ಮುಂಬಯಿ: ಸಾರಿಗೆ ವ್ಯವಸ್ಥೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ವರ್ಜಿನ್ ಒನ್ ಹೈಪರ್‌ಲೂಪ್ ಹೈಸ್ಪೀಡ್ ಸಂಚಾರ ವ್ಯವಸ್ಥೆ ಈಗ ಭಾರತಕ್ಕೆ ಕಾಲಿಟ್ಟಿದ್ದು, ಇದರ ಮೊದಲ ಹೆಜ್ಜೆಯಾಗಿ ಮುಂಬಯಿ- ಪುಣೆ ನಡುವೆ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ತಿಂಗಳುಗಳ ಹಿಂದೆ ಸಲ್ಲಿಸಲಾಗಿದ್ದ ಈ ಪ್ರಸ್ತಾವನೆಗೆ ಮಹಾರಾಷ್ಟ್ರ ಸರಕಾರ, ಗುರುವಾರ ಒಪ್ಪಿಗೆ ನೀಡಿದೆ. ಈ ಯೋಜನೆಯು ಸಾರ್ವಜನಿಕರಿಗೆ ಮುಕ್ತವಾ ದಾಗ, ಮುಂಬಯಿ-ಪುಣೆ ನಡುವಿನ ಸಂಚಾರ 35 ನಿಮಿಷಗಳಿಗೆ ಇಳಿಯಲಿದೆ.
ಈ ಯೋಜನೆಯು ಸಾರ್ವಜನಿಕರಿಗೆ ಮುಕ್ತವಾದ ಅನಂತರ, ಮುಂಬಯಿ-ಪುಣೆ ಕಾರಿಡಾರ್‌ನಲ್ಲಿ ಸಾವಿರಾರು ಉದ್ಯೋಗಾವ ಕಾಶ ಹಾಗೂ 2 ಲಕ್ಷ ಕೋಟಿ ರೂ. ಮೌಲ್ಯದ ಆರ್ಥಿಕ ಅನುಕೂಲಗಳನ್ನು ಕಲ್ಪಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಈಗಾಗಲೇ, ಅಮೆರಿಕದ ಮಿಸ್ಸೌರಿ, ಟೆಕ್ಸಾಸ್, ಕರೊಲೊಡೊ, ನಾರ್ತ್ ಕರೋಲಿನಾ, ಸೌದಿ ಅರೇಬಿಯಾ, ಯು.ಎ.ಇನಲ್ಲಿ ಈ ಯೋಜನೆಗಳು ಜಾರಿಗೊಳ್ಳುತ್ತಿದ್ದು, ಭಾರತದಲ್ಲಿ ಜಾರಿಗೊಳ್ಳುತ್ತಿರುವುದು ಇದೇ ಮೊದಲು.
ಯೋಜನೆ ಪ್ರಯಾಣಿಕರಿಗೆ ಮುಕ್ತವಾದಾಗ ಪ್ರಸ್ತುತ ಈ ನಗರಗಳ ನಡುವಿನ ರಸ್ತೆ ಪ್ರಯಾಣ ಮೂರೂವರೆ ಗಂಟೆಗಳಷ್ಟು ಇರುವುದರಿಂದ ಹೈಪರ್‌ಲೂಪ್ ರೈಲು ಮಾರ್ಗವು, ಸಾರ್ವಜನಿಕರಿಗೆ ಅಚ್ಚುಮೆಚ್ಚಿನ ಸಾರಿಗೆಯಾಗಲಿದೆ. ಜತೆಗೆ, ಸದ್ಯಕ್ಕೆ ವಾರ್ಷಿಕ ಮುಂಬಯಿ-ಪುಣೆ ನಡುವೆ 75 ಲಕ್ಷ ಪ್ರಯಾಣಿಕರ ಓಡಾಟವಿದೆ. ಇದು 2026ರ ಹೊತ್ತಿಗೆ 1 ಕೋಟಿ 30 ಲಕ್ಷದಷ್ಟಾಗುವ ಅಂದಾಜಿರುವುದರಿಂದ ಈ ನಗರಗಳ ನಡುವೆಯೇ ಈ ಯೋಜನೆ ಅನುಷ್ಠಾನಗೊಳ್ಳಲು ಸಮ್ಮತಿ ನೀಡಲಾಗಿದೆ.