ಕೋಲ್ಕತಾ: ಭಾರತದ ಸ್ಟಾರ್ ಫುಟ್ಬಾಲಿಗ, ಒಲಿಂಪಿಕ್ಸ್‌ನಲ್ಲಿ ತಂಡವನ್ನು ಮುನ್ನಡೆಸಿದ ಸಮರ್ “ಬದ್ರೂ’ ಬ್ಯಾನರ್ಜಿ ಇನ್ನಿಲ್ಲ.92 ವರ್ಷದ ಅವರು ಶನಿವಾರ ನಿಧನ ಹೊಂದಿದರು.
ವೃದ್ದಾಪ್ಯದ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು “ಎಂ.ಆರ್. ಬಂಗುರ್ ಹಾಸ್ಪಿಟಲ್’ಗೆ ದಾಖಲಿಸಲಾಗಿತ್ತು. ಜುಲೈಯಲ್ಲಿ ಕೋವಿಡ್ ಪಾಸಿಟಿವ್ ಕೂಡ ಅಂಟಿಕೊಂಡಿತು.
“ಆರೋಗ್ಯ ಸುಧಾರಿಸದ ಹಿನ್ನೆಲೆಯಲ್ಲಿ ಸಮರ್ ಬ್ಯಾನರ್ಜಿ ಅವರನ್ನು ಎಸ್‌ಎಸ್‌ಕೆಎಂ ಹಾಸ್ಪಿಟಲ್‌ಗೆ ವರ್ಗಾಯಿಸಲಾಗಿತ್ತು. ರಾಜ್ಯ ಕ್ರೀಡಾ ಸಚಿವ ಅರುಪ್ ಬಿಸ್ವಾಸ್ ವಿಶೇಷ ಮುತುವರ್ಜಿ ವಹಿಸಿದ್ದರು. ನಮ್ಮೆಲ್ಲರ ನೆಚ್ಚಿನ “ಬದ್ರೂ ದಾ’ ಶನಿವಾರ ಬೆಳಗ್ಗೆ 2.10ರ ವೇಳೆಗೆ ಕೊನೆಯುಸಿರೆಳೆದರು’ ಎಂಬುದಾಗಿ ಮೋಹನ್ ಬಗಾನ್ ಕಾರ್ಯದರ್ಶಿ ದೇಬಶಿಷ್ ದತ್ತ ತಿಳಿಸಿದರು.
ಒಲಿಂಪಿಕ್ಸ್ ಹೀರೋ
1956ರ ಮೆಲ್ಬರ್ನ್ ಒಲಿಂಪಿಕ್ಸ್‌ನಲ್ಲಿ ಭಾರತದ ಫುಟ್‌ಬಾಲ್ ತಂಡವನ್ನು ಸೆಮಿಫೈನಲ್ ತನಕ ಮುನ್ನಡೆಸಿದ ಹಿರಿಮೆ ಸಮರ್ ಬ್ಯಾನರ್ಜಿ ಅವರದಾಗಿತ್ತು. ಅಂದು ಭಾರತಕ್ಕೆ ಕಂಚಿನ ಪದಕ ಸ್ವಲ್ಪದರಲ್ಲೇ ಕೈತಪ್ಪಿತ್ತು. ಬಲ್ಗೇರಿಯಾಕ್ಕೆ 0-3 ಗೋಲುಗಳಿಂದ ಶರಣಾಗಿ 4ನೇ ಸ್ಥಾನಿಯಾಯಿತು.
ಅಂದು ಸಯ್ಯದ್ ಅಬ್ದುಲ್ಲ ರಹೀಂ ಭಾರತ ತಂಡದ ಕೋಚ್ ಆಗಿದ್ದರು. ಪಿ.ಕೆ. ಬ್ಯಾನರ್ಜಿ, ನೆವೆಲ್ಲೆ ಡಿ’ಸೋಜ, ಜೆ. “ಕಿಟ್ಟು’ ಕೃಷ್ಣಸ್ವಾಮಿ ಅವರೆಲ್ಲ ಭಾರತದ ತಂಡದ ಪ್ರಮುಖರಾಗಿದ್ದರು.ಆ ತಿಥೇಯ ಆಸ್ಟ್ರೇಲಿಯವನ್ನು 4-2 ಗೋಲುಗಳಿಂದ ಬಗ್ಗುಬಡಿದದ್ದು ಭಾರತದ ಪರಾಕ್ರಮಕ್ಕೆ ಸಾಕ್ಷಿಯಾಗಿತ್ತು. ಡಿ’ಸೋಜ ಅವರ ಅಮೋಘ ಹ್ಯಾಟ್ರಿಕ್ ಈ ಪಂದ್ಯದ ಆಕರ್ಷಣೆ ಆಗಿತ್ತು. ಸೆಮಿಫೈನಲ್‌ನಲ್ಲಿ ಯುಗೋಸ್ಲಾವಿಯಾ 4-2 ಅಂತರದಿಂದ ಭಾರತವನ್ನು ಮಣಿಸಿತ್ತು.