Advertisement

ಭಾರತಕ್ಕೆ ಸತತ 2ನೇ ಕಿರೀಟ

12:54 PM Jan 21, 2018 | |

ಶಾರ್ಜಾ(ಯುಎಇ): ಕನ್ನಡಿಗ ಸುನೀಲ್‌ ರಮೇಶ್‌ (93 ರನ್‌) ಭರ್ಜರಿ ಬ್ಯಾಟಿಂಗ್‌ ಪ್ರದರ್ಶನದ ನೆರವಿನಿಂದ ಭಾರತ ತಂಡ 5ನೇ ಅಂಧರ ಏಕದಿನ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ತಂಡವನ್ನು 2 ವಿಕೆಟ್‌ನಿಂದ ಸೋಲಿಸಿ ಚಾಂಪಿಯನ್‌ ಆಗಿದೆ. ಇದು ಭಾರತಕ್ಕೆ ಸಿಕ್ಕ 2ನೇ ಏಕದಿನ ವಿಶ್ವಕಪ್‌, ಇದಕ್ಕೂ ಮುನ್ನ 2014ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾರತ ಅಂತಿಮ ಪಂದ್ಯದಲ್ಲಿ ಇದೇ ಪಾಕಿಸ್ತಾನ ತಂಡವನ್ನು ಸೋಲಿಸಿ ಚಾಂಪಿಯನ್‌ ಆಗಿತ್ತು.

Advertisement

ಇಲ್ಲಿನ ಶಾರ್ಜಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ 40 ಓವರ್‌ಗೆ 8 ವಿಕೆಟ್‌ ಕಳೆದುಕೊಂಡು 307 ರನ್‌ ಬಾರಿಸಿತ್ತು. ಈ ಮೊತ್ತವನ್ನು ಬೆನ್ನು ಹತ್ತಿದ್ದ ಭಾರತ ತಂಡ 38.4 ಓವರ್‌ಗೆ 308 ರನ್‌ ದಾಖಲಿಸಿ ಗೆಲುವು ಸಾಧಿಸಿದೆ.

ಸ್ಪರ್ಧಾತ್ಮಕ ಮೊತ್ತ ದಾಖಲಿಸಿದ ಪಾಕ್‌: ಇದಕ್ಕೂ ಮುನ್ನ ಭಾರತೀಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ಯಶಸ್ವಿಯಾಗಿದ್ದರು. ಪಾಕ್‌ ಪರ ಬಾದರ್‌ ಮುನೀರ್‌ (57) ಸ್ಫೋಟಕ ಅರ್ಧ ಶತಕ ಸಿಡಿಸಿದರು.

ಇದು ಪಾಕ್‌ ಪರ ವೈಯಕ್ತಿಕವಾಗಿ ದಾಖಲಾದ ಗರಿಷ್ಠ ಮೊತ್ತವಾಗಿದೆ. ಆದರೆ ಭಾರತೀಯ ಬೌಲರ್‌ಗಳು ಮುನೀರ್‌ಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿರಲು ಅವಕಾಶ ನೀಡಲಿಲ್ಲ. ಉಳಿದಂತೆ ಪಾಕ್‌ ಪರ ರಿಯಾಸಾತ್‌ ಖಾನ್‌ (48 ರನ್‌), ನಿಸಾರ್‌ ಅಲಿ (47 ರನ್‌) ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದರು.

ಸುನೀಲ್‌ ಭರ್ಜರಿ ಆಟ: ಗುರಿ ಬೆನ್ನುಹತ್ತಿದ ಭಾರತಕ್ಕೆ ಕನ್ನಡಿಗ ಪ್ರಕಾಶ್‌ ಜಯರಾಮಯ್ಯ(44 ರನ್‌) ಮತ್ತು ವೆಂಕಟೇಶ್‌ (35 ರನ್‌) ಭದ್ರ ಅಡಿಪಾಯ ಹಾಕಿದರು. ಮೊದಲ ವಿಕೆಟ್‌ಗೆ 15 ಓವರ್‌ಗೆ 111ರನ್‌ ದಾಖಲಾಗಿತ್ತು. ಆದರೆ 16 ಓವರ್‌ ಪೂರ್ತಿಗೊಳ್ಳುವ ಮುನ್ನವೇ ಇಬ್ಬರು ಬ್ಯಾಟ್ಸ್‌ಮನ್‌ಗಳು ರನೌಟ್‌ಗೆ ಬಲಿಯಾದರು.

