Advertisement

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಬಲಾಡ್ಯ: ಎ.ಎಸ್‌.ಕಿರಣಕುಮಾರ

11:55 AM May 01, 2019 | Suhan S |

ಬೆಳಗಾವಿ: ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕ, ರಷ್ಯಾ, ಚೀನಾ ಮುಂತಾದ ರಾಷ್ಟ್ರಗಳೊಂದಿಗೆ ಭಾರತ ಪೈಪೋಟಿ ನೀಡುತ್ತಿದ್ದು, ತಾಂತ್ರಿಕ ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಾಜಿ ಅಧ್ಯಕ್ಷ ಎ.ಎಸ್‌. ಕಿರಣಕುಮಾರ ಸಲಹೆ ನೀಡಿದರು.

Advertisement

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 21ನೇ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಜ್ಞಾನ ಸಂಗಮ ಆವರಣದ ಸಭಾಭವನದಲ್ಲಿ ಮಂಗಳವಾರ ವಿಶೇಷ ಉಪನ್ಯಾಸ ನೀಡಿದ ಅವರು, ಇಸ್ರೋ ವತಿಯಿಂದ ಉಡಾವಣೆಗೊಳಿಸಿದ ಸಂವಹನ ಉಪಗ್ರಹ ಹಾಗೂ ಭೂ-ಪರಿವೀಕ್ಷಣ ಉಪಗ್ರಹಗಳು ವೈದ್ಯಕೀಯ, ಶಿಕ್ಷಣ, ಪರಿಸರ, ಭೂಮಿ ಹಾಗೂ ಜಲ ಸಂರಕ್ಷಣೆ ಕ್ಷೇತ್ರಗಳಿಗೆ ಸಾಕಷ್ಟು ಕೊಡುಗೆ ನೀಡಿವೆ. ಹೀಗಾಗಿ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಮಾಹಿತಿ ಸಂಗ್ರಹಿಸಲು ಸ್ಥಳೀಯ ಆಡಳಿತ ಸಂಸ್ಥೆಗಳು ಇವುಗಳ ಲಾಭ ಪಡೆಯುವಂತಾಗಬೇಕು ಎಂದರು.

ಸಮುದ್ರಯಾನ ಉಪಗ್ರಹ ಹಾಗೂ ಗಗನ ಉಪಗ್ರಹಗಳು ಅತ್ಯಂತ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸುವಲ್ಲಿ ಸಹಕಾರಿಯಾಗಿವೆ. ನೈಸರ್ಗಿಕ ವಿಪತ್ತು ನಿರ್ವಹಣೆಯಲ್ಲಿ ಸಮುದ್ರ ಯಾತ್ರಿಕರಿಗೆ ಹಾಗೂ ಗಗನ ಯಾತ್ರಿಕರಿಗೆ ಉಪಯುಕ್ತವಾದ ಮಾಹಿತಿ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಗಗನ ಉಪಗ್ರಹದಿಂದ ಜಿಪಿಎಸ್‌ ಮೂಲಕ ನಿರ್ದಿಷ್ಟ ಸ್ಥಳ ಹಾಗೂ ವಸ್ತುಗಳ ಮಾಹಿತಿಯನ್ನು ನಿಖರವಾಗಿ ಪಡೆಯಬಹುದಾಗಿದೆ ಎಂದು ಹೇಳಿದರು.

ಇಸ್ರೋ ವತಿಯಿಂದ ಚಂದ್ರ ಗ್ರಹದ ಬಗ್ಗೆ ಮಾಹಿತಿ ಸಂಗ್ರಹಿಸಲು ಚಂದ್ರಯಾನ-1 ಪ್ರೊಜೆಕ್ಟ್ ಪ್ರಥಮ ಬಾರಿಗೆ ಅತ್ಯಂತ ಯಶಸ್ವಿಯಾಗಿ ನಡೆಸಲಾಗಿದೆ. ಹಲವಾರು ಅಡೆತಡೆಗಳನ್ನು ಹೊರತುಪಡಿಸಿ ಮಂಗಳಯಾನ ಕಾರ್ಯಕ್ರಮವನ್ನು ಮೊದಲ ಪ್ರಯತ್ನದಲ್ಲಿ ಯಶಸ್ವಿಯಾಗಿ ಪೊರೈಸಿದ ಶ್ರೇಯಸ್ಸು ಇಸ್ರೋ ಸಂಸ್ಥೆಗೆ ಸಲ್ಲುತ್ತದೆ. ಮಂಗಳ ಗ್ರಹದ ಕಕ್ಷೆಗೆ ಸೇರಿದ ಕೆಲವೇ ನಿಮಿಷಗಳಲ್ಲಿ ಉಪಗ್ರಹ ಕಾರ್ಯಾರಾಂಭ ಮಾಡಿರುವುದು ವಿಶೇಷವಾಗಿದೆ ಎಂದರು.

ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಭಾರತ ರತ್ನ ಸರ್‌| ಎಂ. ವಿಶ್ವೇಶ್ವರಯ್ಯನವರ ಕೊಡುಗೆಗಳನ್ನು ಸ್ಮರಿಸಿದರು. ಭಾರತ ದೇಶದ ಅಭಿವೃದ್ಧಿ ಪಥದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅತ್ಯಂತ ಮಹತ್ವದ ಪಾತ್ರವಹಿಸಿದೆ. ಸಮಗ್ರ ಅಭಿವೃದ್ಧಿಗಾಗಿ ಬೇಕಾಗುವ ಎಲ್ಲ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ. ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ ಮುಂಚೂಣಿಯಲ್ಲಿದೆ. ಗ್ರಾಮೀಣ ಪ್ರದೇಶದ ಅವಶ್ಯಕತೆಗಳನ್ನು ಪೂರೈಸುವಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಅತ್ಯಂತ ಸಮರ್ಥವಾಗಿದೆ ಎಂದು ನುಡಿದರು.

Advertisement

ವಿತಾವಿ ಇಂಟರ್‌ ನ್ಯಾಷನಲ್ ಜರ್ನಲ್ ಆಫ್‌ ಇಂಜಿನಿಯರಿಂಗ್‌ ಸಾಯನ್ಸ್‌ ಆಂಡ್‌ ಮ್ಯಾನೆಜಮೆಂಟ್ ಲೋಕಾರ್ಪಣೆ ಮಾಡಿದರು. ವಿತಾವಿ ಕಾರ್ಯಕಾರಿ ಮಂಡಳಿ ಹಾಗೂ ವಿದ್ಯಾ ವಿಧಾನ ಮಂಡಳಿ ಸದಸ್ಯರು, ವಿತಾವಿ ಸಂಯೋಜಿತ ಹಾಗೂ ಸ್ವಾಯತ್ತ ತಾಂತ್ರಿಕ ಮಹಾವಿದ್ಯಾಲಯಗಳ ಆಡಳಿತ ಮಂಡಳಿ ಸದಸ್ಯರು, ಎಲ್ಲ ಪಾಂಶುಪಾಲರು ಹಾಗೂ ನಿರ್ದೇಶಕರು, ಪ್ರಾಧ್ಯಾಪಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next