Advertisement

ನಿರ್ಗಮಿಸುವ ಸದಸ್ಯರಿಂದ ಭಾರತ ತಂಡದ ಆಯ್ಕೆ?

07:27 PM Sep 05, 2020 | mahesh |

ಹೊಸದಿಲ್ಲಿ: ಭಾರತೀಯ ಕ್ರಿಕೆಟ್‌ ಆಯ್ಕೆ ಸಮಿತಿಯ ಮೂವರು ಸದಸ್ಯರ ಅವಧಿ ಸೆ. 30ಕ್ಕೆ ಮುಗಿಯಲಿದ್ದು, ಇವರು ವರ್ಷಾಂತ್ಯದ ಆಸ್ಟ್ರೇಲಿಯ ಪ್ರವಾಸಕ್ಕಾಗಿ ತಂಡವನ್ನು ಪ್ರಕಟಿಸುವ ತನಕ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲವೊಂದು ಹೇಳಿದೆ.

Advertisement

ನಿರ್ಗಮಿಸುವ ಮೂವರೆಂದರೆ ದೇವಾಂಗ್‌ ಗಾಂಧಿ, ಜತಿನ್‌ ಪರಾಂಜಪೆ ಮತ್ತು ಶರಣ್‌ದೀಪ್‌ ಸಿಂಗ್‌. ಇವರ 4 ವರ್ಷಗಳ ಅವಧಿ (ಮೂರು ಪ್ಲಸ್‌ ಒಂದು ವರ್ಷ) ಈ ತಿಂಗಳ ಅಂತ್ಯಕ್ಕೆ ಮುಗಿಯಲಿದ್ದು, ನೂತನ ಸದಸ್ಯರ ನೇಮಕ ಆಗಬೇಕಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಕ್ರಿಕೆಟ್‌ ಸಲಹಾ ಸಮಿತಿಗೆ (ಸಿಎಸಿ) ಬಿಸಿಸಿಐ ಈವರೆಗೆ ಯಾವುದೇ ಸೂಚನೆ ನೀಡಿಲ್ಲ. ನೂತನ ಆಯ್ಕೆಗಾರರ ಸಂದರ್ಶನ ನಡೆಸಿ ಇವರನ್ನು ನೇಮಿಸುವುದು ಸಿಎಸಿ ಜವಾಬ್ದಾರಿಯಾಗಿದೆ.

ಬಿಸಿಸಿಐ ಮೂಲದ ಪ್ರಕಾರ ಸುನೀಲ್‌ ಜೋಶಿ ನೇತೃತ್ವದ ಆಯ್ಕೆ ಸಮಿತಿಗೆ ಗಾಂಧಿ, ಪರಾಂಜಪೆ ಮತ್ತು ಶರಣ್‌ದೀಪ್‌ ಸಹಕಾರ ನೀಡಲಿದ್ದಾರೆ. ಹರ್ವಿಂದರ್‌ ಸಿಂಗ್‌ ಆಯ್ಕೆ ಸಮಿತಿಯ ಮತ್ತೋರ್ವ ಸದಸ್ಯ. ಎಂಎಸ್‌ಕೆ ಪ್ರಸಾದ್‌ ಮತ್ತು ಗಗನ್‌ ಖೋಡಾ ಅವರ ಉತ್ತರಾಧಿಕಾರಿಯಾದ ಜೋಶಿ ಮತ್ತು ಹರ್ವಿಂದರ್‌ ಅವರನ್ನು 2019ರ ಸೆಪ್ಟಂಬರ್‌ ಬದಲು ಕಳೆದ ಮಾರ್ಚ್‌ನಲ್ಲಿ ನೇಮಿಸಲಾಗಿತ್ತು. ಹೀಗಾಗಿ ನೂತನ ಸದಸ್ಯರ ನೇಮಕ ಕೂಡ ವಿಳಂಬಗೊಳ್ಳುವುದು ಬಹುತೇಕ ಖಚಿತ.

ಜಂಬೋ ತಂಡದ ನಿರೀಕ್ಷೆ
ಕೋವಿಡ್‌ ಕಾರಣದಿಂದ ಆಸ್ಟ್ರೇಲಿಯ ಪ್ರವಾಸಕ್ಕೆ 23ರಿಂದ 25 ಆಟಗಾರರ ಜಂಬೋ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಕಳೆದ ಇಂಗ್ಲೆಂಡ್‌ ಪ್ರವಾಸದ ವೇಳೆ ವೆಸ್ಟ್‌ ಇಂಡೀಸ್‌ ಮತ್ತು ಪಾಕಿಸ್ಥಾನ ತಂಡಗಳಲ್ಲೂ ಹೆಚ್ಚುವರಿ ಆಟಗಾರರಿದ್ದರು. ಇದೇ ವೇಳೆ ಭಾರತ “ಎ’ ತಂಡವೂ ಆಸ್ಟ್ರೇಲಿಯ ಪ್ರವಾಸಕ್ಕೆ ತೆರಳಿದರೆ ಹೊರಗಿನ ನೆಟ್‌ ಬೌಲರ್‌ಗಳನ್ನು ಕರೆಸಿಕೊಳ್ಳುವ ಅಗತ್ಯವಿಲ್ಲ ಎಂಬುದು ಬಿಸಿಸಿಐ ಲೆಕ್ಕಾಚಾರ.

Advertisement

Udayavani is now on Telegram. Click here to join our channel and stay updated with the latest news.

Next