ನವದೆಹಲಿ: ನಿವ್ವಳ ನೇರ ತೆರಿಗೆ ಸಂಗ್ರಹ ಪ್ರಮಾಣ ಶೇ.17ರಷ್ಟು ಏರಿದೆ. ಅಂದರೆ ಸಂಗ್ರಹ ಮೊತ್ತ 13.73 ಲಕ್ಷ ಕೋಟಿ ರೂ.ಗಳಾಗಿದೆ. ಇಡೀ ವಿತ್ತೀಯವರ್ಷದ ಪರಿಷ್ಕೃತ ಸಂಗ್ರಹ ಗುರಿಯನ್ನೇ ಪರಿಗಣಿಸಿದರೆ ಶೇ.83ರಷ್ಟು ಮೊತ್ತ ಈಗಾಗಲೇ ಬಂದಾಗಿದೆ. ಹೀಗೊಂದು ಮಹತ್ವದ ಮಾಹಿತಿಯನ್ನು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ನೀಡಿದೆ. ಈ ಮೊತ್ತದಲ್ಲಿ ವೈಯಕ್ತಿಕ ಆದಾಯ ತೆರಿಗೆ ಮತ್ತು ವಾಣಿಜ್ಯ ತೆರಿಗೆಗಳಿವೆ.
ಆದಾಯ ತೆರಿಗೆ ಪಾವತಿದಾರರಿಗೆ ಮರುಪಾವತಿ ಮಾಡಬೇಕಾದ ಮೊತ್ತ 2.95 ಲಕ್ಷ ಕೋಟಿ ರೂ.ಗಳನ್ನು 2022 ಏ.1ರಿಂದ 2023 ಮಾ.10ರ ನಡುವೆ ಬಿಡುಗಡೆ ಮಾಡಲಾಗಿದೆ. 2021-2022ರ ವಿತ್ತೀಯ ವರ್ಷಕ್ಕೆ ಹೋಲಿಸಿದರೆ ಈ ಮೊತ್ತದಲ್ಲೂ ಶೇ.59.44ರಷ್ಟು ಏರಿಕೆಯಾಗಿದೆ.
ತೆರಿಗೆದಾರರಿಗೆ ಮರುಪಾವತಿಯನ್ನು ಮುಗಿಸಿದ ಮೇಲೆ ವಾಣಿಜ್ಯ ಆದಾಯ ತೆರಿಗೆ (ಸಿಐಟಿ), ವೈಯಕ್ತಿಕ ಆದಾಯ ತೆರಿಗೆ (ಪಿಐಟಿ), ಭದ್ರತಾ ವ್ಯವಹಾರಗಳ ತೆರಿಗೆ (ಎಸ್‌ಟಿಟಿ)ಗಳಲ್ಲಿ ಏರಿಕೆಯಾಗಿದೆ.