Advertisement

ಕೋವಿಡ್ ವಿರುದ್ಧದ ಜಾಗತಿಕ ಹೋರಾಟದಲ್ಲಿ ಭಾರತದ್ದು ದೊಡ್ಡಣ್ಣನ ಪಾತ್ರ: ಸಚಿವ ಸುಧಾಕರ್

05:00 PM Jan 16, 2022 | Team Udayavani |

ಬೆಂಗಳೂರು: ಕೋವಿಡ್ ಲಸಿಕಾಕರಣದಲ್ಲಿ ಭಾರತ ವಿಶ್ವಕ್ಕೆ ಮಾದರಿಯಾಗುವಂತೆ ಸಾಧನೆ ಮಾಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

Advertisement

ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಒಂದು ವರ್ಷವಾಗಿದೆ. ಭಾರತ 156 ಕೋಟಿ ಡೋಸ್ ಲಸಿಕೆಗಳನ್ನು ನೀಡಿ, ಐತಿಹಾಸಿಕ ಸಾಧನೆ ಮಾಡಿದೆ. ಭಾರತೀಯನಾಗಿ, ಕರ್ನಾಟಕದ ಜನತೆಯ ಪರವಾಗಿ ಪ್ರಧಾನಿಗಳಿಗೆ ಅಭಿನಂದನೆಗಳು ಹಾಗೂ ಲಸಿಕೆಯನ್ನು ಕಂಡು ಹಿಡಿದ ವಿಜ್ಞಾನಿಗಳಿಗೆ ಹಾಗೂ ಸಂಸ್ಥೆಗಳಿಗೂ ಕೃತಜ್ಞತೆಗಳು ಎಂದು ಹೇಳಿದರು.

ಲಸಿಕಾ ಕಾರ್ಯಕ್ರಮದ ಯಶಸ್ಸಿಗೆ ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ದಾದಿಯರು ಹಾಗೂ ಸಿಬ್ಬಂದಿಯ ಕೊಡುಗೆಯೂ ಇದೆ. ಮುಂಚೂಣಿ ಕಾರ್ಯಕರ್ತರು ಮತ್ತು ಅಧಿಕಾರಿಗಳು ಕೂಡ ಈ ಲಸಿಕಾಕರಣದ ಯಶಸ್ಸಿನ ಭಾಗವಾಗಿದ್ದಾರೆ. ಜನರು ಲಸಿಕೆ ಪಡೆದುಕೊಂಡು ಸರ್ಕಾರದ ಹೋರಾಟದ ಜೊತೆ ಕೈ ಜೋಡಿಸಿದ್ದಾರೆ ಎಂದು ಹೇಳಿದರು.

36 ದೇಶಗಳಲ್ಲಿ ಇನ್ನೂ 10% ರಷ್ಟು ಲಸಿಕೆ ನೀಡಲು ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ 99% ರಷ್ಟು ಜನರು ಮೊದಲ ಡೋಸ್ ತೆಗೆದುಕೊಂಡಿದ್ದರೆ, 83% ಜನರು ಎರಡೂ ಡೋಸ್​​ ತೆಗೆದುಕೊಂಡಿದ್ದಾರೆ. ಪ್ರಧಾನಿಗಳು ನಮ್ಮ ದೇಶಕ್ಕೆ ಮಾತ್ರವಲ್ಲ, ವಿಶ್ವದ ಬಡ ರಾಷ್ಟ್ರಗಳಿಗೂ ಲಸಿಕೆ ಸರಬರಾಜು ಮಾಡಿ, ಕೊರೊನಾ ಹೋರಾಟದಲ್ಲಿ ಭಾರತ ದೊಡ್ಡಣ್ಣನ ಪಾತ್ರ ನಿರ್ವಹಿಸುವಂತೆ ಮಾಡಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರ ಕೋವಿಡ್ 3ನೇ ಅಲೆಯನ್ನು ಎದುರಿಸಲು ಸಿದ್ಧತೆ ಮಾಡಿಕೊಂಡಿದೆ. 10 ಸಾವಿರ ಗೃಹ ವೈದ್ಯರ ಜೊತೆ ವೀಡಿಯೊ ಕಾನ್ಫರೆನ್ಸ್ ಮಾಡಿ, ಹೋಮ್ ಐಸೋಲೇಷನ್ ನಲ್ಲಿದ್ದಾಗ ಯಾವ ರೀತಿ ಆರೈಕೆ ಮಾಡಬೇಕು , ಟೆಲಿ ಟ್ರಯಾಜಿಂಕ್ ಹೇಗೆ ಮಾಡಬೇಕು, ಅವರಿಗೆ ನೀಡಬೇಕಾಗಿರುವ ಸಲಹೆ, ಸೂಚನೆಗಳೇನು ಎಂದು ವಿವರಿಸಲಾಗಿದೆ. ಕೆಲವೇ ದಿನಗಳಲ್ಲಿ ಅಂತಿಮ ವರ್ಷದ ವೈದ್ಯಕೀಯ ಕೋರ್ಸ್ ಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳು ಈ ಕಾರ್ಯಕ್ಕೆ ಸೇರಿಕೊಳ್ಳಲಿದ್ದಾರೆ. ಎಷ್ಟೇ ಜನರಿಗೆ ಸೋಂಕು ತಗುಲಿದರೂ ಮನೆಯಲ್ಲೇ ಪರಿಣಾಮಕಾರಿ ಚಿಕಿತ್ಸೆ ಸಿಗುವ ಹಾಗೆ, ತಂತ್ರಜ್ಞಾನ ಹಾಗೂ ದತ್ತಾಂಶಗಳನ್ನು ಉಪಯೋಗ ಮಾಡಿಕೊಂಡು ವಿನೂತನವಾಗಿ 3ನೇ ಅಲೆಯನ್ನು ನಿಯಂತ್ರಣ ಮಾಡುತ್ತೇವೆ ಎಂದು ಹೇಳಿದರು.

