ಹೊಸದಿಲ್ಲಿ: ಎಂಟು ವರ್ಷಗಳ ಬಳಿಕ, ಅಂದರೆ 2028ರ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಟಾಪ್-10 ಸ್ಥಾನ ಅಲಂಕರಿಸುವುದು ಭಾರತದ ಯೋಜನೆಯಾಗಿದ್ದು, ಇದಕ್ಕೆ ಈಗಿನಿಂದಲೇ ಸಿದ್ಧತೆ ಆರಂಭಗೊಳ್ಳಬೇಕಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಟಿಟಿ ಆಟಗಾರ್ತಿ ಮಣಿಕಾ ಬಾತ್ರಾ ಜತೆಗಿನ ಇನ್‌ಸ್ಟಾಗ್ರಾಮ್ ಲೈವ್ ಕಾರ್ಯಕ್ರಮದಲ್ಲಿ ಅವರು ಮಾತಾಡುತ್ತಿದ್ದರು.”2024ರ ಒಲಿಂಪಿಕ್ಸ್ ಎನ್ನುವುದು ಭಾರತದ ಪಾಲಿಗೆ ಕೇವಲ ಮಧ್ಯಂತರ ಅವಧಿಯ ಗುರಿ. ಈ ಪ್ಯಾರಿಸ್ ಕೂಟದಲ್ಲಿ ಭಾರತ ಗರಿಷ್ಠ ಪದಕಗಳನ್ನು ಗೆಲ್ಲುವ ಯೋಜನೆ ಹೊಂದಿರುತ್ತದೆ. ಆದರೆ 2028ರಲ್ಲಿ ಇದು ದೀರ್ಘ ಕಾಲದ ಗುರಿ ಆಗಿರುತ್ತದೆ. ಇದಕ್ಕೆ ಈಗಿನಿಂದಲೇ ಸಿದ್ಧತೆ ಆರಂಭಗೊಳ್ಳಬೇಕಿದೆ’ ಎಂದು ಸಚಿವರು ಹೇಳಿದರು.
“ಇಂದಿನ ಕಿರಿಯ ಕ್ರೀಡಾಪಟುಗಳೇ ನಮ್ಮ ಮುಂದಿನ ಚಾಂಪಿಯನ್ಸ್. ಇದಕ್ಕೆ ದೊಡ್ಡ ಮಟ್ಟದಲ್ಲೇ ತಯಾರಿ ನಡೆಯಬೇಕಿದೆ. 2024ರ ಒಲಿಂಪಿಕ್ಸ್ ಫಲಿತಾಂಶ ಇದಕ್ಕೊಂದು ದಿಕ್ಸೂಚಿ ಆಗಲಿದೆ. ನನ್ನ ಮಾತನ್ನು ಬರೆದಿಡಿ, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಭಾರತ ಖಂಡಿತ ಅಗ್ರ 10 ಸ್ಥಾನಿಯಾಗಿ ಮೂಡಿಬರಲಿದೆ’ ಎಂದು ರಿಜಿಜು ಭರವಸೆಯಿಂದ ನುಡಿದರು.
“ವಿಶ್ವ ಚಾಂಪಿಯನ್ ಒಬ್ಬರನ್ನು ರೂಪಿಸಲು ನಾಲ್ಕರಿಂದ ಎಂಟು ವರ್ಷ ತಗಲುತ್ತದೆ. ಇದಕ್ಕೆ ಈಗಿನಿಂದಲೇ ಬುನಾದಿ ಹಾಕಬೇಕಿದೆ. ವೃತ್ತಿಪರ ಮಟ್ಟದಲ್ಲಿ ಜೂನಿಯರ್ ಕೋಚಿಂಗ್ ಆರಂಭಿಸಿದರೆ ಧನಾತ್ಮಕ ಪರಿಣಾಮವನ್ನು ಕಾಣಲು ಖಂಡಿತ ಸಾಧ್ಯವಿದೆ’ ಎಂದು ಕಿರಣ್ ರಿಜಿಜು ಹೇಳಿದರು.