲೂ ತನ್ನ ಪಾರಮ್ಯ ಸಾಧಿಸಲು ಮುಂದಾಗಲಿದೆ. 

Advertisement

ಸಾಮಾನ್ಯ ತಂಡವಾಗಿರುವ ಬಾಂಗ್ಲಾ ದೇಶವನ್ನು ಯಾವ ರೀತಿಯಲ್ಲೂ ಕಡೆಗಣಿಸ ಬಾರದೆಂಬುದು  ನಿಜವಾದರೂ  ಟೀಮ್‌ ಇಂಡಿಯಾದ ತಾಕತ್ತಿನ ಮುಂದೆ ಈ ಮಾತಿಗೆ ಅಷ್ಟೊಂದು ಬೆಲೆ ಸಿಗಲಿಕ್ಕಿಲ್ಲ ಎಂದೇ ಭಾವಿಸಲಾಗಿದೆ. ಹೀಗಾಗಿ ಟೀಮ್‌ ಇಂಡಿಯಾ ತನ್ನ ಅಜೇಯ ಟೆಸ್ಟ್‌ ಓಟವನ್ನು 19 ಪಂದ್ಯಗಳಿಗೆ ವಿಸ್ತರಿಸುವುದರಲ್ಲಿ ಅನುಮಾನವಿಲ್ಲ. ಆಗ ಇದೊಂದು ನೂತನ ದಾಖಲೆಯಾಗಲಿದೆ.

ಕಳೆದ 18 ತಿಂಗಳ ಅವಧಿಯಲ್ಲಿ ಶ್ರೀಲಂಕಾ, ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಡೀಸ್‌, ನ್ಯೂಜಿ ಲ್ಯಾಂಡ್‌ ಮತ್ತು ಇಂಗ್ಲೆಂಡ್‌ ವಿರುದ್ಧ ಸರಣಿ ಗೆದ್ದಿರುವ ಭಾರತ, ಸತತ 18 ಟೆಸ್‌ಗಳಲ್ಲಿ ಸೋಲಿನ ಮುಖವನ್ನೇ ಕಂಡಿಲ್ಲ. 2015ರ ಶ್ರೀಲಂಕಾ ಪ್ರವಾಸದ ವೇಳೆ ಗಾಲೆಯಲ್ಲಿ ಸೋತ ಬಳಿಕ ಭಾರತವನ್ನು ಮಣಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಆದರೆ ಗಾಲೆ ಸೋಲಿನ ಹೊರತಾಗಿಯೂ ಭಾರತ 2-1 ಅಂತರದಿಂದ ಸರಣಿ ಗೆದ್ದು ಪರಾಕ್ರಮ ಮೆರೆಯಿತು. 

ಭಾರತ ಟೆಸ್ಟ್‌ ಕ್ರಿಕೆಟಿನ ನಂ.1 ತಂಡ. ಬಾಂಗ್ಲಾ ದೇಶ 9ನೇ ಸ್ಥಾನದಲ್ಲಿದೆ. ಅಂಗಳಕ್ಕಿಳಿದ ಬಳಿಕ ರ್‍ಯಾಂಕಿಂಗ್‌ ಅಂತರ ನಗಣ್ಯವಾದರೂ ಕೊಹ್ಲಿ ಪಡೆಯನ್ನು ಕಟ್ಟಿಹಾಕುವುದು ಮಾತ್ರ ಬಾಂಗ್ಲಾಕ್ಕೆ ಭಾರೀ ಸವಾಲಾಗಿ ಪರಿಣಮಿಸುವುದು ಖಚಿತ. ಒಂದು ರೀತಿಯಲ್ಲಿ ಹೇಳುವುದಾದರೆ, ಈ ಏಕೈಕ ಟೆಸ್ಟ್‌ ಪಂದ್ಯ ಮುಂಬರುವ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ ಸರಣಿಗಾಗಿ ಭಾರತಕ್ಕೊಂದು ಅಭ್ಯಾಸ!

ಐತಿಹಾಸಿಕ ಪಂದ್ಯವೇನಲ್ಲ: ರಹೀಂ
ಬಾಂಗ್ಲಾದೇಶ ತಂಡ ಭಾರತದಲ್ಲಿ ಮೊದಲ ಸಲ ಟೆಸ್ಟ್‌ ಆಡಲಿಳಿಯುವ ಕ್ಷಣಗಣನೆಯಲ್ಲಿದೆ. ಅಂದಮಾತ್ರಕ್ಕೆ ಇದೇನೂ ಐತಿಹಾಸಿಕ ಪಂದ್ಯವೆಂದು ತನಗೆ ಅನಿಸುತ್ತಿಲ್ಲ ಎಂದಿದ್ದಾರೆ ಬಾಂಗ್ಲಾ ನಾಯಕ ಮುಶ್ಫಿಕರ್‌ ರಹೀಂ.

Advertisement

“ಇದೇನೂ ಐತಿಹಾಸಿಕ ಟೆಸ್ಟ್‌ ಎಂದು ಅನಿಸುವುದಿಲ್ಲ. ನನ್ನ ಮಟ್ಟಿಗೆ ಹೇಳುವುದಾರದೆ ಇದು ಕೇವಲ ಇನ್ನೊಂದು ಟೆಸ್ಟ್‌, ಅಷ್ಟೇ…’ ಎಂದು ರಹೀಂ ಹೇಳಿದರು. ಹಾಗೆಯೇ ಟೆಸ್ಟ್‌ ಮಾನ್ಯತೆ ಪಡೆದು 17 ವರ್ಷಗಳಷ್ಟು ಬಳಿಕ ಭಾರತದಲ್ಲಿ ಮೊದಲ ಸಲ ಟೆಸ್ಟ್‌ ಆಡುತ್ತಿರುವುದೂ ದೊಡ್ಡ ವಿಷಯವಲ್ಲ ಎಂಬ ರೀತಿಯಲ್ಲಿ ಪ್ರತಿಕ್ರಿಯಿಸಿದರು. 

“ಇದು ಭಾರತದಲ್ಲಿ ನಾವು ಆಡುತ್ತಿರುವ ಮೊದಲ ಟೆಸ್ಟ್‌. ಇಲ್ಲಿ, ನಮಗೆ ಟೆಸ್ಟ್‌ ಮಾನ್ಯತೆ ಲಭಿಸಿ ಎಷ್ಟು ವರ್ಷಗಳಾದವು ಎಂಬುದು ಮುಖ್ಯವಲ್ಲ. ಈ ಕುರಿತೂ ನಾವು ಚಿಂತಿಸುತ್ತಿಲ್ಲ…’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next