Advertisement

ಈ ಹಂತದಲ್ಲಿ ತಂಡದ ಮೊತ್ತ 3 ವಿಕೆಟ್‌ 116 ರನ್‌. ಇದರಿಂದ ಭಾರತ ಆತಂಕಕ್ಕೆ ಒಳಗಾಗಿತ್ತು. ಗೆಲುವು ತಂದಿದ್ದು, ಸುನೀಲ್‌, ಅಜಯ್‌: ನಂತರ ಜತೆಯಾದ ಕನ್ನಡಿಗ ಸುನೀಲ್‌ ಮತ್ತು ನಾಯಕ ಅಜಯ್‌ ಭಾರತಕ್ಕೆ ಗೆಲುವು ತರುವಲ್ಲಿ ಪ್ರಮುಖ ಪಾತ್ರವಹಿಸಿದರು.

ಇಬ್ಬರು ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ತಂಡದ ಮೊತ್ತ 190 ಆಗಿರುವಾಗ 97 ಎಸೆತಕ್ಕೆ 93 ರನ್‌ ಬಾರಿಸಿದ ಸುನೀಲ್‌ ವಿಕೆಟ್‌ ಕಳೆದುಕೊಂಡರು. ಆದರೆ ನಾಯಕ ಅಜಯ್‌ (62 ರನ್‌) ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಅಂತಿಮವಾಗಿ ಭಾರತ 8 ವಿಕೆಟ್‌ ಕಳೆದುಕೊಂಡು ಇನ್ನು 8 ಎಸೆತ ಬಾಕಿ ಇರುವಂತೆಯೇ ಗೆಲುವು ಸಾಧಿಸಿದೆ.

ಮಿಂಚಿದ ಮೂವರು ಕನ್ನಡಿಗರು: ಭಾರತ ತಂಡದಲ್ಲಿ ಮೂವರು ಕನ್ನಡಿಗರು ಸ್ಥಾನ ಪಡೆದು, ಭಾರತ ತಂಡ ಚಾಂಪಿಯನ್‌ ಆಗುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ ಪ್ರಕಾಶ್‌ ಜಯರಾಮಯ್ಯ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನವರು.

ಆಲ್‌ರೌಂಡರ್‌ ಸುನೀಲ್‌ ರಮೇಶ್‌ ಚಿಕ್ಕಮಗಳೂರು ಜಿಲ್ಲೆಯವರು. ಈ ಇಬ್ಬರೂ ಟೂರ್ನಿಯೂದ್ದಕ್ಕೂ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಬೌಲರ್‌ ಬಸಪ್ಪ ಒಡ್ಡಗೊಳ್‌ ಬೆಳಗಾವಿ ಜಿಲ್ಲೆಯವರಾಗಿದ್ದು, ಟೂರ್ನಿಯಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ್ದಾರೆ.

ವಿಶ್ವಕಪ್‌ನಲ್ಲಿ ಭಾರತ ನಡೆದು ಬಂದ ಹಾದಿ
-ಆಸ್ಟ್ರೇಲಿಯಾ ವಿರುದ್ಧ ಮಳೆಯಿಂದ ಪಂದ್ಯ ರದ್ದು
-ಶ್ರೀಲಂಕಾ ವಿರುದ್ಧ 6 ವಿಕೆಟ್‌ ಜಯ
-ಪಾಕಿಸ್ತಾನ ವಿರುದ್ಧ 7 ವಿಕೆಟ್‌ ಜಯ
-ಬಾಂಗ್ಲಾದೇಶ ವಿರುದ್ಧ 10 ವಿಕೆಟ್‌ ಜಯ
-ನೇಪಾಳ ವಿರುದ್ಧ 8 ವಿಕೆಟ್‌ ಜಯ
-ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 7 ವಿಕೆಟ್‌ ಜಯ
-ಫೈನಲ್‌ನಲ್ಲಿ ಪಾಕ್‌ ವಿರುದ್ಧ 2 ವಿಕೆಟ್‌ ಜಯ

ಅಂಧರ ಏಕದಿನ ವಿಶ್ವಕಪ್‌ನಲ್ಲಿ ಜಯಸಾಧಿಸಿದ ಭಾರತ ತಂಡಕ್ಕೆ ಶುಭಾಶಯ. ನಿಮ್ಮ ಸಾಧನೆಗೆ ದೇಶ ಹೆಮ್ಮೆಪಡುತ್ತಿದೆ. ನಿಮ್ಮ ಅದ್ಭುತ ಆಟ ಭಾರತೀಯರಿಗೆ ಸ್ಫೂರ್ತಿ.
-ನರೇಂದ್ರ ಮೋದಿ, ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next