Advertisement

ಪ್ಲಾಸ್ಟಿಕ್ ತ್ಯಾಜ್ಯದಿಂದ ಮೂಡಿಬಂತು ಬೃಹತ್ ‘ಚರಕ’

09:25 AM Oct 03, 2019 | Hari Prasad |

ನೊಯ್ಡಾ: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150ನೇ ಜನ್ಮಶತಮಾನೋತ್ಸವ ಸಂಭ್ರಕ್ಕೆ ಇನ್ನಷ್ಟು ಮೆರುಗು ನೀಡುವಂತೆ ಹರ್ಯಾಣದ ನೋಯ್ಡಾದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿ ನಿರ್ಮಿಸಲಾದ ಬೃಹತ್ ಚರಕದ ಮಾದರಿ ಅನಾವರಣಗೊಂಡಿದೆ.

Advertisement

ಸುಮಾರು 1650 ಕಿಲೋ ಗ್ರಾಂ ತೂಕವುಳ್ಳ ಈ ಬೃಹತ್ ಚರಕವನ್ನು ಮಂಗಳವಾರದಂದು ಕೇಂದ್ರ  ಸಚಿವೆ ಸ್ಮೃತಿ ಇರಾನಿ ಸ್ಥಳೀಯ ಸಂಸದರು ಮತ್ತು ಶಾಸಕರ ಸಮ್ಮುಖದಲ್ಲಿ ಉದ್ಘಾಟಿಸಿದರು. ಇಲ್ಲಿನ ಮಹಾಮಾಯ ಫ್ಲೈ ಓವರ್ ಬಳಿ ಇರುವ ಸೆಕ್ಟರ್ 94ರಲ್ಲಿ ಈ ಚರಕವನ್ನು ಸ್ಥಾಪಿಸಲಾಗಿದೆ.

ಚರಕವು ಗಾಂಧೀಜಿಯವರ ಸ್ವದೇಶಿ ಪರಿಕಲ್ಪನೆಯ ಪ್ರತೀಕವಾಗಿದೆ. ಈ ಬೃಹತ್ ಚರಕವು 41 ಅಡಿ x 20 ಅಡಿ x 8 ಅಡಿ ವಿಸ್ತೀರ್ಣವನ್ನು ಹೊಂದಿದ್ದು 1250 ಕಿಲೋ ಗ್ರಾಂನಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿಕೊಂಡು ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದು ಸಂಬಂಧಿತ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.


‘ಈ ಬೃಹತ್ ಚರಕವು ನಿರ್ಮಾಣದ ಅಚ್ಚರಿ ಮತ್ತು ಸೌಂದರ್ಯದ ಪ್ರತೀಕ ಮಾತ್ರವಲ್ಲದೇ ಪ್ಲಾಸ್ಟಿಕ್ ಬಳಕೆಯ ನಿಯಂತ್ರಣದ ಕಡೆಗೆ ನಮಗಿರುವ ಬದ್ಧತೆಯ ಪ್ರತೀಕವಾಗಿ ಇದು ಮೂಡಿಬಂದಿದೆ’ ಎಂದು ಸಚಿವೆ ಸ್ಮೃತಿ ಇರಾನಿ ಅವರು ನೋಯ್ಡಾ ಅಧಿಕಾರಿಗಳ ಈ ವಿಶಿಷ್ಟ ಪ್ರಯತ್ನವನ್ನು ಪ್ರಶಂಸುತ್ತಾ ಹೇಳಿದರು.

ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿಕೊಂಡು ನಿರ್ಮಾಣಗೊಂಡಿರುವ ಅತೀ ದೊಡ್ಡ ರಚನೆಯೆಂದು ಈ ಚರಕ ಇಂಡಿಯಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆಗೊಂಡಿದೆ ಎಂದು ನೋಯ್ಡಾ ಅಥಾರಟಿ ಸಿಇಒ ರಿತು ಮಹೇಶ್ವರಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಸಚಿವೆ ಇರಾನಿ ಅವರು ಸೆಕ್ಟರ್ 39ನಲ್ಲಿ ಪಿಂಕ್ ಟಾಯ್ಲೆಟ್ ಗಳನ್ನು ಉದ್ಘಾಡಿಸಿದರು ಹಾಗೂ ತ್ಯಾಜ್ಯ ಸಂಗ್ರಹಕ್ಕಾಗಿ 15 ವಾಹನಗಳನ್ನು ಸೇವೆಗೆ ಮುಕ್ತಗೊಳಿಸಿದರು.

Advertisement

ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮ ಶತಮಾನೋತ್ಸವ ಸಂಭ್ರಮಕ್ಕೆ ಕೇಂದ್ರ ಸರಕಾರವು ದೇಶಾದ್ಯಂತ ಹಲವಾರು ಜನಸ್ನೇಹಿ ಹಾಗೂ ಪರಿಸರ ಸ್ನೇಹಿ ಯೋಜನೆ ಹಾಗೂ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಉದ್ದೇಶವನ್ನು ಹೊಂದಿದೆ. ಈ ಮೂಲಕ ರಾಷ್ಟ್ರಪಿತನ 150ನೇ ಜನ್ಮಶತಮಾನೋತ್ಸವ ಸಂಭ್ರಮವನ್ನು ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next