Advertisement

ಕೋವಿಡ್ ವಿಚಾರದಲ್ಲಿ ಸ್ವಂತ ಆರೈಕೆ, ಪರೀಕ್ಷೆ ಅಥವಾ ಚಿಕಿತ್ಸೆ ಮಾಡಿಕೊಳ್ಳುವುದು ಕಾನೂನಾತ್ಮಕವಾಗಿ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಸಚಿವರು ಹೇಳಿದರು.

ಅಬಲಾಶ್ರಮ ಕಾರ್ಯಕ್ಕೆ ಮೆಚ್ಚುಗೆ

ಬಸವನಗುಡಿಯ ಅಬಲಾಶ್ರಮದಲ್ಲಿ ‘ಸ್ವಾಸ್ಥ್ಯ’ ಆರೋಗ್ಯ ಸೇವೆಗಳ ಉಪಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು ಸಂಸ್ಥೆಯ ಸೇವಾ ಕಾರ್ಯಗಳು, ಸುವ್ಯಸ್ಥಿತ ನಿರ್ವಹಣೆ ಪ್ರೇರಣಾದಯಾಕ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಅವರು ಕೂಡ ಪುರುಷರಷ್ಟೇ ಸಮಾನ ಅನ್ನುವುದನ್ನು ಬಿಂಬಿಸಲು ಅಬಲಾಶ್ರಮ ಕೆಲಸ ಮಾಡುತ್ತಿದೆ. ಮಹಿಳೆಯರಿಗೆ ಅವಕಾಶ ಕೊಟ್ಟು ಅವರನ್ನು ಸೇರಿಸಿಕೊಂಡು ದೇಶಕಟ್ಟುವ ಪ್ರಯತ್ನ ಮಾಡಿದಾಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಅನ್ನುವ ಮಾತನ್ನು ಅಬಲಾಶ್ರಮ ಪಾಲಿಸುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.

ಆರ್‌ಎಸ್‌ಎಸ್‌ನ ಕ್ಷೇತ್ರೀಯ ಕಾರ್ಯವಾಹರಾದ ಶ್ರೀ ನಾ.ತಿಪ್ಪೇಸ್ವಾಮಿ, ಅಬಲಾಶ್ರಮದ ಅಧ್ಯಕ್ಷರಾದ ಡಾ.ವಿಜಯಲಕ್ಷ್ಮಿ ದೇಶ್ಮಾನೆ, ಕಾರ್ಯದರ್ಶಿ ಶ್ರೀ ಶೇಷಾಜಿ, ಮಾಜಿ ಮೇಯರ್ ಶ್ರೀ ಬಿ.ಎಸ್.ಸತ್ಯನಾರಾಯಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next